ನವದೆಹಲಿ: ಬಾಂಗ್ಲಾದೇಶದಲ್ಲಿ ಹಲವು ವಿಧ್ವಂಸಕ ಕೃತ್ಯವೆಸಗಿರುವ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ್(ಜೆಎಂಬಿ) ಉಗ್ರ ಸಂಘಟನೆಗೆ ಭಾರತ ಸರ್ಕಾರ ನಿಷೇಧ ಹೇರಿದೆ. ಈ ಸಂಘಟನೆಯು ಭಾರತದಲ್ಲೂ ಭಯೋತ್ಪಾದಕ ಕೃತ್ಯಕ್ಕೆ ಪ್ರೇರಣೆ ನೀಡುತ್ತಿದ್ದು, ಯುವಕರನ್ನು ಉಗ್ರ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುವ ಕೆಲಸದಲ್ಲಿ ನಿರತವಾಗಿದೆ. ಹೀಗಾಗಿ ಇದಕ್ಕೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
2016ರಲ್ಲಿ ಢಾಕಾದ ಕೆಫೆಯೊಂದರಲ್ಲಿ ಸ್ಫೋಟ ನಡೆಸಿದ್ದ ಜೆಎಂಬಿ 17 ವಿದೇಶಿಯರು ಸೇರಿದಂತೆ 22 ಮಂದಿಯನ್ನು ಹತ್ಯೆಗೈದಿತ್ತು. ತದನಂತರ ಈದ್ ಹಬ್ಬಕ್ಕೆ ಭದ್ರತೆ ನೀಡುತ್ತಿದ್ದ ಪೊಲೀಸರ ಮೇಲೆ ದಾಳಿ ನಡೆಸಿ ಮೂವರನ್ನು ಹತ್ಯೆಗೈದಿತ್ತು.
Advertisement
2014ರ ಅಕ್ಟೋಬರ್ 2ರಂದು ಪಶ್ಚಿಮ ಬಂಗಾಳದ ಬದ್ರ್ವಾನ್‌ನಲ್ಲಿ ಮತ್ತು 2018ರ ಜ.19ರಂದು ಬುದ್ಧಗಯಾದಲ್ಲಿ ನಡೆದ ಸ್ಫೋಟದಲ್ಲೂ ಈ ಸಂಘಟನೆಯ ಕೈವಾಡವಿತ್ತು ಎಂದು ಭಾರತದ ತನಿಖಾ ಸಂಸ್ಥೆಗಳು ಹೇಳಿದ್ದವು. ಅಸ್ಸಾಂನಲ್ಲಿ ಈ ಸಂಘಟನೆಗೆ ಸೇರಿದ 56 ಮಂದಿಯನ್ನು ಬಂಧಿಸಲಾಗಿತ್ತು. ಈಗ ಜಮಾತ್-ಉಲ್- ಮುಜಾಹಿದೀನ್ ಬಾಂಗ್ಲಾದೇಶ್ ಅಥವಾ ಜಮಾತ್-ಉಲ್- ಮುಜಾ ಹಿದೀನ್ ಇಂಡಿಯಾ ಅಥವಾ ಜಮಾತ್-ಉಲ್-ಮುಜಾಹಿದೀನ್ ಹಿಂದುಸ್ಥಾನ್ ಎಂಬ ಹೆಸರಿರುವ ಸಂಘಟನೆ ಹಾಗೂ ಅದರ ಎಲ್ಲ ಅಂಗ ಸಂಸ್ಥೆಗಳನ್ನೂ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.