ಹೊಸಪೇಟೆ: ಸ್ಥಳೀಯ ವಿವೇಕಾನಂದ ನಗರ ಬಡಾವಣೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಬಾಲಕ ಸೇರಿದಂತೆ ಆರು ಜನ ಆರೋಪಿಗಳನ್ನು ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಬುಧವಾರ ಬಂಧಿಸಿ, ಬಂಧಿತರಿಂದ 23,94,450 ರು. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ನಿವಾಸಿಗಳಾದ ಆನಂದ್ ಅಲಿಯಾಸ್ ಕುಂಟ (19), ತಾಯಪ್ಪ (19), ಕೆ. ಮಂಜುನಾಥ ಅಲಿಯಾಸ್ ಡಾಲಿ (19), ತುಮಕೂರಿನ ಸಿದ್ದರಾಜು ಅಲಿಯಾಸ್ ಪ್ರಜ್ವಲ್ (19), ನಿತಿನ್ ಆರ್. (19) ಮತ್ತು ಕಾನೂನು ಸಂಘರ್ಷಕ್ಕೊಳಗಾದ ಬಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನಲೆ: ನಗರದ ವಿವೇಕಾನಂದನಗರದ ರಾಘವೇಂದ್ರ ಎಂಬವರ ಮನೆಯಲ್ಲಿ ಅ. 5 ರಿಂದ ಅ.25 ರ ಮಧ್ಯದ ಅವಧಿಯಲ್ಲಿ ಕಳ್ಳತನ ನಡೆಸಲಾಗಿತ್ತು. ಮನೆಮಂದಿಯೆಲ್ಲಾ ಬೆಂಗಳೂರಿಗೆ ತೆರಳಿದ್ದಾಗ ಕಳ್ಳತನ ನಡೆದಿತ್ತು. ಅ.26ರಂದು ನಗರದ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದ ರಾಘವೇಂದ್ರ 508 ಗ್ರಾಂ. ಚಿನ್ನಾಭರಣ, 4 ಕೆಜಿ ಬೆಳ್ಳಿ ಆಭರಣ ಮತ್ತು 2 ರ‍್ಯಾಡೋ ವಾಚ್‌ಗಳನ್ನು ಕಳವು ಮಾಡಲಾಗಿದೆ ಎಂದು ದೂರಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಬಂಧಿತರಿಂದ 20,29,600 ರು. ಮೌಲ್ಯದ 508 ಗ್ರಾಂ. ಚಿನ್ನಾಭರಣ, 1,89,850 ರು. ಮೌಲ್ಯದ 3 ಕೆಜಿ 797 ಗ್ರಾಂ. ತೂಕದ ಬೆಳ್ಳಿ ಆಭರಣ ಮತ್ತು 1,75,000 ರು. ಮೌಲ್ಯದ ಎರಡು ರ‍್ಯಾಡೋ ವಾಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಗ್ರಾಮೀಣ ಠಾಣೆ ಪೊಲೀಸರು ಅನುಮಾನಸ್ಪದವಾಗಿ ಕುಳಿತಿದ್ದ ಹುಡುಗರನ್ನು ಬುಧವಾರ ವಿಚಾರಿಸಿದಾಗ ಅ.24ರ ರಾತ್ರಿ 11 ಗಂಟೆಗೆ ಕಳ್ಳತನ ನಡೆಸಿರುವುದಾಗಿ ಬಂಧಿತರು ಬಾಯ್ಬಿಟ್ಟಿದ್ದಾರೆ. ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿ ಇಬ್ಬರ ವಿರುದ್ಧ ಬೆಂಗಳೂರಿನಲ್ಲೂ ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ವಿಜಯನಗರ ಎಸ್ಪಿ ಡಾ. ಅರುಣ್ ಕೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಪಿಐ ಶ್ರೀನಿವಾಸ್ ಸಿ. ಮೇಟಿ ನೇತೃತ್ವದಲ್ಲಿ ಗ್ರಾಮೀಣ ಠಾಣೆಯ ಸಿಬ್ಬಂದಿಯವರಾದ ಬಿ. ರಾಘವೇಂದ್ರ, ಸುಭಾಸ್, ಎ. ಕೊಟ್ರೇಶ್, ಪ್ರಕಾಶ, ರಮೇಶ, ಜೆ. ಕೊಟ್ರೇಶ, ಅಡಿವೆಪ್ಪ, ಬಿ. ನಾಗರಾಜ, ಚಂದ್ರಪ್ಪ, ವಿ. ನಾಗರಾಜ, ತಿಪ್ಪೇಶ, ಮಲ್ಲಿಕಾರ್ಜುನ, ನಾಗರಾಜ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ತನಿಖಾ ತಂಡದ ಕಾರ್ಯಕ್ಕೆ ಎಸ್ಪಿ ಡಾ. ಕೆ. ಅರುಣ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ : ಅಪ್ಪು ಆದರ್ಶ : ಚಾಮರಾಜನಗರ ಜಿಲ್ಲಾಡಳಿತದಿಂದ ನೇತ್ರದಾನ ಅಭಿಯಾನ