Advertisement

ಬನ್‌ ಕಿ ಬಾತ್‌ : ನಿಮಿಷದಲ್ಲಿ ಹೇರ್‌ಸ್ಟೈಲ್‌

09:04 AM May 02, 2019 | Hari Prasad |

ಬನ್‌ ಎಂದಾಗ ನೆನಪಿಗೆ ಬರುವುದು ಚಹಾದ ಜೊತೆ ಸೇವಿಸುವ ಬನ್‌. ಆದರೆ ತಲೆಗೂದಲು ಕಟ್ಟುವ ತುರುಬಿಗೂ ಇಂಗ್ಲಿಷ್‌ನಲ್ಲಿ “ಬನ್‌’ ಎಂದು ಕರೆಯಲಾಗುತ್ತದೆ. ನೋಡಲು ತಿನ್ನುವ ಬನ್‌ನಂತೆಯೇ ಕಾಣುವ ಕಾರಣ ಈ ಕೇಶವಿನ್ಯಾಸಕ್ಕೆ “ಬನ್‌ ಹೇರ್‌ಸ್ಟೈಲ್‌’ ಎಂದು ಕರೆಯಲಾಗುತ್ತದೆ.

Advertisement

ಬೇಸಿಗೆಯಲ್ಲಿ ಜಡೆ, ಜುಟ್ಟು ಕಟ್ಟಿಕೊಳ್ಳಲು ಅಥವಾ ತಲೆಗೂದಲು ಬಿಟ್ಟು ಓಡಾಡಲು ಸಂಕಟವಾದಾಗ ಮಹಿಳೆಯರು ತುರುಬು ಕಟ್ಟಿಕೊಳ್ಳುತ್ತಾರೆ. ಈ ತುರುಬು ಹೇರ್‌ಸ್ಟೈಲ್‌, ಸೆಕೆಯಿಂದ ಆರಾಮ ನೀಡುತ್ತದೆ ಮತ್ತು ನಿಮ್ಮ ಮುಖಕ್ಕೂ ಹೊಸ ಲುಕ್‌ ನೀಡುತ್ತದೆ.

ಸಾಮಾನ್ಯವಾಗಿ ತುರುಬು ಎಂದಾಕ್ಷಣ ಬೋರಿಂಗ್‌ ಎನ್ನುವ ಅಭಿಪ್ರಾಯ ನಮ್ಮ ನಡುವೆ ಇದೆ. ತುರುಬು ಕಟ್ಟಿಕೊಂಡರೆ, ಸ್ಟೈಲಿಶ್‌ ಆಗಿ ಕಾಣಿಸುವುದಿಲ್ಲ ಅಂತ ಅಂದುಕೊಳ್ಳದಿರಿ. ಸರಳವಾದ ತುರುಬಿಗೂ ಟ್ವಿಸ್ಟ್ ನೀಡಿ ಅದರ ಮೆರಗು ಹೆಚ್ಚಿಸಬಹುದು. ಜಡೆಯಂತೆ ಕಟ್ಟಿಕೊಂಡು ನಂತರ ಅದನ್ನು ತುರುಬಿನ ಥರ ಕಟ್ಟಿಕೊಳ್ಳಬಹುದು. ಜುಟ್ಟಿನಂತೆಯೂ ಕಟ್ಟಿಕೊಂಡು ನಂತರ ಅದನ್ನು ತುರುಬಿನ ಥರ ಕಟ್ಟಿಕೊಳ್ಳಬಹುದು.

ಬಗೆ ಬಗೆಯ ತುರುಬು
ಕೇವಲ ಮದುವೆ, ಹಬ್ಬ, ಹರಿದಿನಗಳಲ್ಲಿ ತುರುಬು ಕಟ್ಟಿ ಅದಕ್ಕೆ ಅಂದದ ಹೇರ್‌ ಆಕ್ಸೆಸರೀಸ್‌ ಬಳಸಬೇಕೆಂದಿಲ್ಲ. ಆಫೀಸ್‌ಗೆ, ಕಾಲೇಜಿಗೆ, ಶಾಪಿಂಗ್‌, ಸಿನಿಮಾ, ಹೊಟೇಲ್‌ ಮತ್ತು ಇತರ ಸ್ಥಳಗಳಿಗೂ ಸ್ಟೈಲಿಶ್‌ ಬನ್‌ ಅಂದರೆ ತುರುಬು ಕಟ್ಟಿಕೊಂಡು ಹೋಗಬಹುದು. ಇದಕ್ಕೆ ಮುತ್ತು, ಕಲ್ಲು, ಹೊಳೆಯುವ ವಸ್ತು, ಬಣ್ಣಬಣ್ಣದ ಟಿಯಾರ, ಹೂವಿನ ಆಕೃತಿಯ ಕ್ಲಿಪ್‌ಗ್ಳು, ಹೇರ್‌ ಬ್ಯಾಂಡ್‌, ರಿಬ್ಬನ್‌ ಮತ್ತು ಬೇರೆ ಆಕ್ಸೆಸರೀಸ್‌ ಬೇಕಾಗಿಲ್ಲ. ದಿನನಿತ್ಯ ಬಳಸುವ ರಬ್ಬರ್‌ ಬ್ಯಾಂಡ್‌ ಮತ್ತು ಸಾಮಾನ್ಯ ಹೇರ್‌ಕ್ಲಿಪ್‌ಗ್ಳಿದ್ದರೆ ಸಾಕು.


ಹೇರ್‌ ಸ್ಪ್ರೇ, ಸೀರಮ್, ಎಕ್ಸಟೆನ್ಷನ್‌, ವಿಗ್‌ ಅಥವಾ ಚೌರಿ ಬಳಸದೆಯೂ ತುರುಬು ಕಟ್ಟಿಕೊಳ್ಳಬಹುದು. ಶೋಲ್ಡರ್‌ ಲೆಂತ್‌ ಹೇರ್‌ (ಭುಜಕ್ಕೆ ತಾಗುವಷ್ಟು ಉದ್ದದ ತಲೆ ಕೂದಲು) ಉಳ್ಳವರೂ ತುರುಬು ಕಟ್ಟಿಕೊಳ್ಳಬಹುದು. ಬಗೆಬಗೆಯ ತುರುಬು ಕಟ್ಟಿಕೊಳ್ಳುವುದು ಹೇಗೆ ಎಂದು ಯೂಟ್ಯೂಬ್‌ ವಿಡಿಯೋಗಳನ್ನು ನೋಡಿ ತಿಳಿದುಕೊಳ್ಳಬಹುದು.

ಮಾಡ್ರನ್‌ ದಿರಿಸಿಗೂ ಒಪ್ಪುತ್ತೆ
ಈ ಸಾಂಪ್ರದಾಯಿಕ ಕೇಶ ವಿನ್ಯಾಸ, ಹೊಸ ಮೆರುಗಿನ ಜೊತೆ ಮಾರುಕಟ್ಟೆಯಲ್ಲಿ ಮತ್ತೆ ಲಗ್ಗೆ ಹಾಕಿದೆ. ಎಲ್ಲ ಇಂಡಿಯನ್‌ ಉಡುಪಿನ ಜೊತೆ ಚೆನ್ನಾಗಿಯೇ ಕಾಣಿಸುತ್ತವೆ. ಇತರೆ ಎಲ್ಲ ಆಭರಣಗಳ ಜೊತೆಗೂ ಒಪ್ಪುತ್ತವೆ. ಆಶ್ಚರ್ಯವೆಂದರೆ, ಈ ತುರುಬು ಕೇಶ ವಿನ್ಯಾಸ, ಪಾಶ್ಚಾತ್ಯ ಉಡುಗೆ ಜೊತೆಗೂ ಚೆನ್ನಾಗಿಯೇ ಕಾಣುತ್ತದೆ.

Advertisement

ವಿಶೇಷ ಕೇಶಾಲಂಕಾರ ಮಾಡಿಕೊಳ್ಳುವಾಗ ಸಮಯದ ಅಭಾವವಿದ್ದರೆ, ಗಡಿಬಿಡಿಯಲ್ಲಿ ತುರುಬು ಕೇಶಾಲಂಕಾರ ನೆರವಿಗೆ ಬರುತ್ತದೆ! ಕೇಶ ವಿನ್ಯಾಸ ಸರಳವಾಗಿದ್ದರೂ ಎಲ್ಲರ ಗಮನ ಸೆಳೆಯಬಲ್ಲ ಈ ತುರುಬು, ನೀವು ಉಟ್ಟ ಉಡುಪಿನ ಸೊಬಗನ್ನೂ ಹೆಚ್ಚಿಸುತ್ತದೆ. ಎಲ್ಲಕ್ಕಿಂತ ದೊಡ್ಡ ಲಾಭ ಏನೆಂದರೆ, ನೀವು ಟ್ರೆಂಡಿ ಮತ್ತು ಸ್ಟೈಲಿಶ್‌ ಆಗಿ ಕಾಣಬಹುದು. ಏಕೆಂದರೆ, ಈ ತುರುಬು ಅತ್ತ ಸಾಂಪ್ರದಾಯಿಕವೂ ಹೌದು, ಇತ್ತ ಆಧುನಿಕವೂ ಹೌದು, ಹಾಗೂ ಹಾಲಿವುಡ್‌ ತಾರೆಯರು, ಬಾಲಿವುಡ್‌ ನಟಿಯರು ಮತ್ತು ಕನ್ನಡ ಚಿತ್ರರಂಗದ ಕಲಾವಿದೆಯರಿಗೂ ಅಚ್ಚುಮೆಚ್ಚು ಈ ತುರುಬು.

ಆಲ್ಬಂ ಚೆಕ್‌ ಮಾಡಿ
ತುರುಬು ಕಟ್ಟಿಕೊಳ್ಳುವ ಕೇಶ ವಿನ್ಯಾಸ ನಿನ್ನೆ ಮೊನ್ನೆ ಬಂದಿದ್ದಲ್ಲ. ಅದೆಷ್ಟೋ ವರ್ಷಗಳ ಹಿಂದಿನಿಂದಲೇ ತುರುಬು ನಮ್ಮ ನಡುವೆ ಇದೆ. ಬೇಕಿದ್ದರೆ ಅಜ್ಜಿ ಮನೆಯಲ್ಲಿ ಹಳೆಯ ಫೋಟೋ ಆಲ್ಬಂ ತೆರೆದು ನೋಡಿ. ಅದರಲ್ಲಿ ಅಜ್ಜಿ ತುರುಬು ಧರಿಸಿರದಿದ್ದರೆ ಕೇಳಿ! ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರಪ್ರದೇಶ ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ವಧುಗಳು ಮದುವೆ ದಿನದಂದೂ ತುರುಬು ಕಟ್ಟಿಕೊಳ್ಳುತ್ತಾರೆ.

— ಅದಿತಿಮಾನಸ ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next