ರಾಮನಗರ: ಮೇ 12ರಂದು ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ಆಡಳಿತ ಮಂಡಳಿಯ (ಬಮೂಲ್) 13 ನಿರ್ದೇಶಕ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಅಖಾಡ ಸಿದ್ದವಾಗಿದೆ. ರಾಮನಗರ ಜಿಲ್ಲೆಯಿಂದ 5 ನಿರ್ದೇಶಕರು ಆಯ್ಕೆಯಾಗಬೇಕಾಗಿದೆ. ಕನಕಪುರ ಮತಕ್ಷೇತ್ರದಿಂದ ಎಚ್.ಪಿ. ರಾಜಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೀಗಾಗಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ 4 ಮತಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮೇ 6ರ ಸೋಮವಾರ ಕೊನೆಯ ದಿನವಾಗಿತ್ತು.4 ಮತ ಕ್ಷೇತ್ರಗಳಲ್ಲಿ ಇದೀಗ 9 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಮಾಗಡಿ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಎಚ್.ಎನ್.ಅಶೋಕ್ ನಾಮಪತ್ರ ತಿರಸ್ಕೃತವಾಗಿದೆ. ಜಿಲ್ಲೆಯಲ್ಲಿ ರಾಮನಗರ ಕ್ಷೇತ್ರದಿಂದ 2 ಅಭ್ಯರ್ಥಿಗಳು, ಚನ್ನಪಟ್ಟಣ ಕ್ಷೇತ್ರದಿಂದ 2 ಅಭ್ಯರ್ಥಿಗಳು, ಮಾಗಡಿ ಕ್ಷೇತ್ರದಿಂದ 3 ಅಭ್ಯರ್ಥಿಗಳು, ಕುದೂರು ಕ್ಷೇತ್ರದಿಂದ 2 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಕೆಎಂಎಫ್ ಅಧ್ಯಕ್ಷರಿಗೆ ಎಂ.ಶಿವಲಿಂಗಪ್ಪ ಪೈಪೋಟಿ: ರಾಮನಗರ ಕ್ಷೇತ್ರದಿಂದ ಹಾಲಿ ನಿರ್ದೇಶಕ ಹಾಗೂ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಮತ್ತು ಎಂ.ಶಿವಲಿಂಗಪ್ಪ ಕಣದಲ್ಲಿದ್ದಾರೆ. ಚನ್ನ ಪಟ್ಟಣ ಕ್ಷೇತ್ರದಿಂದ ಹಾಲಿ ನಿರ್ದೇಶಕ ಲಿಂಗೇಶ್‌ಕುಮಾರ್ ಮತ್ತು ಜಯಮುತ್ತು ನಡುವೆ ನೇರಹಣಾಹಣಿ ನಡೆಯಲಿದೆ. ಮಾಗಡಿ ಕ್ಷೇತ್ರದಿಂದ ಹಾಲಿ ನಿರ್ದೇಶಕ ನರಸಿಂಹಮೂರ್ತಿ ವಿರುದ್ದ ಕೃಷ್ಣಮೂರ್ತಿ ಮತ್ತು ಎನ್.ಮಂಜುನಾಥ್ ಕಣದಲ್ಲಿದ್ದಾರೆ. ಕುದೂರು ಕ್ಷೇತ್ರದಿಂದ ಮಂಜುನಾಥ್ ಮತ್ತು ರಾಜಣ್ಣ ಅವರುಗಳು ಅಂತಿಮವಾಗಿ ಸ್ಫರ್ದಾ ಕಣದಲ್ಲಿದ್ದಾರೆ.
ಬಮೂಲ್ ವ್ಯಪ್ತಿಯ ಮೂರು ಜಿಲ್ಲೆಗಳಲ್ಲಿ 13 ಕ್ಷೇತ್ರಗಳು: ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ (ಬಮೂಲ್) ವ್ಯಾಪ್ತಿಗೆ ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಒಳಪಡುತ್ತವೆ. ಒಟ್ಟು 13 ಮತಕ್ಷೇತ್ರಗಳಿಂದ ತಲಾ ಒಬ್ಬರು ನಿರ್ದೇಶಕರು ಆಯ್ಕೆಯಾಗಬೇಕಾಗಿದೆ. ಕನಕಪುರದಿಂದ ಎಚ್.ಪಿ.ರಾಜಕುಮಾರ್ ಮತ್ತು ಆನೇಕಲ್ ಕ್ಷೇತ್ರದಿಂದ ಬಿ.ಜೆ.ಆಂಜಿನಪ್ಪ ಈಗಾಗಲೆ ಅವಿರೋಧ ಆಯ್ಕೆಯಾಗಿದ್ದಾರೆ. ಒಟ್ಟು 11 ಮತಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಿದ್ದ 23 ಅಭ್ಯರ್ಥಿಗಳ ಪೈಕಿ 12 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ವಾಪಸ್ಸು ಪಡೆದಿದ್ದಾರೆ.
ರಾಮನಗರ ಜಿಲ್ಲೆಯಿಂದ ಹೊರತು ಪಡಿಸಿ ಉಳಿದ ಮತ ಕ್ಷೇತ್ರಗಳಲ್ಲಿ ಕಣದಲ್ಲಿರುವ ಅಭ್ಯರ್ಥಿ ಗಳ ವಿವರ ಇಲ್ಲಿದೆ:
ಬೆಂಗಳೂರು ನಗರ ಜಿಲ್ಲೆ: ಬೆಂಗಳೂರು ಉತ್ತರ ಮತಕ್ಷೇತ್ರ: ಕೆ.ಎಸ್.ಕೇಶವ ಮೂರ್ತಿ, ಡಿ.ಎಂ.ಮುನಿರಾಜು, ಬಿ.ಕೆ.ಮಂಜು. ಬೆಂಗಳೂರು ಪೂರ್ವ ಮತ ಕ್ಷೇತ್ರಳ ಬಿ.ಡಿ.ನಾಗಪ್ಪ, ಎಂ.ಮಂಜುನಾಥ್, ಬೆಂಗಳೂರು ದಕ್ಷಿಣ ಮತಕ್ಷೇತ್ರ: ಕುಮಾರ್.ಟಿ, ಪಂಚಲಿಂಗಯ್ಯ, ಎಚ್.ಎಸ್.ಹರೀಶ್ ಕುಮಾರ್.
ಬೆಂಗಳೂರು ಗ್ರಾಮಾಂತರ ಜಿಲ್ಲೆ: ಹೊಸಕೋಟೆ ಮತ ಕ್ಷೇತ್ರ: ಸಿ.ಮಂಜುನಾಥ್, ಎಚ್.ಎಸ್.ಶಶಿಧರ್, ದೇವನಹಳ್ಳಿ ಮತಕ್ಷೇತ್ರ: ಎಸ್.ಪಿ.ಮುನಿತಾಜು, ಬಿ.ಶ್ರೀನಿವಾಸ್. ನೆಲಮಂಗಲ ಮತ ಕ್ಷೇತ್ರ: ಎಂ.ಜಿ.ತಿಮ್ಮರಾಜು, ಜಿ.ಆರ್.ಭಾಸ್ಕರ್. ದೊಡ್ಡಬಳ್ಳಾಪುರ ಮತಕ್ಷೇತ್ರ: ಎಚ್.ಅಪ್ಪಯ್ಯ, ಆನಂದಕುಮಾರ್.