ಟೊರೊಂಟೊ: ಪಾಕಿಸ್ತಾನ ಸೇನೆ ಮತ್ತು ಪಾಕ್ ಸರ್ಕಾರದ ದೌರ್ಜನ್ಯದ ಬಗ್ಗೆ ಸತತವಾಗಿ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಕರಿಮಾ ಬಲೂಚ್ ಕೆನಡಾ ರಾಜಧಾನಿ ಟೊರೊಂಟೊದಲ್ಲಿ ಶವವವಾಗಿ ಪತ್ತೆಯಾಗಿರುವುದಾಗಿ ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ.
ಕರಿಮಾ ಕೆನಾಡಾದ ನಿರಾಶ್ರಿತರಾಗಿದ್ದು, 2016ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಜಗತ್ತಿನ 100 ಮಂದಿ ಅತ್ಯಂತ ಪ್ರಭಾವಿ ಮತ್ತು ಸ್ಫೂರ್ತಿದಾಯಕ ಮಹಿಳೆಯರಲ್ಲಿ ಕರಿಮಾ ಒಬ್ಬರು ಎಂದು ಬಿಬಿಸಿ ಗುರುತಿಸಿತ್ತು.
ಭಾನುವಾರ (ಡಿಸೆಂಬರ್ 20) ಕರಿಮಾ ನಾಪತ್ತೆಯಾಗಿದ್ದರು. ಅವರು ಅಂದು ಮಧ್ಯಾಹ್ನ 3 ಗಂಟೆಗೆ ಅವರನ್ನು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು ಎಂದು ವರದಿ ಹೇಳಿದೆ. ಕರಿಮಾ ಪತ್ತೆಗಾಗಿ ಸಾರ್ವಜನಿಕರ ನೆರವು ಬೇಕು ಎಂದು ಟೊರೊಂಟೊ ಪೊಲೀಸರು ಮನವಿ ಮಾಡಿಕೊಂಡಿದ್ದರು.
ಏತನ್ಮಧ್ಯೆ ಕರಿಮಾ ಬಲೂಚ್ ಅವರ ಶವ ಪತ್ತೆಯಾಗಿರುವುದಾಗಿ ಕುಟುಂಬದ ಸದಸ್ಯರು ಖಚಿತಪಡಿಸಿದ್ದಾರೆ.ಕರಿಮಾ ಬಲೂಚಿಸ್ತಾನದ ಪ್ರಮುಖ ಸಾಮಾಜಿಕ ಕಾರ್ಯಕರ್ತರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಸ್ವಿಟ್ಜರ್ ಲ್ಯಾಂಡ್ ನಲ್ಲಿ ನಡೆದ ವಿಶ್ವಸಂಸ್ಥೆಯ ಅಧಿವೇಶನದಲ್ಲಿಯೂ ಕರಿಮಾ ಬಲೂಚಿಸ್ತಾನದ ವಿಷಯವನ್ನು ಪ್ರಸ್ತಾಪಿಸಿದ್ದರು. 2019ರಲ್ಲಿ ನಡೆಸಿದ ಸಂದರ್ಶನದಲ್ಲಿ ಕರಿಮಾ ಪಾಕಿಸ್ತಾನದ ವಿರುದ್ಧ ಗಂಭೀರವಾಗಿ ಆರೋಪಿಸಿದ್ದರು. ಪಾಕ್ ಬಲೂಚಿಸ್ತಾನದ ಜನರನ್ನು ಹತ್ತಿಕ್ಕುತ್ತಿದೆ ಎಂದು ದೂರಿದ್ದರು. ಕರಿಮಾ ಅವರ ಆಕಸ್ಮಿಕ ಸಾವು ಗಂಭೀರ ಕಳವಳ ಹುಟ್ಟುಹಾಕಿದೆ ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ.
ಪಾಕಿಸ್ತಾನದ ವಿರುದ್ಧ ಧ್ವನಿ ಎತ್ತಿರುವವರು ಸಾವಿಗೀಡಾಗುತ್ತಿರುವುದು ಇದೇ ಮೊದಲ ಪ್ರಕರಣವಲ್ಲ ಎಂದು ವಿವರಿಸಿರುವ ವರದಿ, ಮೇ ತಿಂಗಳಿನಲ್ಲಿ ಬಲೂಚ್ ಪತ್ರಕರ್ತ ಸಾಜಿದ್ ಹುಸೈನ್ ಸ್ವೀಡನ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಾಜಿದ್ ಮಾರ್ಚ್ 2ರಿಂದ ಉಪ್ಸಲಾ ನಗರದಿಂದ ನಾಪತ್ತೆಯಾಗಿದ್ದು, ನಂತರ ಶವವಾಗಿ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಪಾಕಿಸ್ತಾನ ಸರ್ಕಾರ ಮತ್ತು ಪಾಕ್ ಸೇನೆಯನ್ನು ನಿರಂತರವಾಗಿ ಟೀಕಿಸುವ ಸಾಮಾಜಿಕ ಕಾರ್ಯಕರ್ತರನ್ನು ತನ್ನ ಗುಪ್ತಚರ(ಐಎಸ್ಐ) ಸಂಸ್ಥೆ ಮೂಲಕ ಕಿರುಕುಳ ನೀಡುವ ಮೂಲಕ ಬೆದರಿಕೆಯೊಡ್ಡುವುದು ಪಾಕ್ ನಿರಂತರವಾಗಿ ಮುಂದುವರಿಸಿದೆ ಎಂದು ವರದಿ ತಿಳಿಸಿದೆ.