Advertisement
ಪಿಂಗಾಣಿ ಬಟ್ಟಲು, ಪ್ರಶಸ್ತಿ ಫಲಕಗಳು, ಗಾಜಿನ ವಸ್ತು, ಅಲಂಕಾರಿಕ ವಸ್ತುಗಳು ಅಕಸ್ಮಾತ್ ಒಡೆದುಹೋದರೆ, ಅವನ್ನು ಅಂಟಿಸಲು ನಾವೆಲ್ಲಾ- ಫೆವಿಕ್ವಿಕ್, ಫೆವಿಕ್ರಿಲ್, ಫೆವಿಬಾಂಡ್, ಎಂ ಸೀಲ್, ಡಾ. ಫಿಕ್ಸಿಟ್‌ನ ಮೊರೆ ಹೋಗುತ್ತೇವೆ. ವಾರ್ಡ್‌ರೋಬ್‌ಗಳನ್ನು ನಿರ್ಮಿಸುವಾಗ ಫೆವಿಕಾಲ್‌ಗೆ ಜೈ ಅನ್ನುತ್ತೇವೆ. ಇವೆಲ್ಲ ಉತ್ಪನ್ನಗಳನ್ನು ತಯಾರಿಸುವುದು ಪಿಡಿಲೈಟ್ ಎಂಬ ಕಂಪನಿ. ಈ ಕಂಪನಿಯ ಸಂಸ್ಥಾಪಕ, ಒಂದು ಕಾಲಕ್ಕೆ ಜವಾನ ಆಗಿದ್ದವನು ಎಂದರೆ ನಂಬುತ್ತೀರಾ? ಒಂದು ಕಾಲಕ್ಕೆ 14 ರೂ. ಮನೆ ಬಾಡಿಗೆ ನೀಡಲೂ ಒದ್ದಾಡಿದವನು ಮುಂದೆ 5000 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ಕಥೆ ಇಲ್ಲಿದೆ. ಓದಿಕೊಳ್ಳಿ…
Related Articles
Advertisement
ಮನೆಯಿಂದ ದುಡ್ಡು ಬರುವುದು ನಿಂತುಹೋದಾಗ ಪಾರೇಖ್ ನೌಕರಿಗೆ ಸೇರಲೇಬೇಕಾಯಿತು. ಐದಾರು ಕಡೆ ಹುಡುಕಿ, ಕಡೆಗೂ ಒಂದು ಪ್ರಿಂಟಿಂಗ್ ಪ್ರಸ್‌ನಲ್ಲಿ 90 ರೂ. ಸಂಬಳದ ನೌಕರಿ ಹಿಡಿದ. ಪ್ರಸ್‌ನ ಕೆಲಸದ ಜೊತೆಗೆ ಮಾಲೀಕರ ಮನೆಗೆ ತರಕಾರಿ ತಂದುಕೊಡುವ, ಗಿಡಗಳಿಗೆ ನೀರು ಹಾಕುವ ಕೆಲಸವನ್ನೂ ಮಾಡಬೇಕಿತ್ತು. ಇದೇ ಕಾರಣಕ್ಕೆ, ಎರಡೇ ತಿಂಗಳಿಗೆ ಆ ಕೆಲಸವನ್ನೂ ಬಿಟ್ಟು ನಿರುದ್ಯೋಗಿಯಾದ. ಎರಡು ವಾರ ಕಳೆಯುವುದರೊಳಗೆ, ಅದೇ ಮುಂಬಯಿನ ಬೊರಿವಿಲಿಯಲ್ಲಿದ್ದ ಕಂಪನಿಯೊಂದರಲ್ಲಿ ಜವಾನನ ಕೆಲಸ ಸಿಕ್ಕಿತು. “ದಿನದ ಖರ್ಚಿಗೆ ಹಣ ಸಿಕ್ಕಿದ್ರೆ ಸಾಕು’ ಅನ್ನುತ್ತಾ ಆ ಕೆಲಸಕ್ಕೂ ಸಡಗರದಿಂದಲೇ ಸೇರಿಕೊಂಡ. ಅಲ್ಲಿ ಕೆಲಸವೇನೋ ಚೆನ್ನಾಗಿತ್ತು. ಆದರೆ ಸಣ್ಣದೊಂದು ತಪ್ಪಾದರೂ ಸಾಕು; ಆ ಸಂಸ್ಥೆಯ ಮಾಲೀಕ ಮತ್ತು ಅವನ ಮಗಳಿಂದ ಬಯುಳದ ಸುರಿಮಳೆ ಆಗುತ್ತಿತ್ತು. ಯಾರಿಂದಲೂ ಒಂದು ಮಾತು ಕೇಳಿ ಅಭ್ಯಾಸವಿರದಿದ್ದ ಪಾರೇಖ್, ಮೂರೇ ತಿಂಗಳಲ್ಲಿ ಈ ಕೆಲಸಕ್ಕೂ ಗುಡ್‌ಬೈ ಹೇಳಿ ಊರಿಗೆ ಹೋಗಿಬಿಟ್ಟ.
ಡಿಗ್ರಿ ಮುಗಿದ ನಂತರ ಬೇಗ ಕೆಲಸ ಗಿಟ್ಟಿಸಿ ಲೈಫ್ನಲ್ಲಿ “ಸೆಟ್ಲ’ ಆಗದ ಮಗನ ಕುರಿತು ಪಾರೇಖ್‌ನ ತಂದೆಗೆ ಸಿಟ್ಟು ಬಂತು. ಬ್ಯಾಚುಲರ್ ಆಗಿದಾನೆ. ಹಾಗಾಗಿ ಜವಾಬ್ದಾರಿಯಿಲ್ಲ. ಒಂದು ಮದುವೆ ಮಾಡಿದ್ರೆ ಎಲ್ಲಾ ಸರಿ ಹೋಗುತ್ತೆ ಎಂದು ಯೋಚಿಸಿದ ಆತ ತರಾತುರಿಯಲ್ಲಿ ಮದುವೆ ಮಾಡಿಬಿಟ್ಟರು. ಅವತ್ತಿನ ದಿನಗಳಲ್ಲಿ, ಒಳ್ಳೆಯ ನೌಕರಿ ಬೇಕು ಎನ್ನುವವರೆಲ್ಲ ಬರುತ್ತಿದ್ದುದು ಮುಂಬಯಿಗೇ. ಪಾರೇಖ್‌ನೂ ಹಾಗೇ ಮಾಡಿದ. ಈ ಬಾರಿ ಫ್ರೆಂಡ್ ಒಬ್ಬನ ಮನೆಯ ಆಚೆಗಿದ್ದ ಗೋಡೌನ್‌ನ್ನು ತಿಂಗಳಿಗೆ 14 ರುಪಾಯಿ ಬಾಡಿಗೆಗೆ ಪಡೆದು ಹೊಸ ಬದುಕು ಆರಂಭಿಸಿದ. ವರ್ಷ ಕಳೆಯುತ್ತಿದ್ದಂತೆಯೇ ಗಂಡು ಮಗುವಿನ ತಂದೆಯಾದ. ಇದೇ ವೇಳೆಗೆ, ಪಾರೇಖ್‌ನ ತಮ್ಮನೂ ಬಂದು ಅಣ್ಣನ ಮನೆಯಲ್ಲಿ ಆಶ್ರಯ ಪಡೆದ. ಮನೆಯಲ್ಲಿ ಜನರ ಸಂಖ್ಯೆ ಹೆಚ್ಚುತ್ತ ಹೋದಂತೆ, ಒಂದು ನಿಶ್ಚಿತ ಆದಾಯದ ನೌಕರಿಗೆ ಸೇರಲೇಬೇಕಾದ ಅನಿವಾರ್ಯತೆ ಎದುರಾಯಿತು. ಆಗಲೇ, ಹುಟ್ಟೂರಿನಿಂದ ತುಪ್ಪ ತಂದು ಅದನ್ನು ಮಾರಿದರೆ ಲಾಭವಿದೆ ಅನ್ನಿಸಿತು. ಹೆಚ್ಚು ಗಿರಾಕಿಗಳನ್ನು ಪಡೆಯುವ ಆಸೆಯಿಂದ- “ಪ್ರಾಡಕ್ಟ್ ಇಷ್ಟ ಆಗದಿದ್ರೆ ವಾಪಸ್ ತಗೋತೇನೆ’ ಎಂದೂ ಭರವಸೆ ಕೊಟ್ಟ. ಮುಂಬಯಿಯ ಕಿಲಾಡಿ ಜನ, ಅರ್ಧದಷ್ಟು ತುಪ್ಪವನ್ನು ಬಳಸಿಕೊಂಡು, ಉಳಿದದ್ದನ್ನು “ಇದು ಚೆನ್ನಾಗಿಲ್ಲ, ವಾಪಸ್ ಮಾಡ್ತಿದೀವಿ. ನಮ್ಮ ದುಡ್ಡು ವಾಪಸ್ ಕೊಡು’ ಅಂದರು. ಪರಿಣಾಮ, ಸ್ವಂತ ಉದ್ಯೋಗದಲ್ಲೂ ಪಾರೇಖ್ ಕೈಸುಟ್ಟುಕೊಂಡ.
ಎಲ್ಲಿ ಲಾಸ್ ಆಯಿತೋ ಅಲ್ಲಿಯೇ ಸಂಪಾದಿಸಿ ಗೆಲ್ಲಬೇಕು – ಇದು ಎಲ್ಲ ವ್ಯಾಪಾರಿಗಳ ಮಾತು. ಪಾರೇಖ್‌ನೂ ಇದಕ್ಕೆ ಹೊರತಾಗಿರಲಿಲ್ಲ. ಆಪದ್ಧನದ ರೂಪದಲ್ಲಿ ಇದ್ದ ಹಣವನ್ನೆಲ್ಲ ಜೊತೆ ಮಾಡಿಕೊಂಡು, ನಡೆದುಬಂದ. ವಿದೇಶಗಳಿಂದ ಬಣ್ಣ ತರಿಸಿ ಮಾರಾಟ ಮಾಡುತ್ತಿದ್ದ ಮೋಹನಭಾಯ್ ಎಂಬಾತನೊಂದಿಗೆ ಪಾಲುದಾರಿಕೆಯಲ್ಲಿ ಬಿಸಿನೆಸ್ ಆರಂಭಿಸಿದ. ಈ ಬಾರಿ ಸಾಕಷ್ಟು ಲಾಭ ಬಂತು. ಆದರೆ ಲಾಭದ ಹಣ ಹಂಚಿಕೊಳ್ಳುವ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಪರಿಣಾಮ, ಪಾಲುದಾರಿಕೆಯ ವ್ಯವಹಾರದಿಂದಲೂ ಪಾರೇಖ್ ಆಚೆ ಬಂದ. ಬಿಸಿನೆಸ್‌ನಲ್ಲಿ ಅವನ ಸೋಲಿನ ಗ್ರಾಫ್ ಕಂಡವರು- ದರಿದ್ರಲಕ್ಷ್ಮಿ ಪಾರೇಖ್‌ನ ಹೆಗಲೇರಿದ್ದಾಳೆ ಎಂದೇ ಭವಿಷ್ಯ ನುಡಿದರು.
ಸತ್ಯ ಏನೆಂದರೆ, ಪಾರೇಖ್‌ಗೆ ಮೋಸ ಮಾಡುವುದು, ಥಳುಕಿನ ಮಾತಾಡುವುದು ಗೊತ್ತಿರಲಿಲ್ಲ. ಗ್ರಾಹಕರನ್ನು ಸಂತೃಪ್ತಿಪಡಿಸುವುದೇ ಅವನ ಮುಖ್ಯ ಉದ್ದೇಶವಾಗಿತ್ತು. ಅವನ ಈ ಸೇವಾ ಮನೋಭಾವವನ್ನು ಇಂಗ್ಲೆಂಡ್, ಜರ್ಮನಿಯಿಂದ ಬಣ್ಣಗಳನ್ನು ರಫ್ತು ಮಾಡುತ್ತಿದ್ದ ಕಂಪನಿಗಳು ಗುರುತಿಸಿದವು. ಇಂಡಿಯಾದಲ್ಲಿ ಪಾರೇಖ್‌ಗೇ ಏಜೆನ್ಸಿ ಕೊಟ್ಟವು. ಹೆಚ್ಚಿನ ಅಧ್ಯಯನಕ್ಕೆಂದು ಪಾರೇಖ್‌ನನ್ನು ಜರ್ಮನಿಗೂ ಕರೆಸಿಕೊಂಡವು. ಆ ಸಂದರ್ಭದಲ್ಲಿಯೇ ವಿದೇಶಗಳಲ್ಲೆಲ್ಲ ಬಟ್ಟೆಗಳನ್ನು ಇಡಲು ವಾರ್ಡ್ ರೋಬ್ ಮಾಡಿರುವುದನ್ನು, ಅದನ್ನು ರೂಪಿಸುವಾಗ ‘Movical’ ಎಂಬ ಅಂಟು ಪದಾರ್ಥ ಬಳಸುವುದನ್ನು ಪಾರೇಖ್ ಗಮನಿಸಿದ್ದ.
ವಿದೇಶದಿಂದ ಮರಳಿ ಬಂದವನ ಕಣ್ಣಲ್ಲಿ ಹೊಸ ಹೊಳಪಿತ್ತು. ಭಾರತದಲ್ಲೂ ಆಗಷ್ಟೇ ಗೃಹನಿರ್ಮಾಣದಲ್ಲಿ ಹಲವು ಬದಲಾವಣೆಗಳು ಆಗುತ್ತಿದ್ದವು. ಬಟ್ಟೆಗಳನ್ನು ಇಡಲು ಅಲ್ಮೇರಾಗಿಂತ ವಾರ್ಡ್‌ರೋಬ್ ಮಾಡಿಕೊಳ್ಳುವುದೇ ಒಳಿತು ಎಂಬ ಅಭಿಪ್ರಾಯ ಬಹು ಜನಪ್ರಿಯವಾಗಿತ್ತು. ವಾರ್ಡ್‌ರೋಬ್‌ಗ ಬಾಗಿಲು ಹಾಗೂ ಕಿಟಕಿ ನಿರ್ಮಿಸುವಾಗ ಮರದ ಸಾಮಗ್ರಿಗಳನ್ನು ಅಂಟಿಸಲು ಅತ್ಯುತ್ತಮ ಗುಣಮಟ್ಟದ “ಗಂ’ ಇರಲಿಲ್ಲ. ಆಗೆಲ್ಲ ಎರಡು ಪಟ್ಟಿಗಳಿಗೂ ಸಣ್ಣ “ಮೊಳೆ’ ಹೊಡೆದು ಫಿಕ್ಸ್ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಪಾರೇಖ್, ಅತ್ಯುತ್ತಮ ಗುಣಮಟ್ಟದ, ದೀರ್ಘ ಬಾಳಿಕೆ ನೀಡುವಂಥ ಅಂಟುದ್ರವ ತಯಾರಿಸಲು ನಿರ್ಧರಿಸಿದ. ಅಂಟುದ್ರವಕ್ಕೆ ಜರ್ಮನಿಯಲ್ಲಿ Movical (ಮೂವಿಕಾಲ್) ಎಂಬ ಹೆಸರಿತ್ತಲ್ಲ; ಅದನ್ನೇ ಸ್ವಲ್ಪ ಬದಲಿಸಿ, ಫೆವಿಕಾಲ್ (Fevicol) ಎಂಬ ಹೆಸರಿಟ್ಟು ಹೊಸ ಅಂಟುದ್ರವವನ್ನು ಮಾರುಕಟ್ಟೆಗೆ ತಂದೇಬಿಟ್ಟ. ಅಂಟುದ್ರವಗಳನ್ನು ತಯಾರಿಸುವ ತನ್ನ ಕಂಪನಿಗೆ ಪಿಡಿಲೈಟ್ ಎಂದು ಹೆಸರಿಟ್ಟ.
ಬಾಗಿಲು/ಕಿಟಕಿ, ವಾರ್ಡ್‌ರೋಬ್ ನಿರ್ಮಾಣದ ವೇಳೆ ಮೊದಲು ಗಟ್ಟಿಯಾದ ಮರದ ತುಂಡು ಬಳಸಿ, ಅದರ ಮೇಲೆ ರೇಷಿಮೆಯಷ್ಟೇ ನುಣುಪಾದ, ತೆಳುವಾದ ಮರದ ಪಟ್ಟಿಯನ್ನು ಅಂಟಿಸಲಾಗುತ್ತದೆ. ಈ ಅಂಟಿಸುವ ಕ್ರಿಯೆಯಲ್ಲಿ ಬಳಕೆಯಾದದ್ದೇ ಫೆವಿಕಾಲ್. ಒಮ್ಮೆ ತಯಾರಿಸಿದ ವಾರ್ಡ್‌ರೋಬ್, 20 ವರ್ಷಗಳಿಗೂ ಹೆಚ್ಚು ಕಾಲ ಗಟ್ಟಿಮುಟ್ಟಾಗಿ ಉಳಿಯುತ್ತದೆ ಎಂದು ಪಾರೇಖ್ ಘೋಷಿಸಿದಾಗ, ಗೃಹನಿರ್ಮಾಣ ವಲಯದಲ್ಲಿ ಮಿಂಚಿನ ಸಂಚಲನವಾಯಿತು. ಫೆವಿಕಾಲ್‌ಗೆ ದೇಶಾದ್ಯಂತ ಡಿಮ್ಯಾಂಡ್ ಶುರುವಾಯಿತು. ಈ ಸಂದರ್ಭದಲ್ಲಿ ತಲೆ ಓಡಿಸಿದ ಪಾರೇಖ್, ತನ್ನ ಉತ್ಪನ್ನದ ಹೆಸರು ಮತ್ತು ಗುಣಮಟ್ಟವನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ, ವರ್ಷಗಳ ಕಾಲ ಟಿ.ವಿಗಳಲ್ಲಿ, ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿದ. ಈ ಪೈಕಿ ತುಂಬಾ ಜನಪ್ರಿಯವಾಗಿದ್ದ ಎರಡು ಜಾಹೀರಾತುಗಳ ಕುರಿತೂ ಹೇಳಬಹುದು.
ಮೊದಲಿನದು: ಟಿಪ್‌ಟಾಪ್ ಆಗಿ ಡ್ರೆಸ್ ಮಾಡಿದವನೊಬ್ಬ, ಕೊಳಕ್ಕೆ ಮೀನು ಹಿಡಿಯಲು ಬಂದಿರುತ್ತಾನೆ. ಗಾಳ ಹಾಕಿ, ನಿಶ್ಶಬ್ದವಾಗಿ ಅವನು ಕೂತಿರುವಾಗಲೇ ಗಲಗಲಗಲ ಸದ್ದು ಮಾಡಿಕೊಂಡು ಬರುವ ಹಳ್ಳಿಗನೊಬ್ಬ, ಗಾಳಕ್ಕೆ ನಾಲ್ಕು ಬಾರಿ ಫೆವಿಕ್ವಿಕ್‌ನ ಅಂಟು ತಾಗಿಸಿ, ಅದನ್ನು ಕೊಳಕ್ಕೆ ಹಾಕುತ್ತಾನೆ. ಮರುಕ್ಷಣವೇ ನಾಲ್ಕು ಮೀನುಗಳು ಆ ಗಾಳಕ್ಕೆ, ಅಂದರೆ ಫೆವಿಕ್ವಿಕ್‌ಗೆ ಸಿಕ್ಕಿ ಅಂಟಿಕೊಂಡಿರುತ್ತವೆ!
ಇನ್ನೊಂದು: ಆಮ್ಲೆಟ್ ಮಾಡುವವನೊಬ್ಬ ಮೊಟ್ಟೆ ಒಡೆಯಲು ಹೋದರೆ, ಅದು ಒಡೆಯುವುದೇ ಇಲ್ಲ. ಬೆರಗಾದ ಅವನು, ಮೊಟ್ಟೆ ಯಾಕೆ ಇಷ್ಟೊಂದು ಗಟ್ಟಿ ಆಯ್ತು ಎಂದು ಕೋಳಿಯನ್ನೇ ನೋಡಿದರೆ, ಅದು, ಫೆವಿಕಾಲ್ ಡಬ್ಬಿಯಲ್ಲಿ ತುಂಬಿಸಿಟ್ಟ ಆಹಾರವನ್ನು ತಿನ್ನುತ್ತಿರುತ್ತದೆ! (ಅಂದರೆ ಫೆವಿಕಾಲ್ ಅಷ್ಟು ಗಟ್ಟಿ ಎಂದರ್ಥ) ಇಂಥವೇ ತಮಾಷೆ ಜಾಹೀರಾತುಗಳ ಮೂಲಕ ಪಾರೇಖ್, ದೇಶದ ಉದ್ದಗಲಕ್ಕೂ ಫೆವಿಕಾಲ್ ಮನೆಮಾತಾಗುವಂತೆ ಮಾಡಿಬಿಟ್ಟರು. ಫೆವಿಕಾಲ್‌ನ ಹಿಂದೆಯೇ, ಹಾಳೆಯಂಥ ಹಗುರ ವಸ್ತುಗಳನ್ನು ಅಂಟಿಸಲು ಫೆವಿಸ್ಟಿಕ್; ಗಾಜು, ಪಿಂಗಾಣಿ, ಗೊಂಬೆಗಳನ್ನು ಅಂಟಿಸಲು ಫೆವಿಬಾಂಡ್, ಫೆವಿಕ್ವಿಕ್, ಫೆವಿಕ್ರಿಲ್, ಡಾ. ಫಿಕ್ಸಿಟ್, ಎಂ-ಸೀಲ್ ಹೀಗೆ ಬಗೆಬಗೆಯ ಉತ್ಪನ್ನಗಳು ಬಂದವು. ಸ್ವಾರಸ್ಯವೆಂದರೆ, ಈ ಎಲ್ಲ ಉತ್ಪನ್ನಗಳ ಕ್ವಾಲಿಟಿ ಸೂಪರ್ ಎನ್ನುವಂತಿತ್ತು. ಬೆಲೆ, ಎಲ್ಲ ವರ್ಗದವರಿಗೂ ಎಟಕುವಂತೆಯೇ ಇತ್ತು. ಪರಿಣಾಮ ಏನಾಯಿತೆಂದರೆ, ಅಂಟುದ್ರವ್ಯದ ಮಾರುಕಟ್ಟೆಯಲ್ಲಿ ಫೆವಿಕಾಲ್‌ಗೆ ಸರಿಸಾಟಿ ಅನ್ನಿಸುವಂಥ ಇನ್ನೊಂದು ಕಂಪನಿ ಬರಲೇ ಇಲ್ಲ. ಫೆವಿಕಾಲ್‌ಗೆ ಅಮೆರಿಕ, ಬ್ರೆಝಿಲ್, ಈಜಿಪ್ಟ್, ಥಾಯ್‌ಲ್ಯಾಂಡ್, ದುಬೈ ಮತ್ತು ಬಾಂಗ್ಲಾದೇಶದಿಂದಲೂ ಆರ್ಡರ್ ಬರತೊಡಗಿತು. ನೋಡನೋಡುತ್ತಲೇ ಪಿಡಿಲೈಟ್ ಕಂಪನಿಯ ಲಾಭದ ಪ್ರಮಾಣ 5000 ಕೋಟಿ ರುಪಾಯಿ ತಲುಪಿತು.
ಇಷ್ಟಾದ ಮೇಲೆ ಹೇಳುವುದೇನಿದೆ? ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಪಾರೇಖ್‌ನ ಹೆಸರೂ ಕಾಣಿಸಿಕೊಂಡಿತು. ಹಿಂದೊಮ್ಮೆ ಅವನನ್ನು – ದರಿದ್ರಲಕ್ಷ್ಮಿಯೋಗ ಹೊಂದಿರುವ ಆಸಾಮಿ ಎಂದು ಕರೆದಿದ್ದವರೇ – ಜ್ಯುವೆಲ್ ಆಫ್ ಇಂಡಿಯಾ ಎಂದು ಕರೆದು ಸನ್ಮಾನಿಸಿದರು. ಸಾವಿರಾರು ಕೋಟಿ ದುಡಿದ ನಂತರವೂ ಸಾಮಾನ್ಯನಂತೆಯೇ ಬದುಕಿದ್ದ. ಪಾರೇಖ್, 2013ರಲ್ಲಿ, ತನ್ನ 88ನೇ ವಯಸ್ಸಿನಲ್ಲಿ ನಿಧನನಾದ. ಪರಿಶ್ರಮ, ಶ್ರದ್ಧೆ ಮತ್ತು ಛಲ ಜೊತೆಗಿದ್ದರೆ, ಜವಾನನೂ, ದಿವಾನನ ಎತ್ತರಕ್ಕೆ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟ ಅವನ ಬದುಕು ಎಲ್ಲರಿಗೂ ಪಾಠ ಆಗುವಂಥದು…
ಎ.ಆರ್. ಮಣಿಕಾಂತ್