ರಾಮನಗರ: ಮೇ 12ರಂದು ನಡೆಯುವ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ಹಾಲು ಉತ್ಪಾದಕರ ಒಕ್ಕೂಟ (ಬಮೂಲ್) ರಾಮನಗರ ಕ್ಷೇತ್ರದ ನಿರ್ದೆಶಕರಾಗಿ ಸತತ 4 ಬಾರಿ ಆಯ್ಕೆಯಾಗಿರುವ ಸ್ಥಾನಕ್ಕೆ ಪುನರಾಯ್ಕೆ ಬಯಸಿರುವ ಪಿ.ನಾಗರಾಜ್ 5ನೇ ಬಾರಿಗೆ ಪುನರಾಯ್ಕೆ ಆಗ್ತಾರ? ಜಿಲ್ಲೆಯಲ್ಲಿ ಅವರ ಕ್ಷೀರ ಕ್ರಾಂತಿ ಮುಂದುವರಿಯುವುದೆ ಎಂಬ ಪ್ರಶ್ನೆಗಳು ಸಾಮಾನ್ಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.
2 ಬಾರಿ ಅವಿರೋಧವಾಗಿ ಆಯ್ಕೆ: ರಾಜಕೀಯ ರಂಗದಲ್ಲಿ ಸಕ್ರಿಯವಾಗಿದ್ದ ಪಿ.ನಾಗರಾಜ್ (ಮಾಯಗಾನಹಳ್ಳಿ ನಾಗರಾಜ್) 1999ರಲ್ಲಿ ಸಹಕಾರ ಕ್ಷೇತ್ರದ ರಾಜಕೀಯಕ್ಕೆ ಕಾಲಿಟ್ಟರು. 1999ರಲ್ಲಿ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿ ಕೂಟಗಲ್ ದೇವೇಗೌಡರ ವಿರುದ್ಧ ಜಯ ಸಾಧಿಸಿದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. 2009ರಲ್ಲಿ ಮೂರನೇ ಬಾರಿಗೆ ಬಿಡದಿಯ ಬ್ಯಾಟಪ್ಪ, ಶಿವಲಿಂಗಯ್ಯ ವಿರುದ್ಧ ಮತ್ತೆ ಜಯ ಸಾಧಿಸಿದರು. 2014ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೀಗ ಮತ್ತೆ ಚುನಾವಣೆ ಎದುರಾಗಿದೆ. ಎರಡು ಅವಧಿಗೆ ಬಮೂಲ್ ಅಧ್ಯಕ್ಷರಾಗಿದ್ದ ಪಿ.ನಾಗರಾಜ್ ಸದ್ಯ ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಕೆಎಂಎಫ್) ಅಧ್ಯಕ್ಷರಾಗಿ ಹಲವು ಸುಧಾರಣೆಗಳಿಗೆ ಕಾರಣರಾಗಿದ್ದಾರೆ.
ಸುಧಾರಣೆಯ ಕೀರ್ತಿ ಬೆನ್ನಿಗಿದೆ: ಬಮೂಲ್ ಕಲ್ಯಾಣ ಟ್ರಸ್ಟ್, ಹೈನುಗಾರರ ಮಕ್ಕಳ ಶಿಕ್ಷಣದ ನೆರವಿಗೆ ಪ್ರತಿಭಾ ಪುರಸ್ಕಾರ ಯೋಜನೆಗಳನ್ನು ಆರಂಭಿಸಿದ ಕೀರ್ತಿ ಪಿ.ನಾಗರಾಜ್ ಬೆನ್ನಿಗಿದೆ. ಸಿದ್ದರಾಮಯ್ಯ ಸರ್ಕಾರ ಮತ್ತು ಹಾಲಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಮೇಲೆ ಒತ್ತಡ ಹೇರಿ ಲೀಟರ್ ಹಾಲಿಗೆ 6 ರೂ. ಧನ ಸಹಾಯ ದೊರಕುವಂತೆ ಮಾಡಿದ್ದಾರೆ. ಪಶು ಆಹಾರದ ವಿಚಾರದಲ್ಲಿ ತಜ್ಞರ ತಂಡದ ಅಭಿಪ್ರಾಯ ಪಡೆದು ನಂದಿನಿ ಗೋಲ್ಡ್ ಪಶು ಆಹಾರವನ್ನು ಕೆಎಂಎಫ್ ಮೂಲಕ ಉತ್ಪಾದನೆಗೆ ಕ್ರಮವಹಿಸಿದ್ದಾರೆ. ಹೈನುಗಾರರು ಮರಣ ಹೊಂದಿದರೆ 2 ಲಕ್ಷ ರೂ. ವಿಮಾ ಯೋಜನೆಯನ್ನು ಆರಂಭಿಸಿದ ಕೀರ್ತಿಯೂ ಇವರದ್ದೆ ಎನ್ನುತ್ತಾರೆ ರೈತರು.
ಹೈನು ಕ್ರಾಂತಿ ಮುಂದುವರಿಸುವ ಪ್ರಯತ್ನ: ಜಿಲ್ಲೆಯ ಕನಕಪುರದಲ್ಲಿ ಮೆಘಾ ಡೇರಿ ಸ್ಥಾಪನೆ, ರಾಮನಗರ ಮತ್ತು ಚನ್ನಪಟ್ಟಣ ಗಡಿ ಭಾಗದಲ್ಲಿ ಹಾಲು ಉತ್ಪನ್ನಗಳ ಘಟಕ ಮತ್ತು ಪೌಡರ್ ಪ್ಲಾಂಟ್‌ಗಳ ಸ್ಥಾಪನೆಗೆ ಕಾಮಗಾರಿಗಳು ಚಾಲನೆಯಲ್ಲಿದೆ. ಹಾಲು ಮಾರಾಟಗಾರರೇ ಹೇಳುವಂತೆ ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಹೈದರಾಬಾದ್, ಮುಂಬೈ ಮತ್ತು ಚೆನ್ನೈನಗರಗಳಲ್ಲಿ ಮಾರಾಟ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ದೇಶದಲ್ಲಿ ಕ್ಷೀರ ಕ್ರಾಂತಿಗೆ ಕಾರಣರಾದ ಡಾ.ಕುರಿಯನ್ ಮತ್ತು ರಾಜ್ಯದಲ್ಲಿ ಕ್ಷೀರ ಕ್ಷೇತ್ರ ಪಿತಾಮಹ ಎಂದೆನಿಸಿರುವ ಎಂ.ವಿ.ಕೃಷ್ಣಪ್ಪರ ಸ್ಫೂರ್ತಿ ಪಡೆದು ಹೈನು ಕ್ರಾಂತಿ ಮುಂದುವರಿಸುವ ಪ್ರಯತ್ನದಲ್ಲಿರುವುದಾಗಿ ಪಿ.ನಾಗರಾಜ್ ಹೇಳಿಕೊಂಡಿದ್ದಾರೆ.
Advertisement
ಪಿ.ನಾಗರಾಜ್ ವಿರುದ್ಧ ಸ್ಪರ್ಧೆಗೆ ಕೆಲವಷ್ಟು ಹೆಸರುಗಳು ಕೇಳಿ ಬಂದಿದೆ. ಆದರೆ, ಸಿಎಂ ಎಚ್. ಡಿ.ಕುಮಾರಸ್ವಾಮಿ ಅವರ ಮಾತೇ ಫೈನಲ್! ಪಿ.ನಾಗರಾಜ್ ಈಗಾಗಲೇ ಸಿಎಂ ಆಶೀರ್ವಾದ ಪಡೆದಿದ್ದಾರೆ. ಈ ಬಾರಿಯೂ ಅವಿರೋಧವಾಗಿ ಆಯ್ಕೆಯಾಗ್ತಾರ? ಚುನಾವಣೆ ಎದುರಿಸಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.
Related Articles
Advertisement
ಎಚ್‌ಡಿಕೆ ಬೆಂಬಲ ಪಡೆದ ಪಿ.ನಾಗರಾಜ್: ಮೇ 12ರಂದು ನಡೆಯುವ ಬಮೂಲ್ ಚುನಾವಣೆಯಲ್ಲಿ ಮತ್ತೆ ಆರಿಸಿ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಈಗಾಗಲೇ ಸಿಎಂ ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾರ ಕೃಪಾಶೀರ್ವಾದ ಪಡೆದು ಬಂದಿರುವ ಪಿ.ನಾಗರಾಜ್ 5ನೇ ಬಾರಿಗೆ ಬಮೂಲ್ ನಿರ್ದೇಶಕರಾಗಿ ಆಯ್ಕೆ ಮಾಡುವ ಅಧಿಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಅರ್ಹ ಅಧ್ಯಕ್ಷರಿಗಳ ಬಳಿ ಇದೆ.
ಹಾಲು ಉತ್ಪಾದನೆಯಲ್ಲಿ ರಾಮನಗರಕ್ಕೆ ಪ್ರಥಮ ಸ್ಥಾನ
ರಾಮನಗರ ಜಿಲ್ಲೆ ರೇಷ್ಮೆ ಮತ್ತು ಹಾಲಿಗೆ ಪ್ರಸಿದ್ಧಿಯಾಗಿದೆ. ಒಂದೆಡೆ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ ಜಿಲ್ಲೆ. ದಿನವೊಂದಕ್ಕೆ 6.5 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿರುವ ರಾಮನಗರ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಸಾವಿರಾರು ಕುಟುಂಬಗಳು ಇಂದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಹೀಗಾಗಿಯೇ ಮೇ 12ರಂದು ನಡೆಯುವ ಬಮೂಲ್ ಚುನಾವಣೆ ಕ್ಷೀರೋದ್ಯಮದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ನಿರಂತರ ಬರ ಕಾಡಿದ ಜಿಲ್ಲೆಯಲ್ಲಿ ರೈತರನ್ನು ಆರ್ಥಿಕವಾಗಿ ಕೈ ಹಿಡಿದಿದ್ದು ಹೈನುಗಾರಿಕೆ. ಲೀಟರ್‌ವೊಂದಕ್ಕೆ 6 ರೂ. ಪ್ರೋತ್ಸಾಹ ಧನ ಸರ್ಕಾರದಿಂದ ಸಿಗುತ್ತಿದ್ದರೂ, ದಿನೇ ದಿನೇ ಏರುತ್ತಿರುವ ಫೀಡ್ಸ್‌ನ ಬೆಲೆ, ಮೇವಿನ ಅಲಭ್ಯ ಮುಂತಾದ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬೇಕಾದ ಅವಶ್ಯವಿದೆ. ಈ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಪ್ರತಿನಿಧಿಯನ್ನು ಹಾಲು ಉತ್ಪಾದಕ ಸಹಕಾರ ಸಂಘಗಳು ಆಯ್ಕೆ ಮಾಡಿಕೊಳ್ಳಬೇಕಾಗಿದೆ.
ಬಿ.ವಿ.ಸೂರ್ಯ ಪ್ರಕಾಶ್