Advertisement

ಮಲ್ಲಿಗೆ ಪ್ರಿಯೆ ಸೀಮೆಯೊಡತಿ ಬಲ್ನಾಡು ಉಳ್ಳಾಲ್ತಿ ನೇಮ

10:35 AM Apr 29, 2018 | |

ಪುತ್ತೂರು: ಬಂಗಾರದ ಮಲ್ಲಿಗೆಯನ್ನೇ ತೊಟ್ಟು ನೇಮ ಪಡೆದುಕೊಳ್ಳುವ ಬಲ್ನಾಡು ಶ್ರೀ ಉಳ್ಳಾಲ್ತಿ ನೇಮ ಶನಿವಾರ ನಡೆಯಿತು. ಪುತ್ತೂರು ಸೀಮೆಗೇ ಪ್ರಧಾನವಾದ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ನಲ್ಕುರಿ ಸಂಪ್ರದಾಯದ ಪ್ರಕಾರ ವಾರ್ಷಿಕ ನೇಮ ಜರಗಿತು.

Advertisement

ಮುಂಜಾನೆ 4 ಗಂಟೆ ಸುಮಾರಿನಿಂದಲೇ ಭಕ್ತರು ದೈವಸ್ಥಾನಕ್ಕೆ ಆಗಮಿಸುತ್ತಿದ್ದರು. ಉಳ್ಳಾಲ್ತಿ ಅಮ್ಮನಿಗೆ ಪ್ರಿಯವಾದ ಮಲ್ಲಿಗೆ ಹೂವು, ಕುಂಕುಮ, ಪಟ್ಟೆ ಸೀರೆ, ಎಳ ನೀರನ್ನು ಅರ್ಪಿಸಿ, ಗಂಧ ಪ್ರಸಾದ ಸ್ವೀಕರಿಸಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರೆಯ ಧ್ವಜಾವರೋಹಣದ ಮರುದಿನ ಬಲ್ನಾಡಿನಲ್ಲಿ ವಾರ್ಷಿಕ ನೇಮಕ್ಕೆ ಗೊನೆ ಮುಹೂರ್ತ ನಡೆಯಿತು.

ಶುಕ್ರವಾರ ರಾತ್ರಿ ಕಟ್ಟೆಮನೆಯಿಂದ ದೈವಗಳ ಕಿರುವಾಳು ಭಂಡಾರ ಆಗಮನವಾಗಿ, ಅನ್ನಸಂತರ್ಪಣೆ ಜರಗಿತು. ಶನಿವಾರ ಬೆಳಗ್ಗೆ ವಾಲಸರಿ ಗದ್ದೆಯಿಂದ ನೇಮ ಆರಂಭ. ಕಿರುವಾಳು ಭಂಡಾರ ವಾಲಸರಿ ಗದ್ದೆಗೆ ತೆರಳಿ, ದಂಡನಾಯಕ ದೈವದ ಮುಖಾಮುಖಿ ನಡೆಯಿತು. ವಾಲಸರಿ ಗದ್ದೆಯಲ್ಲಿ ದೈವದ ನರ್ತನ ನಡೆದು, ಕಟ್ಟೆ ಮನೆಯ ಬಳಿಯಿರುವ ಕಟ್ಟೆಯಲ್ಲಿ ಪೂಜೆ ಜರಗಿತು. ಬಳಿಕ ದೈವಸ್ಥಾನಕ್ಕೆ ದೈವದ ಆಗಮನವಾಯಿತು.

ಮಧ್ಯಾಹ್ನದ ಹೊತ್ತು ಅಟ್ಟೆಯಲ್ಲಿ ಉಳ್ಳಾಲ್ತಿ ಅಮ್ಮನವರ ನೇಮ ನಡೆಯಿತು. ಶಾರ ಮನೆಯಿಂದ ವರ್ಷಂಪ್ರತಿ ತರುವ ಚಿನ್ನದ ಮುಗುಳು ಮಲ್ಲಿಗೆಯನ್ನು ದೇವಿಯ ಮುಡಿಗೆ ಇಡಲಾಯಿತು. ಮಧ್ಯಾಹ್ನದ ಬಳಿಕ ಕಾಳರಾಹು ಹಾಗೂ ಮಲರಾಯ ದೈವದ ನೇಮದೊಂದಿಗೆ ಸಂಪನ್ನಗೊಂಡಿತು.

ವಾಹನ, ಪಾನಕದ ವ್ಯವಸ್ಥೆ
ಪುತ್ತೂರು ಪೇಟೆಯಿಂದ 3 ಕಿ.ಮೀ. ದೂರದಲ್ಲಿರುವ ಬಲ್ನಾಡು ದೈವಸ್ಥಾನದಲ್ಲಿ ನೇಮಕ್ಕೆ ಸಾವಿರಾರು ಮಂದಿ ಬರುತ್ತಾರೆ. ಅವರನ್ನೆಲ್ಲ ಉಚಿತವಾಗಿ ದೈವಸ್ಥಾನಕ್ಕೆ ತಲುಪಿಸುವ ವ್ಯವಸ್ಥೆ ಇರುತ್ತದೆ. ಬಲ್ನಾಡು ಕಡೆಗೆ ಹೋಗುವ ವಾಹನಗಳು ಉಚಿತವಾಗಿ ಎಲ್ಲರನ್ನೂ ಕರೆದೊಯ್ಯುತ್ತಿದ್ದವು. ದೈವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಮಜ್ಜಿಗೆ, ಕಲ್ಲಂಗಡಿ ಜ್ಯೂಸ್‌, ಪಾನಕ, ನೀರು – ಹೀಗೆ ವಿವಿಧ ಪಾನೀಯ, ಆಹಾರಗಳ ವ್ಯವಸ್ಥೆ ಮಾಡಲಾಗಿತ್ತು. ದಣಿದು ತೆರಳುವವರನ್ನು ಉಪಚರಿಸುವ ಸಂಪ್ರದಾಯವನ್ನು ಇಲ್ಲಿ ಅನುಸರಿಸಿಕೊಂಡು ಬರಲಾಗುತ್ತಿದೆ.

Advertisement

ಜಾತ್ರೆ, ವಾರ್ಷಿಕ ನೇಮ ಎಂದಾಗ ಒಂದಷ್ಟು ಸಂತೆ ಇರುತ್ತದೆ. ಆದರೆ ಬಲ್ನಾಡಿನಲ್ಲಿ ಇಂತಹ ಸನ್ನಿವೇಶವೇಇರುವುದಿಲ್ಲ. ಸಂತೆ ಇಟ್ಟರೂ ವಸ್ತುಗಳನ್ನು ಉಚಿತವಾಗಿ ನೀಡಬೇಕು. ಆದ್ದರಿಂದ ಮಲ್ಲಿಗೆ ಮಾರಾಟಗಾರರು ಪುತ್ತೂರು ಪೇಟೆಯ ಬೀದಿಯಲ್ಲೇ ವ್ಯಾಪಾರ ನಡೆಸುತ್ತಿದ್ದರು. 

ನೇಮೋದ ವೈಭವ
ಬೆಳಗ್ಗೆ 4 ಗಂಟೆಯಿಂದಲೇ ಜನಸಂದಣಿ ಆರಂಭ. ಪ್ರತಿಯೊಬ್ಬರ ಕೈಯಲ್ಲೂ ಎಳನೀರು, ಪಟ್ಟೆ ಸೀರೆ, ಮಲ್ಲಿಗೆಯ ಹರಕೆ. ಮನದಲ್ಲಿ ಭಯ- ಭಕ್ತಿ. ಇದು ಶನಿವಾರ ನಡೆದ ಬಲ್ನಾಡು ಉಳ್ಳಾಲ್ತಿ ನೇಮದಲ್ಲಿ ಕಂಡು ಬಂದ ನೋಟ.

ನಲ್ಕುರಿ ಸಂಪ್ರದಾಯ ಪ್ರಕಾರ ಶುಕ್ರವಾರ ರಾತ್ರಿ ಭಂಡಾರ ಆಗಮನವಾಯಿತು. ಶನಿವಾರ ಬೆಳಗ್ಗೆ ವಾಲಸರಿ ಗದ್ದೆಯಿಂದ ದಂಡನಾಯಕ ದೈವ ಆಗಮಿಸಿ, ದೈವಸ್ಥಾನದಲ್ಲಿ ವಾರ್ಷಿಕ ಕಟ್ಟುಕಟ್ಟಳೆ ನಡೆಯಿತು. ಬಳಿಕ ಉಳ್ಳಾಲ್ತಿ ದೈವದ ಅಭಯ, ಗಂಧ ಪ್ರಸಾದ. ಕಾಳರಾಹು ದೈವದ ನೇಮ ನಡೆದು ಮಲರಾಯ ದೈವದ ವಾರ್ಷಿಕ ಉತ್ಸವವು ಸಂಪನ್ನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next