Advertisement

ನೃತ್ಯಾಂತರಂಗ ದೀಪಕ

03:05 PM Jul 21, 2017 | |

ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯ ಆಶ್ರಯದಲ್ಲಿ ಕೆಲವು ವರ್ಷಗಳಿಂದ ನೃತ್ಯಾಂತರಂಗ ಕಾರ್ಯಕ್ರಮ ನಡೆದು ಬರುತ್ತಿದೆ. ನೃತ್ಯಾಂತ ರಂಗ ಕಲಾಶಾಲೆಯ ಮಕ್ಕಳಿಗೊಂದು ವೇದಿಕೆ ಎಂಬಂತೆ ಪ್ರಾರಂಭವಾಯಿತು. ಆದರೆ ಇಂದು ಈ ಚೌಕಟ್ಟನ್ನು ಮೀರಿ ಶ್ರೇಷ್ಠ ಕಲಾವಿದರ ಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾಗಿದೆ. ಇದರ ಮೂಲಕ ದೇಶ ವಿದೇಶಗಳಲ್ಲಿ ಹೆಸರು ಗಳಿಸಿದ ಕಲಾವಿದರನ್ನು ನಮ್ಮೂರಲ್ಲೇ ನೋಡುವ ಭಾಗ್ಯವನ್ನು ಕಲ್ಪಿಸಿಕೊಟ್ಟವರು ಕಲಾಶಾಲೆಯ ಗುರುಗಳಾದ ವಿ| ದೀಪಕ್‌ ಕುಮಾರ್‌ ಹಾಗೂ ಕುಟುಂಬ. 

Advertisement

ಪುತ್ತೂರಿನ ದರ್ಬೆಯಲ್ಲಿರುವ ಶಶಿಶಂಕರ ಸಭಾಭವನದಲ್ಲಿ ನೃತ್ಯಾಂತರಂಗ 29ನೇ ಸರಣಿಯು ನೆರವೇರಿತು. ಕಲಾಶಾಲೆಯ ಗುರುಗಳು, ದೂರದರ್ಶನದ “ಎ’ ಗ್ರೇಡ್‌ ಕಲಾವಿದರಲ್ಲಿ ಒಬ್ಬರಾದ ವಿ| ದೀಪಕ್‌ ಕುಮಾರ್‌ ಭಕ್ತಿಮಾರ್ಗ ಎಂಬ ವಿಷಯಾಧಾರಿತ ನೃತ್ಯ ಪ್ರದರ್ಶನವನ್ನು ನೀಡಿದರು. ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಸರೋಜಿನಿ ನಾಗಪ್ಪಯ್ಯ ಕಾರ್ಯಕ್ರಮ ಉದ್ಘಾಟಿಸಿದರು. 

“ಭಕ್ತಿ ಮಾರ್ಗ’ “ನೃತ್ಯಾಂತರಂಗ’ 29ನೇ ಸರಣಿಯು ಸಂಕೀರ್ಣ ಜಾತಿಯ ಅಲರಿಪುವಿನೊಂದಿಗೆ ಅಚ್ಚುಕಟ್ಟಾಗಿ ಆರಂಭ ಗೊಂಡಿತು. ಸಾಮಾನ್ಯ ವಾಗಿ ಅಲರಿಪು ವಿನಲ್ಲಿ ಒಂದು ಅಥವಾ ಎರಡು ಮಂಡಿ ಅಡವು ಇದ್ದರೆ, ಇಲ್ಲಿ ಮೂರು ಕ್ಲಿಷ್ಟಕರವಾದ ಮಂಡಿ ಅಡವುಗಳಿದ್ದು, ಶೊಲ್ಲುಕಟ್ಟುಗಳು ಬಹಳ ಕ್ಲಿಷ್ಟವಾಗಿದ್ದವು. ಇದು ಗಮನಾರ್ಹ ವಿಷಯ. ತದನಂತರ ಮೂಡಿಬಂದ ಲತಾಂಗಿ ರಾಗ, ಆದಿತಾಳದ ಮುಖ್ಯ ನೃತ್ಯಬಂಧ ವರ್ಣದಲ್ಲಿ ವಿಶ್ವವ್ಯಾಪಿ ಯಾದ, ಅತಿ ಸುಂದರನೂ ಆದ ನೀಲಕಂಠ ಅರ್ಧನಾರೀಶ್ವರ ಶಿವನನ್ನು ವರ್ಣಿಸುತ್ತಾ ಆತನ ದರ್ಶನಕ್ಕಾಗಿ ಹಂಬಲಿಸುವ ಭಕ್ತ, ಶಿವನ ಸಾಕ್ಷಾತ್ಕಾರವನ್ನು ಪಡೆದು ಆನಂದಿಸುವುದು ಅತಿ ಆಹ್ಲಾದಕಾರಿಯಾಗಿತ್ತು. ಪಂಚಭೂತಗಳಲ್ಲಿ ವ್ಯಾಪಿಸಿ ರುವ ಶಿವ ಸಕಲ ಜೀವಿಗಳ ಆಧಾರವಾಗಿ ಮಾನವನಲ್ಲಿ ಲೀನವಾಗಿದ್ದಾನೆ. ಮಾನವನು ಅರಿಷಡ್ವೆ„ರಿಗಳನ್ನು ಮೆಟ್ಟಿ ಶಿವನ ಪಾದಕ್ಕೆ ಎಂದು ಪೂರ್ತಿಯಾಗಿ ಶರಣೆನ್ನುತ್ತಾನೋ ಆಗ, ಶಿವ ತನ್ನ ಅಭಯಹಸ್ತವನ್ನು ಚಾಚಿ ಆತನನ್ನು ಪೊರೆಯುತ್ತಾನೆಂದು ಸೃಷ್ಟಿ, ಸ್ಥಿತಿ, ಲಯ, ಶರಣಾಗತಿ ಹಾಗೂ ಆತೊದ್ಧಾರದ ಸಂಕೇತ ನಟರಾಜನನ್ನು ಈ ವರ್ಣದಲ್ಲಿ ನಿರೂಪಿಸಿದರು. ಅದಲ್ಲದೆ, ವೀರ ಮತ್ತು ಲಾಸ್ಯ ಭಾವದೊಂದಿಗೆ ಅರ್ಧ ನಾರೀಶ್ವರನನ್ನು ಪ್ರತಿಪಾದಿಸುವ ಒಂದು ಚರಣದ ಭಾಗ ಸೊಗಸಾಗಿ ಮೂಡಿಬಂದಿತು. ಈ ವರ್ಣದಲ್ಲಿನ ಕ್ಲಿಷ್ಟ ಜತಿಗಳು ನೃತ್ಯಗಾರನ ಸಾಧನೆ, ನಟುವಾಂಗದವರ ಪರಿಶ್ರಮಕ್ಕೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಾರದು. 

ಇದಾದ ಬಳಿಕ ಶ್ರೀರಾಮಚಂದ್ರ ಕೃಪಾಳು ಭಜಮನ ಎಂದು ಶ್ರೀರಾಮನ ಗುಣಗಾನ ಮಾಡುತ್ತಾ, ರಾಮನ ಜೀವನದ ಮುಖ್ಯ ಹಂತಗಳನ್ನು ಅತಿ ಸುಂದರವಾಗಿ ಪೋಣಿಸುತ್ತಾ ಮಾಡಿದ ಈ ನೃತ್ಯದಲ್ಲಿ ದಶರಥನ ಪುತ್ರ ವಾತ್ಸಲ್ಯ, ರಾಮ ಸೌಂದರ್ಯ, ಸೀತಾ-ರಾಮ ಕಲ್ಯಾಣ ವೈಭೋಗ ಮುಂತಾದ ದೃಶ್ಯಗಳು ಮೂಡಿಬಂದವು. ಅಹಲ್ಯಾ ಶಾಪ ವಿಮೋಚನೆಯ ಸಂದರ್ಭದಲ್ಲಿ ನೃತ್ಯ ಗಾರನೇ ಶಬರಿಯಾಗುತ್ತಾ ರಾಮನ ದರ್ಶನದ ಪರಮಾ ನಂದವನ್ನು ತಾನು ಅನುಭವಿಸಿ, ಸೇರಿದ ಪ್ರತಿಯೋರ್ವ ನಿಗೂ ಉಣಬಡಿಸಿದರು. ಆ ಅನುಭವ ಎಲ್ಲರನ್ನೂ ಒಂದು ಕ್ಷಣ ಮಂತ್ರಮುಗ್ಧರನ್ನಾಗಿಸಿತು, ಎಂದರೆ ಅತಿಶಯೋಕ್ತಿಯಲ್ಲ.

ಕೊನೆಯಲ್ಲಿ ಲವಂಗಿ ರಾಗ, ಆದಿತಾಳದಲ್ಲಿ ತಿಲ್ಲಾನ ಮೂಡಿ ಬಂದಿತು. ಹಾಡುಗಾರ ಹಾಗೂ ನೃತ್ಯಗಾರನ ಜುಗಲ್‌ಬಂದಿಯೇ ನೃತ್ಯದ ಗಮನಾರ್ಹ ವಿಷಯ. ಸಂಗೀತದಲ್ಲಿನ ಮನೋಧರ್ಮವನ್ನು ನೃತ್ಯದಲ್ಲೂ ಪ್ರಸ್ತುತಪಡಿಸಲು ಸಾಧ್ಯ ಎಂಬ ಅಂಶವನ್ನು ತಿಲ್ಲಾನದಲ್ಲಿ ತೋರಿಸಿದ್ದು ಕಲಾವಿದರ ವೈಶಿಷ್ಟ. 

Advertisement

ನಟುವಾಂಗ ಮತ್ತು ಹಾಡುಗಾರಿಕೆ ಎರಡನ್ನೂ ಸಮರ್ಥವಾಗಿ ನಿಭಾಯಿಸಿದ ವಿ| ಪ್ರೀತಿಕಲಾ ಅವರ ನೈಪುಣ್ಯ ಹಾಗೂ ವಿದ್ವತ್ತು ಈ ನೃತ್ಯ ಕಾರ್ಯಕ್ರಮದಲ್ಲಿ ಬಿಂಬಿತವಾಯಿತು. ಮೃದಂಗದಲ್ಲಿ ವಿ| ಗೀತೇಶ್‌ ನೀಲೇಶ್ವರ ಹಾಗೂ ಕೊಳಲಿನಲ್ಲಿ ವಿ| ರಾಜ ಗೋಪಾಲ ಕಾಞಂಗಾಡ್‌ ಸಹಕರಿಸಿದರು. ಕಲಾಶಾಲೆಯ ವಿದ್ಯಾರ್ಥಿನಿಯರಾದ ಸಾಯಿ ಪದ್ಮಾ ಡಿ. ಎಸ್‌. ಅವರ ನಿರೂಪಣೆ, ಅಪೂರ್ವ ದೇವಸ್ಯ ಅವರಿಂದ ಅತಿಥಿಗಳ ಪರಿಚಯ ಹಾಗೂ ವಿದ್ಯಾರ್ಥಿ ಆಶ್ರಯ ನಾಯಕ್‌ ಅವರಿಂದ ಕಲಾವಿದರ ಪರಿಚಯ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. 

ಪದ್ಮಶ್ರೀ

Advertisement

Udayavani is now on Telegram. Click here to join our channel and stay updated with the latest news.

Next