ನವದೆಹಲಿ: ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ತಡೆಯುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರಬೇಕೆಂಬ ಸುಮಾರು ಎರಡು ದಶಕಗಳ ಹಳೆಯ ಪ್ರಸ್ತಾವನೆ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಇದನ್ನೂ ಓದಿ:ಕೆ.ಎಸ್ ಈಶ್ವರಪ್ಪ ಸಂಬಂಧಿ ಮನೆಯಲ್ಲಿ ವಿದೇಶಿ ಡಾಲರ್, ಲಕ್ಷಾಂತರ ರೂ. ನಗ-ನಗದು ಕಳವು
ಒಬ್ಬರು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ಕಾನೂನಿಗೆ ತಿದ್ದುಪಡಿ ಮಾಡಬೇಕೆಂದು ಚುನಾವಣಾ ಆಯೋಗ ಒತ್ತಾಯಿಸಿದೆ. ಒಂದು ವೇಳೆ ಕಾನೂನಿಗೆ ತಿದ್ದುಪಡಿ ತರಲು ಸಾಧ್ಯವಾಗದಿದ್ದಲ್ಲಿ ರಾಜೀನಾಮೆ ನೀಡಿ ಕ್ಷೇತ್ರದಲ್ಲಿ ಬಲವಂತದ ಉಪಚುನಾವಣೆಗೆ ಕಾರಣರಾಗುವವರಿಗೆ ಭಾರೀ ಮೊತ್ತದ ದಂಡ ವಿಧಿಸಬೇಕೆಂದು ಕೇಂದ್ರ ಚುನಾವಣಾ ಆಯೋಗ ಸಲಹೆ ನೀಡಿದೆ.
ಇತ್ತೀಚೆಗೆ ಕಾನೂನು ಸಚಿವಾಲಯದಲ್ಲಿ ಶಾಸಕಾಂಗ ಕಾರ್ಯದರ್ಶಿ ಜತೆಗಿನ ಸಂವಹನದ ಸಂದರ್ಭದಲ್ಲಿ ಮುಖ್ಯಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು 2004ರಲ್ಲಿ ಮೊದಲ ಬಾರಿ ಪ್ರಸ್ತಾಪಗೊಂಡಿದ್ದ ವಿಷಯವನ್ನು ಮುಂದಿಟ್ಟಿರುವುದಾಗಿ ವರದಿ ತಿಳಿಸಿದೆ.
ಚುನಾವಣಾ ಕಾಯ್ದೆ ಪ್ರಕಾರ ಒಬ್ಬ ಅಭ್ಯರ್ಥಿಯು ಸಾರ್ವತ್ರಿಕ ಅಥವಾ ಉಪಚುನಾವಣೆ ಸಂದರ್ಭದಲ್ಲಿ ಎರಡು ಭಿನ್ನ ಕ್ಷೇತ್ರಗಳಿಂದ ಸ್ಪರ್ಧಿಸಲು ಅನುಮತಿ ನೀಡಿದೆ. ಒಂದು ವೇಳೆ ಎರಡೂ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲುವು ಸಾಧಿಸಿದರೆ, ಆ ವ್ಯಕ್ತಿ ಒಂದು ಕ್ಷೇತ್ರವನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ ಎಂದು ವರದಿ ವಿವರಿಸಿದೆ.
1996ರಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಒಬ್ಬ ವ್ಯಕ್ತಿ ಎರಡಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಿತ್ತು. ಈ ತಿದ್ದುಪಡಿಗೂ ಮುನ್ನ ಅಭ್ಯರ್ಥಿಯೂ ಎಷ್ಟು ಕ್ಷೇತ್ರಗಳಲ್ಲಿ ಬೇಕಾದರು ಸ್ಪರ್ಧಿಸಬಹುದಾಗಿತ್ತು.
ಒಂದು ವೇಳೆ ಪ್ರಸ್ತುತ ಚಾಲ್ತಿಯಲ್ಲಿರುವ ಕಾನೂನನ್ನೇ ಮುಂದುವರಿಸುವುದಾದಲ್ಲಿ, ಒಂದು ವೇಳೆ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರೆ, ತಾನು ತೆರವುಗೊಳಿಸುವ ಕ್ಷೇತ್ರದ ಉಪಚುನಾವಣೆಯ ವೆಚ್ಚವನ್ನು ಭರಿಸಬೇಕು ಎಂದು ಚುನಾವಣಾ ಆಯೋಗ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ದಂಡದ ಮೊತ್ತವನ್ನು ವಿಧಾನಸಭೆ ಮತ್ತು ವಿಧಾನಪರಿಷತ್ ಚುನಾವಣೆಗೆ 5 ಲಕ್ಷ ಹಾಗೂ ಲೋಕಸಭಾ ಚುನಾವಣೆಗೆ 10 ಲಕ್ಷ ರೂಪಾಯಿ ಎಂದು ಪ್ರಸ್ತಾಪಿಸಲಾಗಿದೆ. ಆದರೆ ದಂಡದ ಮೊತ್ತವನ್ನು ಸೂಕ್ತವಾಗಿ ಪರಿಷ್ಕರಿಸಬೇಕಾದ ಅಗತ್ಯವಿದೆ ಎಂದು ಚುನಾವಣಾ ಆಯೋಗ ಆಶಾಭಾವ ವ್ಯಕ್ತಪಡಿಸಿದೆ.