ಬೆಂಗಳೂರು: ಆಹಾರ ಸುರಕ್ಷೆ ಹಾಗೂ ಗುಣಮಟ್ಟದ ಇಲಾಖೆ ಪರೀಕ್ಷೆ ಒಳಪಡಿಸಲಾದ ಪಾನಿಪುರಿ(Pani puri) ಮಾದರಿಯ ವರದಿಯಲ್ಲಿ ಹಾನಿಕಾರಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಸೋಮವಾರ ಸಭೆ ನಡೆಸಿ ಅಸುರಕ್ಷಿತ ಪಾನಿಪೂರಿ ಮಾರಾಟವನ್ನು ನಿಷೇಧಿಸುವ ಸಾಧ್ಯತೆಗಳಿವೆ. ಪಾನಿಪೂರಿ(Pani puri) ತಯಾರಿಗೆ ಬಳಸುವ ಸಾಸ್ ನಿಷೇಧಕ್ಕೆ ಒಳಪಡುವ ಸಾಧ್ಯತೆಯಂತೂ ದಟ್ಟವಾಗಿದೆ.
ಆಹಾರ ಮತ್ತು ಸುರಕ್ಷೆ ಗುಣಮಟ್ಟ ಇಲಾಖೆ ರಾಜ್ಯಾದ್ಯಂತ 78 ಪಾನಿಪುರಿಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಅವುಗಳಲ್ಲಿ 18 ಮಾದರಿಗಳು ಮನುಷ್ಯರು ಸೇವಿಸಲು ಅಯೋಗ್ಯ ಎಂಬ ವರದಿ ಇಲಾಖೆಯ ಅಧಿಕಾರಿಗಳ ಕೈ ಸೇರಿಸಿದೆ.
ಹೀಗಾಗಿ ಈ ಸಂಬಂಧ ಸೋಮವಾರ ನಡೆಸುವ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಪಾನಿಪೂರಿ ಹಾಗೂ ಮಸಾಲಪೂರಿಯಲ್ಲಿ ರುಚಿ ಹೆಚ್ಚಿಸುವ ಖಟ್ಟಾ-ಮೀಠಾ ಸಾಸ್‌ನಲ್ಲಿ ಆರೋಗ್ಯಕ್ಕೆ ಹಾನಿಕರವಾದ ಕೆಮಿಕಲ್ ಇರುವುದು ವರದಿಯಾಗಿದೆ. ಇದರಲ್ಲಿ ಕೃತಕ ಬಣ್ಣ ಬಳಕೆಯಾಗುತ್ತಿದೆ. ಇದರ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಇನ್ನು ಪೂರಿಯ ಮಾದರಿಗಳು ಮೈಕ್ರೋ ಬ್ಯಾಕ್ಟೀರಿಯ ಪರೀಕ್ಷೆ ಒಳಪಡಿಸಿದ್ದು, ಇದರಲ್ಲಿ ಯಾವುದೇ ಬ್ಯಾಕ್ಟೀರಿಯಾ ಇರುವ ವರದಿಯಾಗಿಲ್ಲ ಎಂದು ತಿಳಿದುಬಂದಿದೆ.
ವಿಶೇಷವಾಗಿ ಕೃತಕ ಬಣ್ಣಕ್ಕೆ ಬಳಕೆಯಾಗುವ “ಸನ್‌ಸೆಟ್ ಯಲ್ಲೋ’ ಅಂಶವು ಚಿಕ್ಕ ಮಕ್ಕಳ ಜೀರ್ಣಾಂಗದ ಮೇಲೆ ಪರಿಣಾಮ ಬೀರಿ, ಹೈಪರ್ ಆಕ್ವೀವ್‌ನೆಸ್‌ಗೆ ಕಾರಣವಾಗುತ್ತದೆ. ದೊಡ್ಡವರ ಆರೋಗ್ಯದ ಮೇಲೆಯೂ ನೇರವಾದ ದುಷ್ಪರಿಣಾಮ ಬೀರಲಿದೆ.