ಬಳ್ಳಾರಿ: ಕಳೆದ ಒಂದು ದಶಕದಿಂದ ಬಳ್ಳಾರಿಯಿಂದ ಹೊರಗಿದ್ದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ಕೊನೆಗೂ ಬಳ್ಳಾರಿಯಲ್ಲೇ ಉಳಿಯಲು ಷರತ್ತುಬದ್ಧ ಅನುಮತಿ ನೀಡಿ ಗುರುವಾರ ಆದೇಶ ಹೊರಡಿಸಿದೆ.
ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು 2011, ಸೆ.5ರಂದು ಬೆಳ್ಳಂಬೆಳಗ್ಗೆ ಸಿಬಿಐ ಅಧಿ ಕಾರಿಗಳು ಬಂಧಿ ಸಿದ್ದರು. ಅಂದಿನಿಂದ ಹೈದರಾಬಾದ್, ಬೆಂಗಳೂರು ಕಾರಾಗೃಹದಲ್ಲಿ ಇದ್ದ ಜನಾರ್ದನ ರೆಡ್ಡಿಯವರಿಗೆ ನಾಲ್ಕು ವರ್ಷಗಳ ಬಳಿಕ 2015ರಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿತಾದರೂ ಬಳ್ಳಾರಿ, ನೆರೆಯ ಆಂಧ್ರದ ಅನಂತಪುರ ಜಿಲ್ಲೆಗೆ ಭೇಟಿ ನೀಡದಂತೆ ಷರತ್ತು ವಿಧಿ ಸಿತ್ತು.
ಅಂದಿನಿಂದ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ವಾಸವಾಗಿದ್ದ ರೆಡ್ಡಿಯವರು ಮಗಳ ಮದುವೆ, ಹಬ್ಬಗಳ ನಿಮಿತ್ತ ಆಗೊಮ್ಮ ಈಗೊಮ್ಮೆ ಸುಪ್ರೀಂ ಕೋರ್ಟ್ ಅನುಮತಿ ಪಡೆದು ಬಳ್ಳಾರಿಗೆ ಬಂದು ಹೋಗುತ್ತಿದ್ದರು. ಬಳ್ಳಾರಿಯಲ್ಲೇ ಉಳಿಯಲು ಅನುಮತಿ ಕೋರಿ ಹಲವು ಬಾರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರೂ ಅನುಮತಿ ದೊರೆತಿರಲಿಲ್ಲ. ಆದರೆ, ಈ ಬಾರಿ 8 ವಾರಗಳ ಕಾಲ ಬಳ್ಳಾರಿಯಲ್ಲೇ ಉಳಿಯಲು ಅಥವಾ ಶಾಶ್ವತವಾಗಿ ವಾಸವಿರಲು ಅನುಮತಿ ಕೋರಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆಯನ್ನು ಈಗಾಗಲೇ ಎರಡು ಬಾರಿ ಮುಂದೂಡಿದ್ದ ನ್ಯಾಯಾಲಯ ಗುರುವಾರ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣದಲ್ಲಿ ಇನ್ನೂ ವಿಚಾರಣೆ ಆರಂಭ ಆಗಿಲ್ಲ. ಜತೆಗೆ ಜನಾರ್ದನ ರೆಡ್ಡಿ ಈವರೆಗೆ ಜಾಮೀನು ಷರತ್ತುಗಳನ್ನು ಮೀರಿಲ್ಲ. ಹೀಗಾಗಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಹೋಗಬಹುದು ಎಂದು ನ್ಯಾಯಮೂರ್ತಿ ವಿನೀತ್ ಸರಣ್, ದಿನೇಶ್, ಮಹೇಶ್ವರಿ ಅವರನ್ನೊಳಗೊಂಡ ಪೀಠ ತಿಳಿಸಿದೆ. 2018ರಲ್ಲಿಯೂ ರೆಡ್ಡಿ ಸ್ನೇಹಿತ, ಸಾರಿಗೆ ಸಚಿವ ಸಚಿವ ಶ್ರೀರಾಮುಲು ಪರ ಪ್ರಚಾರ ಮಾಡಲು ಬಳ್ಳಾರಿ ಪ್ರವೇಶ ಮಾಡಲು ಅನುಮತಿ ಕೋರಿದ್ದರು.
ಆದರೆ, ನ್ಯಾಯಾಲಯ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ಅನುಮತಿ ನೀಡಿರುವುದು ರೆಡ್ಡಿ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಿ. ಸೋಮಶೇಖರ ರೆಡ್ಡಿ, ದೇವರ ಕೃಪೆಯಿಂದ ತಮ್ಮ ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಲು ಅವಕಾಶ ಸಿಕ್ಕಿದೆ. ಪೊಲೀಸ್ ಮಕ್ಕಳಾಗಿ ಬೆಳೆದಿರುವ ನಾವು ನ್ಯಾಯ ದೇವತೆಗೆ ಬೆಲೆ ಕೊಟ್ಟಿದ್ದೇವೆ.
ನಮ್ಮ ಕುಟುಂಬದ ಜತೆಯಲ್ಲಿ ಇರಬೇಕೆಂಬ ಆಸೆಯಿಂದ ಅವರು ಬಳ್ಳಾರಿ ಬರುತ್ತಿದ್ದಾರೆ. ಅವರು ಇಲ್ಲದಿದ್ದರೆ ಬಹಳ ಕಷ್ಟವಾಗಲಿದೆ. ನಮಗೂ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದಾರೆ. ಹಾಗಾಗಿ ಕಾರ್ಯಕರ್ತರು ಬಹಳ ಉತ್ಸಾಹದಲ್ಲಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಚಟುವಟಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.