Advertisement

ಅಕ್ರಮ ಮರಳು ಸಾಗಾಣಿಕೆ ತಡೆ: ಡಿಸಿ ಸೂಚನೆ

12:09 AM Aug 22, 2022 | Team Udayavani |

ಮಂಗಳೂರು: ಅಕ್ರಮ ಮರಳು ಸಾಗಾಣಿಕೆ ತಡೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪೊಲೀಸರೊಂದಿಗೆ ತಂಡವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು ಉಳ್ಳಾಲ, ಕೋಟೆ ಪುರ, ಸೋಮೇಶ್ವರ, ಉಚ್ಚಿಲ, ಪೇರಿಬೈಲು,ತಲಪಾಡಿ ಸೇರಿದಂತೆ ವಿವಿಧೆಡೆ ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ವರದಿಯಾಗುತ್ತಿದೆ, ಅದನ್ನು ತಡೆಗಟ್ಟಲು ಜಿಲ್ಲಾಡಳಿತ ಅತಿ ಕಠಿನ ಕ್ರಮಗಳನ್ನು ಕೈಗೊಂಡಿದ್ದು, ಅಧಿಕಾರಿಗಳ ನಿಯೋಜನೆ ಹಾಗೂ ಸಿಸಿಟಿವಿಗಳನ್ನು ಅಳವಡಿಸಲಾಗಿದೆ, ಈ ಸ್ಥಳಗಳಲ್ಲಿ ಅಳವಡಿಸ ಲಾಗಿರುವ ಸಿಸಿಟಿವಿಗಳನ್ನು ಪರಿಶೀಲಿಸಬೇಕು, ತಡರಾತ್ರಿ ಸಂಚರಿಸುವ ವಾಹನಗಳ ಮೇಲೆ ಕಣ್ಣಿಡಬೇಕು, ಮುಖ್ಯವಾಗಿ ಪೊಲೀಸ್‌ ಚೆಕ್‌ ಪೋಸ್ಟ್‌ಗಳಲ್ಲಿ ಮತ್ತಷ್ಟು ಎಚ್ಚರ ವಹಿಸಬೇಕು ಎಂದರು.

ಅಕ್ರಮ ಮರಳುಗಾರಿಕೆಯಾಗುವ ಸ್ಥಳಗಳಲ್ಲಿ ಅಲ್ಲಿನ ಗ್ರಾಮ ಸಹಾಯಕ, ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕರು ಎಚ್ಚರದಿಂದಿದ್ದು, ಆ ಬಗ್ಗೆ ಸಂಬಂಧಿಸಿದವರಿಗೆ ಕೂಡಲೇ ವರದಿ ಮಾಡಬೇಕು ಎಂದವರು ನಿರ್ದೇಶನ ನೀಡಿದರು.
ಮಂಗಳೂರು ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಮಾತನಾಡಿ ಅಕ್ರಮ ಮರಳುಗಾರಿಕೆ ತಡೆಯಲು ಅಳವಡಿಸಿರುವ ಸಿಸಿಟಿವಿಗಳ ಫೂಟೇಜ್‌ ಅನ್ನು ಪರಿಶೀಲಿಸಿ, ಡಿಸಿಪಿಗಳು ವರದಿ ನೀಡುವಂತೆ ಸೂಚಿಸಿದ ಅವರು, ಸಿಸಿಟಿವಿಗಳನ್ನು ನೋಡಿ ಅಕ್ರಮ ಮರಳು ಸಾಗಾಣಿಕೆ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಜಿಲ್ಲೆಯ ಯಾವೆಲ್ಲ ಸ್ಥಳಗಳಲ್ಲಿ ಅಕ್ರಮ ಮರಳು ಶೇಖರಣೆಯಾಗಿದೆ ಎಂಬುದನ್ನು ಪತ್ತೆ ಮಾಡಿ, ಪ್ರಕರಣವನ್ನು ದಾಖಲಿಸಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ. ಸಿಇಒ ಡಾ| ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಭಗವಾನ್‌ ಸೋನಾವಣೆ, ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್‌ ಮೋಹನ್‌, ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಮಹೇಶ್‌ ಕುಮಾರ್‌, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಲಿಂಗರಾಜು, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಹರೀಶ್‌ ಕುಮಾರ್‌ ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next