ಪಿರಿಯಾಪಟ್ಟಣ: ದೇಶಾದ್ಯಂತ ಹಿಂದೂ ಕಾರ್ಯಕರ್ತರು, ಸಂಸದರು ಹಾಗೂ ಶಾಸಕರನ್ನು ಹತ್ಯೆಗೈಯಲು ಸಂಚು ರೂಪಿಸುತ್ತಿರುವ ಎಸ್‌ಡಿಪಿಐ, ಕೆಎಫ್ಡಿ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಪಿರಿಯಾಪಟ್ಟಣ ತಾಲೂಕು ಬಿಜೆಪಿ ಘಟಕದ ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಶನಿವಾರ ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಆಘಾತಕಾರಿ ಮಾಹಿತಿ: ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಡಾ.ಪ್ರಕಾಶ್ ಬಾಬುರಾವ್ ಮಾತನಾಡಿ, ಇತ್ತೀಚಿಗೆ ಬೆಂಗಳೂರಿನಲ್ಲಿ ಜರುಗಿದ ಪೌರತ್ವ ತಿದ್ದುಪಡಿ ಕಾನೂನು ಜಾಗೃತಿ ಕಾರ್ಯಕ್ರಮ ಮುಗಿಸಿ ತೆರಳುವಾಗ ಆರ್‌ಎಸ್‌ಎಸ್ ಕಾರ್ಯಕರ್ತ ವರುಣ್ ಮೇಲೆ ಆರು ಜನರ ತಂಡ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದ ಆಘಾತಕಾರಿ ಮಾಹಿತಿ ರಾಜ್ಯ ಪೊಲೀಸ್ ಬಹಿರಂಗಪಡಿಸಿದ್ದು ಹಾಗೂ ವಿಚಾರಣೆ ವೇಳೆ ಸಂಸದ ತೇಜಸ್ವಿ ಸೂರ್ಯ ಹಾಗೂ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ರೂಪಿಸಿದ್ದು ಬೆಳಕಿಗೆ ಬಂದಿರುವುದಲ್ಲದೆ ಈ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ ಎಂದರು.
ಹಿಂದೂಪರ ಸಂಘಟನೆ ಒತ್ತಾಯ: ರಾಜ್ಯದಲ್ಲಿ ಹಿಂದೆ ಎಸ್‌ಡಿಪಿಐ, ಕೆಎಫ್ಡಿ ಮತ್ತು ಪಿಎಫ್ಐ ಸಂಘಟನೆಗಳು ನೇರವಾಗಿ ಭಾಗಿಯಾಗಿರುವುದು ಹಲವಾರು ಸಂದರ್ಭಗಳಲ್ಲಿ ಸಾಬೀತಾಗಿದ್ದರೂ ಸಹ ಸಕ್ರಿಯವಾಗಿ ದೇಶದಲ್ಲಿ ಭಯೋತ್ಪಾದನೆ ಮತ್ತು ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ನಾಡಿನಲ್ಲಿ ಅಶಾಂತಿ ನಿರ್ಮಾಣ ಮಾಡಲು ಮುಂದಾಗಿದ್ದು ಕಂಡುಬಂದಿದೆ. ಆದ್ದರಿಂದ ರಾಜ್ಯಪಾಲರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಎಸ್‌ಡಿಪಿಐ, ಕೆಎಫ್ಡಿ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವಂತೆ ಶಿಫಾರಸು ಮಾಡಿ ದೇಶದಲ್ಲಿ ಶಾಂತಿ ನಿರ್ಮಾಣವಾಗುವುದನ್ನು ಹಾಗೂ ಅಮಾಯಕರು ಹತ್ಯೆಗೀಡಾಗುವುದನ್ನು ತಪ್ಪಿಸಬೇಕೆಂದು ತಾಲೂಕು ಬಿಜೆಪಿ ಘಟಕ ಹಾಗೂ ಹಿಂದೂಪರ ಸಂಘಟನೆಗಳು ಒತ್ತಾಯಿಸುತ್ತವೆ ಎಂದು ಮನವಿ ಸಲ್ಲಿಸಿದರು.
ಮಾಜಿ ಶಾಸಕ ಬಸವರಾಜು, ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಸಿ.ವೀರಭದ್ರ, ಯುವ ಮೋರ್ಚಾ ಘಟಕದ ಅಧ್ಯಕ್ಷ ಪಿ.ಟಿ.ಲಕ್ಷ್ಮೀನಾರಾಯಣ, ಸ್ಲಂ ಮೋರ್ಚಾದ ಅಧ್ಯಕ್ಷ ಷಣ್ಮುಖ, ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿ ಶಿವರಾಮೇಗೌಡ, ನಗರ ಘಟಕದ ಅಧ್ಯಕ್ಷ ಟಿ.ರಮೇಶ್, ಮುಖಂಡರಾದ ಮಾಗಳಿ ಸ್ವಾಮಿ, ರಾಜೇಗೌಡ, ಅನಿಲ…, ಕೊಪ್ಪ ಸೋಮಣ್ಣ, ಸುಂದರ, ಪ್ರಸಾದ್, ಯಾದವಚಾರ್, ಮೀಸೆ ರವಿ ಚೆನ್ನಬಸಪ್ಪ, ಬಿಜೆಪಿ ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಇತರರು ಇದ್ದರು.