Advertisement
ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರು ಆರ್ಯಾಪಿನ ಗ್ರಾಮ ದೇವರು. ಉಳ್ಳಾಲ್ತಿ- ಉಳ್ಳಾಕುಲು ಪಂಚ ದೈವಗಳು, ವ್ಯಾಘ್ರ ಚಾಮುಂಡಿ, ನಾಗ ದೇವರ ಜತೆಗೆ ನೆಲೆನಿಂತ ಸುಬ್ರಹ್ಮಣ್ಯ ದೇವರಿಗೆ ಕಿರುಷಷ್ಠಿಯಂದು ವಾರ್ಷಿಕ ಜಾತ್ರೆ ನಡೆಯುತ್ತದೆ. ಚಂಪಾ ಷಷ್ಠಿಯ ಅನಂತರದ ತಿಂಗಳಿನಲ್ಲಿ ಬರುವ ಕಿರುಷಷ್ಠಿಗೆ ದಿನ ಬದಲಾಗದಂತೆ ಜಾತ್ರೆ ನಡೆಯುತ್ತದೆ.
ರವಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸ್ಥಳೀಯ ವೆಂಕಪ್ಪ ಗೌಡರ ತೋಟದಿಂದ ಗೊನೆ ಕಡಿದು, ಜಾತ್ರೆಗೆ ಗೊನೆ ಮುಹೂರ್ತ ನೆರವೇರಿಸಲಾಯಿತು. ಬಳಿಕ ವೈದಿಕರು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಪ್ರಮುಖರು, ಗ್ರಾಮಸ್ಥರು ಬಲ್ಲೇರಿ ಮಲೆ ಯಾತ್ರೆ ಕೈಗೊಂಡರು. ದೇವಸ್ಥಾನದ ಹಿಂಭಾಗವೇ ಇದೆ ಬಲ್ಲೇರಿ ಮಲೆ. ಒಂದಷ್ಟು ದೂರ ರಸ್ತೆ, ಕಾಲುದಾರಿ ಇದೆಯಾದರೂ ಬಳಿಕ ನಿರ್ಜನ ಪ್ರದೇಶ. ವರ್ಷಕ್ಕೊಮ್ಮೆಯಷ್ಟೇ ಮೂಲಮೃತ್ತಿಕೆಗಾಗಿ ಯಾತ್ರೆ ನಡೆಯುತ್ತದೆ. ಇದನ್ನು ಹೊರತು ಪಡಿಸಿದರೆ, ಉಳಿದ ದಿನಗಳಲ್ಲಿ ಇಲ್ಲಿ ಜನಸಂಚಾರವೇ ಇರುವುದಿಲ್ಲ. ಆದ್ದರಿಂದ ಕಾಲುದಾರಿ ಕೂಡ ಇರುವುದಿಲ್ಲ. ಯಾತ್ರೆಗೆ ತೆರಳುವವರಲ್ಲಿ ಮುಂಭಾಗದ ವ್ಯಕ್ತಿ ಬಲ್ಲೆ, ಪೊದೆಗಳನ್ನು ಸರಿಸಿ ದಾರಿ ಮಾಡಿಕೊಂಡು ತೆರಳುತ್ತಾರೆ. ಉಳಿದವರು ಅವರನ್ನು ಹಿಂಬಾಲಿಸಬೇಕು.
Related Articles
Advertisement
ದೇವಸ್ಥಾನ ಇತ್ತಂತೆಬಲ್ಲೇರಿ ಮಲೆಯ ತುದಿಯಲ್ಲಿ ಪುರಾತನ ಕಾಲದಲ್ಲಿ ದೇವಸ್ಥಾನ ಇತ್ತೆಂಬ ನಂಬಿಕೆಯಿದೆ. ಶಿವ-ಪಾರ್ವತಿಯ ಸೇರಿದಂತೆ ವಿಹಾರ ತಾಣವೂ ಹೌದು ಎಂದು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ. ದಿನಂಪ್ರತಿ ಅರಣ್ಯದ ತಪ್ಪಲಿನಿಂದ ತುದಿಯಲ್ಲಿದ್ದ ದೇವಸ್ಥಾನಕ್ಕೆ ತೆರಳಿ ಪೂಜೆ ನಡೆಸಬೇಕಿತ್ತು. ಆ ಸಂದರ್ಭ ಹುಲಿಗಳ ಸಂಚಾರವೂ ಇಲ್ಲಿತ್ತು. ಇದಕ್ಕೆ ನಿದರ್ಶನ ಎಂಬಂತೆ ಹುಲಿಗೂಡು ಬಲ್ಲೇರಿ ಮಲೆಯಲ್ಲಿ ಕಾಣಸಿಗುತ್ತದೆ. ಹುಲಿಯ ಭಯದಿಂದ ಬಲ್ಲೇರಿ ಮಲೆಗೆ ಬರುವುದು ಕಷ್ಟ ಎಂದು ಅರ್ಚಕರು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರಂತೆ. ಒಂದು ದಿನ ದೇವರ ಮೂರ್ತಿ ಈಗಿನ ದೇವಸ್ಥಾನದ ಆಸುಪಾಸಿನಲ್ಲಿ ಕಾಣಸಿಕ್ಕಿತು. ಬಳಿಕ ದೇವರ ಮೂರ್ತಿಯನ್ನು ಗುಡಿ ಕಟ್ಟಿ, ಪೂಜೆ ನಡೆಸಲಾಯಿತು ಎಂದು ಹೇಳಲಾಗುತ್ತಿದೆ. ಕಾರ್ಪಾಡಿಯಲ್ಲಿ ದೇವಸ್ಥಾನ ನಿರ್ಮಾಣ ಆಗುತ್ತಿದ್ದಂತೆ, ಬಲ್ಲೇರಿ ಮಲೆಯಲ್ಲಿದ್ದ ದೇವಸ್ಥಾನ ಪಾಳುಬಿದ್ದಿತು. ಇದೀಗ ಒಂದು ಮಂಟಪ ಹಾಗೂ ಕಲ್ಲಿನ ಕಟ್ಟೆ ಮಾದರಿಯ ರಚನೆ ಇದೆ. ಇದಕ್ಕೆ ಪೂಜೆ ನಡೆಸಲಾಗುತ್ತಿದೆ. ಬಲ್ಲೇರಿ ಮಲೆಯಲ್ಲಿ…
ಬಲ್ಲೇರಿ ಮಲೆಯ ತುತ್ತ ತುದಿಗೆ ತಲುಪಿದಂತೆ ಪೂಜೆ, ಪುನಸ್ಕಾರ, ಭಜನೆ ಆರಂಭವಾಗುತ್ತದೆ. ದಿನಚರಿಯ ಜಂಜಡ ಮರೆತು, ತಣ್ಣನೆಯ ಪರಿಸರಕ್ಕೆ ಮೈಯೊಡ್ಡಿ ವಿಶ್ರಮಿಸುವವರು ಕೆಲವರು. ಕಾಡಿನ ಸೊಗಸನ್ನು ಕಣ್ತುಂಬಿಕೊಳ್ಳುವವರು ಇನ್ನೂ ಕೆಲವರು. ಹಿಂದಿನ ವರ್ಷದಿಂದ ಇಲ್ಲಿವರೆಗೆ ಪಾಳುಬಿದ್ದ ಪರಿಸರವನ್ನು ಕುಳಿತುಕೊಳ್ಳಲಷ್ಟೇ ಶುಚಿಗೊಳಿಸುವ ಕಾಯಕದಲ್ಲಿ ಕೆಲವರು ತೊಡಗಿಸಿಕೊಳ್ಳುತ್ತಾರೆ. ಹಲವು ಕಿಲೋ ಮೀಟರ್ ದೂರ ನಡೆದು ಬಂದೆವೆಂಬ ಬಳಲಿಕೆಯನ್ನು ಮರೆಯಿಸಿ, ಕಾಡಿನ ನಡುವೆ ಒಂದಷ್ಟು ಹೊತ್ತನ್ನು ಸುಮಧುರವಾಗಿ ಕಳೆಯುತ್ತಾರೆ. ಇದರ ನಡುವೆ ಏಕಾದಶ ರುದ್ರ, ಗಣಪತಿ ಹೋಮ, ಮೂಲನಾಗನಿಗೆ ತಂಬಿಲ ನಡೆಯಿತು. ಪೂಜೆ ನಡೆದ ಬಳಿಕ ವೈದಿಕರು, ಮೂಲಮೃತ್ತಿಕೆಯನ್ನು ಸಂಗ್ರಹಿಸುತ್ತಾರೆ. ಬಳಿಕ ಕಾರ್ಪಾಡಿ ದೇವಸ್ಥಾನಕ್ಕೆ ಹಿಂದಿರುಗಲಾಗುತ್ತದೆ.