Advertisement

ಮರಿ ಮೀನು ನಾಶಗೊಳಿಸುವ ಬುಲ್‌ಟ್ರಾಲ್‌ ನಿಷೇಧಿಸಿ

09:52 AM Aug 05, 2017 | |

ಉಡುಪಿ: ಸಣ್ಣ ಗಾತ್ರದ ಬಲೆಯ ಮೂಲಕ ಮರಿ ಮೀನುಗಳನ್ನು ಹಿಡಿದು ಮೀನಿನ ಸಂತತಿಯನ್ನು ನಾಶಗೊಳಿಸುವ ಬುಲ್‌ಟ್ರಾಲ್‌ ಮೀನುಗಾರಿಕೆಯನ್ನು ನಿಷೇಧಿಸಲೇಬೇಕು ಎಂದು ಮಲ್ಪೆಯ ಆಳ ಸಮುದ್ರ ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್‌ ಡಿ. ಸುವರ್ಣ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

Advertisement

ಮೀನುಗಾರಿಕೆಯು ವಿನಾಶದ ಅಂಚಿನಲ್ಲಿದ್ದು, ಮತ್ಸ್ಯಕ್ಷಾಮ ಉಂಟಾಗಿ ಮೀನುಗಾರರು ಭೀಕರ ಬರಗಾಲ ಅನುಭವಿಸುವ ಸ್ಥಿತಿ ಇದೆ. ತಾತ್ಕಾಲಿಕ ಲಾಭಕ್ಕಾಗಿ ಸ್ವೇಚ್ಛಾಚಾರದ ಮೀನುಗಾರಿಕೆಯಿಂದಾಗಿ ಋತು ವಿನಿಂದ ಋತುವಿಗೆ ಮೀನುಗಾರಿಕೆ ಕ್ಷೀಣಿಸುತ್ತಿದೆ. ಸಣ್ಣ ಗಾತ್ರದ ಬಲೆಗಳ ಉಪಯೋಗ ಹೈ ವೋಲ್ಟೇಜ್‌ ದೀಪಗಳನ್ನು ಬಳಸಿಕೊಂಡು ರಾತ್ರಿ ಬೆಳಕಿನ ಬುಲ್‌ಟ್ರಾಲ್‌ ಮೀನುಗಾರಿಕೆ. ಸರಕಾರಗಳ ಕಟ್ಟುನಿಟ್ಟಿನ ಕಾನೂನು ಕ್ರಮದ ಕೊರತೆಯಿಂದ ಈ ಅವೈಜ್ಞಾನಿಕ ವಿನಾಶಕಾರಿ ಮೀನುಗಾರಿಕೆ ಮುಂದು ವರಿದಿದೆ. ಮೀನುಗಾರಿಕಾ ಇಲಾಖೆ, ಸಂಶೋಧನಾ ಕೇಂದ್ರ ಮತ್ತು ಸರಕಾರವು ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಬೆಲೆಬಾಳುವ ಮೀನುಗಳ ನಾಶ ಸಣ್ಣ ಗಾತ್ರದ ಮರಿ ಮೀನಿನ ಪೈಕಿ ರಫ್ತಾಗುವ ಪಾಪ್ಲೆಟ್‌, ಅಂಜಲ್‌, ಬಂಗುಡೆ ಮೊದಲಾದ ಮೀನುಗಳು 5 ಗ್ರಾಂನಿಂದ 25 ಗ್ರಾಂ ತನಕ ತೂಕವಿರುತ್ತದೆ. ಅದೇ ಮೀನುಗಳು ದೊಡ್ಡದಾದ ಮೇಲೆ 250 ಗ್ರಾಂನಿಂದ 10 ಕೆ.ಜಿ.ಯವರೆಗೂ ಬೆಳೆಯುತ್ತದೆ. ಮರಿ ಮೀನಿನ ಬೆಲೆ ಕೆ.ಜಿ.ಗೆ 10 ರೂ. ಇದ್ದರೆ ದೊಡ್ಡ ಮೀನಿಗೆ ಕೆ.ಜಿ.ಗೆ 100 ರೂ.ನಿಂದ 1,000 ರೂ. ತನಕ ಬೆಲೆ ಇದೆ. ಮೀನುಗಳು ಸಂತಾನೋತ್ಪತ್ತಿಗಾಗಿ ಸುರಕ್ಷಿತ ಸ್ಥಳವಾಗಿ ತುಂಬಾ ಕಲ್ಲುಗಳಿರುವ (ಬರಮ್‌) ಪ್ರದೇಶವನ್ನು ಆಶ್ರಯಿಸುತ್ತದೆ. ರಾತ್ರಿ ಹೊತ್ತಿನಲ್ಲಿ ಈ ಸ್ಥಳದಲ್ಲಿ ಹೈವೋಲ್ಟೆàಜ್‌ ದೀಪ ಉಪಯೋಗಿಸಿ ಮೀನುಗಾರಿಕೆ ಮಾಡುವುದರಿಂದ ದೊಡ್ಡ ಪ್ರಮಾಣದಲ್ಲಿ ಮೊಟ್ಟೆ ಇಡುವ ಬೆಲೆಬಾಳುವ ಮೀನುಗಳು ಮತ್ತು ಅವುಗಳ ಮರಿಗಳು ಅಪಾರ ಪ್ರಮಾಣದಲ್ಲಿ ಬಲೆಗೆ ಬೀಳುತ್ತವೆ. 

ಈ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನುಗಳು ಸಾಯುತ್ತವೆ. ಇದರ ದುಷ್ಪರಿಣಾಮವಾಗಿ ಮೀನಿನ ಸಂತಾನೋತ್ಪತ್ತಿ ಕುಂಠಿತವಾಗಿ ಮೀನಿನ ಕ್ಷಾಮ ಉಂಟಾಗುತ್ತದೆ ಎಂದವರು ತಿಳಿಸಿದರು.

ಸಣ್ಣ ಗಾತ್ರ ಬಲೆ ನಿಷೇಧಿಸಿ: ಸರಕಾರವು ಯಾವುದೇ ಮೀನಿನ ಬಲೆ ತಯಾರಿಕಾ ಕಂಪೆನಿಗಳು ಸಣ್ಣ ಗಾತ್ರದ ಬಲೆಗಳ ಉತ್ಪಾದನೆ ಮತ್ತು ಮಾರಾಟ ಮಾಡದಂತೆ ಅದನ್ನು ನಿಷೇಧಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಗುಜರಾತ್‌ನಲ್ಲಿ ಸಣ್ಣ ಗಾತ್ರದ ಬಲೆ ಉಪಯೋಗಿಸುವಲ್ಲಿ ಬದಲಾವಣೆ ಮಾಡಲಾಗಿದೆ. ಅದೇ ರೀತಿ ಕೇರಳ ರಾಜ್ಯದಲ್ಲಿ ಮರಿ ಮೀನು ಹಿಡಿಯುವುದು ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಫಿಶ್‌ಮೀಲ್‌ ಕಂಪೆನಿಗಳು ಮರಿ ಮೀನಿನಿಂದ ಎಣ್ಣೆ ತಯಾರಿಸುವುದನ್ನು ನಿಲ್ಲಿಸಲು ಸಮ್ಮತಿಸಿವೆ. ಪ್ರಸ್ತುತಉಪಯೋಗಿಸುತ್ತಿರುವ 16 ಎಂಎಂ ಗಾತ್ರದ ಬಲೆಯ ಬದಲಿಗೆ ಕನಿಷ್ಠ 30ಎಂಎಂ ಗಾತ್ರದ ಬಲೆ ಉಪಯೋಗಿಸಬೇಕು. ಆಗಸ್ಟ್‌ನಲ್ಲಿ ಕಡ್ಡಾಯವಾಗಿ ಆಳ ಸಮುದ್ರದ ಮೀನುಗಾರಿಕೆಯನ್ನು ಮಾಡುವಂತಾಗಬೇಕು ಎಂದು ಅಧ್ಯಕ್ಷ ಕಿಶೋರ್‌ ಅವರು ಹೇಳಿದರು.

ಆಳ ಸಮುದ್ರ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ವಿಟಲ ಕರ್ಕೇರ, ಉಪಾಧ್ಯಕ್ಷ  ಸೋಮನಾಥ್‌ ಕಾಂಚನ್‌, ಕೋಶಾಧಿಕಾರಿ ಪಾಂಡುರಂಗ ಕೋಟ್ಯಾನ್‌, ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್‌ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next