ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ನಿಷೇಧವನ್ನು ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿರುವ ಕೇಂದ್ರ ಸರಕಾರ, ಸಮರ್ಪಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಬಳಿಕವೇ ಸಕಾರಣವಾಗಿಯೇ ನಿಷೇಧ ಹೇರಲಾಗಿದೆ ಎಂದು ಪ್ರತಿಪಾದಿಸಿದೆ.
ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದುವ ಮೂಲಕ ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದೆ ಎಂಬ ಆರೋಪದ ಮೇಲೆ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಂಘಟನೆಯ ನಾಸಿರ್ ಅಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಕೇಂದ್ರ ಸರಕಾರ ತನ್ನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದೆ.
ವಿಚಾರಣೆ ವೇಳೆ ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪಿಎಫ್‌ಐ ಸಂಘಟನೆ ಭಯೋತ್ಪಾದಕ ಸಂಘಟನೆಗಳ ಜತೆ ಕೈ ಜೋಡಿಸಿ ದೇಶದಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುವುದಲ್ಲದೆ, ಅಂತಹ ಕೃತ್ಯಗಳಿಗೆ ಕುಮ್ಮಕ್ಕು ಸಹ ನೀಡುತ್ತಿದೆ. ಎಲ್ಲ ಆಧಾರಗಳನ್ನು ಸಂಗ್ರಹಿಸಿದ ಬಳಿಕವೇ ನಿಷೇಧ ಹೇರಲಾಗಿದೆ.
ಕಾರಣವಿಲ್ಲದೆ ನಿಷೇಧ ಮಾಡಲಾಗಿದೆ ಎಂಬ ವಾದ ಒಪ್ಪಿತವಲ್ಲ. ಇದರಲ್ಲಿ ಕಾನೂನು ಬಾಹಿರ ಎನ್ನುವುದೇನೂ ಇಲ್ಲ. ಆದ್ದರಿಂದ ಅರ್ಜಿಯನ್ನು ಪರಿಗಣಿಸಬಾರದು ಎಂದು ಕೇಂದ್ರ ಸರಕಾರದ ನಿರ್ಧಾರಕ್ಕೆ ಸಮರ್ಥನೆ ನೀಡಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಜಯಕುಮಾರ್ ಎಸ್. ಪಾಟೀಲ್, ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ)- 1967ರ ಸೆಕ್ಷನ್ 3ರ, ಉಪ ನಿಯಮ 3ರಡಿ ಪಿಎಫ್ಐ ಸಂಘಟನೆ ನಿಷೇಧಿಸಿರುವುದು ಕಾನೂನುಬಾಹಿರ. ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದರು.
ಪಿಎಫ್ಐ ಸಂಘಟನೆಗೆ ತನ್ನ ವಾದ ಮಂಡಿಸಲೂ ಅವಕಾಶ ನೀಡದೆ ಏಕಾಏಕಿ ನಿಷೇಧದ ಆದೇಶ ಹೊರಡಿಸಲಾಗಿದೆ. ಯುಎಪಿಎ ಕಾಯ್ದೆಗೆ ವಿರುದ್ಧವಾಗಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕೆಂದು ಕೋರಿದರು. ವಾದ-ಪ್ರತಿವಾದ ಆಲಿಸಿ ಸೋಮವಾರ ವಿಚಾರಣೆಯನ್ನು ಪೂರ್ಣಗೊಳಿಸಿದ ಹೈಕೋರ್ಟ್ ತೀರ್ಪನ್ನು ಕಾದಿರಿಸಿತು.