ಸುರೇಶ ಯಳಕಪ್ಪನವರ
ಹಗರಿಬೊಮ್ಮನಹಳ್ಳಿ: ತುಂಗಾಭದ್ರಾ ಹಿನ್ನೀರಿನ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯ ಗ್ರಾಪಂ ಕಟ್ಟಡದಲ್ಲಿರುವ ಸಾರ್ವಜನಿಕರ ಗ್ರಂಥಾಲಯ ಈಗ ಪುಸ್ತಕ ಸಂಗ್ರಹಗಳ ಮೂಲಕ ನಗರ ಪ್ರದೇಶದ ಲೈಬ್ರರಿಗಳಿಗೆ ಪುಸ್ತಕ ಸಡ್ಡು ಹೊಡೆಯುವಂತಿದೆ.
ಸರಕಾರದ “ಪುಸ್ತಕ ಜೋಳಿಗೆ’ ಕಾರ್ಯಕ್ರಮವನ್ನು ಅಕ್ಷರಶಃ ಪಾಲಿಸಿರುವ ಮೇಲ್ವಿಚಾರಕ ಪಾಂಡುರಂಗಪ್ಪ ಆತಿ ಹೆಚ್ಚು ಪುಸ್ತಕಗಳನ್ನು ಸಂಗ್ರಹ ಮಾಡಿ ಓದುಗರ ಆಸಕ್ತಿ ಹೆಚ್ಚಿಸಿದ್ದಾರೆ. ಈ ವಿಷಯ ಅರಿತ ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿಯವರು ತಾಲೂಕುಮಟ್ಟದ ಅ ಧಿಕಾರಿಗಳನ್ನು ಗ್ರಂಥಾಲಯಕ್ಕೆ ಕಳುಹಿಸಿ ಸಂಗ್ರಹ ಕುರಿತು ವರದಿಯನ್ನು ಪಕ್ಕಾ ಮಾಡಿಕೊಂಡಿದ್ದಾರೆ.
ಪಾಂಡುರಂಗಪ್ಪ ಈವರೆಗೂ ಒಟ್ಟು ದಾನಿಗಳಿಂದ 1400ಕ್ಕೂ ಹೆಚ್ಚು ಪುಸ್ತಕ ಸಂಗ್ರಹಿಸಿದ್ದಾರೆ. ದಾನಿಗಳಿಂದ ರ್ಯಾಕ್ ಪಡೆದು ಪುಸ್ತಕಗಳನ್ನು ಚೆಂದಾಗಿ ಜೋಡಿಸಿಟ್ಟಿದ್ದಾರೆ. ಸರಕಾರದ “ಓದು ಬೆಳಕು’ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದಾರೆ. ಇವರ ಎಲ್ಲ ಕಾರ್ಯಗಳಿಗೂ ಗ್ರಾಪಂ ಪಿಡಿಒ ಮತ್ತು ಇತರೆ ಅ ಧಿಕಾರಿಗಳು ಪೂರಕವಾಗಿ ಸ್ಪಂದಿಸಿ ಸಾಥ್ ನೀಡಿದ್ದಾರೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಕಾಂಕ್ಷಿಗಳಿಗೆ ವಿಷಯವನ್ನು ಹಂಚಲು “ಗ್ರಂಥಾಲಯ ಬಳಗ’ ವ್ಯಾಟ್ಸಾಪ್ ಗ್ರೂಪ್ ರಚಿಸಿದ್ದಾರೆ.
ಕೋವಿಡ್ ಅವ ಧಿಯಲ್ಲಿ ಗ್ರಂಥಾಲಯಕ್ಕೆ ಪ್ರವೇಶ ನಿರ್ಬಂಧವಿದ್ದ ಕಾರಣ ಈ ಗ್ರೂಪ್ ಮೂಲಕ ಸದಸ್ಯರಿಗೆ ಅಗತ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ದಾನಿಗಳ ನೆರವು ಪಡೆದು ಎಲ್ಲ ಪತ್ರಿಕೆಗಳನ್ನು ತರಿಸಿ ಓದುಗರಿಗೆ ನೀಡುತ್ತಿದ್ದಾರೆ. ಜಿಲ್ಲಾ ಕೇಂದ್ರ ಗ್ರಂಥಾಲಯ ಸರಬರಾಜು ಮಾಡಿದ 8800, ಕಲ್ಯಾಣ ಕರ್ನಾಟಕ ಯೋಜನೆಯಡಿ ಬಂದ 531 ಹಾಗೂ “ಪುಸ್ತಕ ಜೋಳಿಗೆ’ಯಡಿ ಸಂಗ್ರಹವಾದ 850 ಪುಸ್ತಕಗಳು ಗ್ರಂಥಾಲಯದಲ್ಲಿವೆ. 805 ಎರವಲು ಓದುಗ ಸದಸ್ಯರಿದ್ದಾರೆ.
ದತ್ತಿಯಲ್ಲಿ ಮೇಲುಗೈ: ಇನ್ನು 2008ರಿಂದ ಇಲ್ಲಿವರೆಗೆ 45 ಸಾವಿರ ರೂ. ದತ್ತಿನಿಧಿ ಸಂಗ್ರಹವಾಗಿದ್ದು, ಈ ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿಯಿಟ್ಟು ಬಂದಂತಹ ಬಡ್ಡಿ ಮೊತ್ತದಲ್ಲಿ ಪ್ರತಿ ವರ್ಷ 7ನೇ, 10ನೇ, 12ನೇ ತರಗತಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ 500 ರೂ. ಗೌರವ ಧನ ನೀಡಿ ಪ್ರೋತ್ಸಾಹಿಸಲಾಗುತ್ತದೆ.
ದಿ|ಅಕ್ಕಿ ಮಂಜುನಾಥ, ಕಾರ್ಯನಿರ್ವಾಹಕ ಅಧಿ ಕಾರಿ ಖೇಣಿ ಬಸಪ್ಪ, ಟಿ. ವೆಂಕೋಬಪ್ಪ, ಶಿಕ್ಷಕ ಕಿನ್ನಾಳ್ ಕೊಟ್ರೇಶ್, ಬಿ. ದೇವಿಪ್ರಸಾದ, ಡಿ.ಎಂ. ಶಿವಪ್ರಸಾದ್ ಇನ್ನಿತರರು ತಮ್ಮ ಹಿರಿಯರ ಹೆಸರಿನಲ್ಲಿ ದತ್ತಿ ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಿದ್ದಾರೆ.
ಇನ್ನು ಗ್ರಾಮದೇವತಾ ಭಜನಾ ಮಂಡಳಿಯನ್ನು ಸತತ ಎಂಟು ವರ್ಷಗಳಿಂದ ಪಾಂಡುರಂಗಪ್ಪ ಮುನ್ನಡೆಸುತ್ತಿದ್ದಾರೆ. ರಕ್ತದಾನದ ಮೂಲಕವೂ ರೋಗಿಗಳಿಗೆ ನೆರವಾಗಿದ್ದಾರೆ.