Advertisement

ವಿಜಯನಗರ-ಕೊಪ್ಪಳ ಜಿಲ್ಲೆಗೆ ಮತ್ತೂಂದು ವಿವಿ?

06:30 PM Jul 28, 2021 | Team Udayavani |

„ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ವಿಭಜನೆಯು ಜನರ ಮನಸ್ಸಿನಿಂದ ಮಾಸುವ ಮುನ್ನವೇ ಇದೀಗ ಅವಿಭಜಿತ ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವನ್ನು ಸಹ ಒಡೆಯುವ ಯತ್ನಕ್ಕೆ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಸಾಧಕ-ಬಾಧಕ ಕುರಿತು ವರದಿ ಸಿದ್ಧಪಡಿಸಲು ಸಮಿತಿಯನ್ನೂ ರಚಿಸಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶದ ಬಳ್ಳಾರಿ, ಕೊಪ್ಪಳ ಜಿಲ್ಲೆಗಳು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಹಿನ್ನೆಲೆಯಲ್ಲಿ ಮುನ್ನೆಲೆಗೆ ತರುವ ಹಿತದೃಷ್ಟಿಯಿಂದ ಅಖಂಡ ಬಳ್ಳಾರಿ, ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡು 2010ರಲ್ಲಿ ಬಳ್ಳಾರಿಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಒಂದು ದಶಕವನ್ನು ಪೂರೈಸಿದೆ. ಆದರೆ, ವಿಜಯನಗರ ಜಿಲ್ಲೆಯ ರೂವಾರಿ ಎಂದೇ ಕರೆಯಲಾಗುವ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ಆಶಯದಂತೆ ವಿಜಯನಗರ, ಕೊಪ್ಪಳ ಜಿಲ್ಲೆಗಳಿಗೆ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವ ಪ್ರಸ್ತಾಪ ಇದೀಗ ಸರ್ಕಾರದ ಮುಂದೆ ಇದೆ.ನೂತನ ವಿವಿ ಕೇಂದ್ರಸ್ಥಾನ ಹೊಸಪೇಟೆಯಲ್ಲಿ ಇರಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಡಲಾಗಿದೆ.

ಅದರಂತೆ ಸರ್ಕಾರ ಈಗಾಗಲೇ ಹಾಲಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಕುಲಪತಿ ಆಗಿರುವ ಸಿದ್ದು ಅಲಗೂರ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಈಚೆಗೆ ವಿಎಸ್‌ ಕೆ ವಿವಿಯಲ್ಲೇ ಸಭೆ ನಡೆಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ನೂತನ ವಿವಿ ರಚನೆ ಕುರಿತ ಸಾಧಕ ಬಾಧಕ ಕುರಿತು ವರದಿ ನೀಡುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ. ಕಳೆದ ಸಿಂಡಿಕೇಟ್‌ ಸಭೆಯಲ್ಲಿ ಈ ಕುರಿತು ಚರ್ಚೆಗಳು ಸಹ ನಡೆದಿವೆ ಎಂದು ತಿಳಿದು ಬಂದಿದೆ.

ಬಳ್ಳಾರಿ, ಕೊಪ್ಪಳ ಜಿಲ್ಲೆಗೆ ಮೀಸಲಿರುವ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಹಾಲಿ ಕೊಪ್ಪಳ ಜಿಲ್ಲೆಯ 39, ನೂತನ ವಿಜಯನಗರ ಜಿಲ್ಲೆಯ 39, ಬಳ್ಳಾರಿಯ 34 ಕಾಲೇಜುಗಳು ಉನ್ನತ ಶಿಕ್ಷಣ ಒದಗಿಸುವ ಕೆಲಸಮಾಡುತ್ತಿವೆ. ಒಂದು ವೇಳೆ ಕೊಪ್ಪಳ, ವಿಜಯನಗರ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾನಿಲಯ ಒದಗಿಸಿದ್ದೇ ಆದರೆ ಬಳ್ಳಾರಿಯ ವಿವಿ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂಬಂತೆ ಆಗುತ್ತದೆ. ಆರ್ಥಿಕ ಶಕ್ತಿ ಕಳೆದುಕೊಂಡು ಅನಿವಾರ್ಯವಾಗಿ ಮುಚ್ಚಿಹೋಗುವ ಸ್ಥಿತಿಯೂ ಬರಬಹುದು.

Advertisement

ಮೊದಲೇ ಆರ್ಥಿಕ ಸ್ಥಿತಿ ಕುಂದಿಹೋಗಿರುವ ಈ ದಿನಗಳಲ್ಲಿ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ವಿವಿಗೆ ಪ್ರತ್ಯೇಕ ಅನುದಾನ ಒದಗಿಸುವ ಕಾರ್ಯ ಮಾಡಲಾರದು. ಸಿಂಡಿಕೇಟ್‌ ಸಭೆಯಲ್ಲಿ ಈ ಕುರಿತು ಚರ್ಚೆ ಬಂದಾಗ ಎಲ್ಲರೂ ಹೌಹಾರಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರೇ ಸ್ವತಃ ಪ್ರತ್ಯೇಕ ವಿಶ್ವವಿದ್ಯಾನಿಲಯಕ್ಕೆ ಮನವಿ ಮಾಡಿದ ಕಾರಣಕ್ಕೆ ಯಾರೂ ಸಹ ಈ ಕುರಿತು ಚಕಾರ ಎತ್ತಿಲ್ಲ. ಪ್ರತೇಕ ಜಿಲ್ಲೆಗಾಗಿ ಜಿಲ್ಲಾ ವಿಭಜನೆ ಮಾಡಿದ ಆನಂದ್‌ ಸಿಂಗ್‌ ಅವರು ಇದೀಗ ಉಭಯ ಜಿಲ್ಲೆಗಳ ಸಂಬಂಧ ಹೊಂದಿರುವ ವಿಶ್ವವಿದ್ಯಾನಿಲಯದ ಸಂಬಂಧವನ್ನೂ ಕಳಚಿಕೊಂಡು ಬಳ್ಳಾರಿ ಜೊತೆಗಿನ ನಂಟನ್ನು ಸಂಪೂರ್ಣವಾಗಿ ಕಳಚಿಕೊಳ್ಳಲು ಮುಂದಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

11 ವರ್ಷಗಳ ಹಿಂದಷ್ಟೇ ಆರಂಭವಾದ ವಿವಿ ಎರಡೂ ಜಿಲ್ಲೆಯ 112 ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಬರುವ ಸಾವಿರಾರು ವಿದ್ಯಾರ್ಥಿಗಳ ಅಕ್ಷರ ದಾಹ ತೀರಿಸುತ್ತಿದೆ. ವಿಜಯಗರದ ಅಸ್ಮಿತೆಯಾಗಿ ವಿಜಯನಗರ ಶ್ರೀಕೃಷ್ಣದೇವರಾಯ ಹೆಸರಿನಲ್ಲೇ ನಡೆಯುತ್ತಿದೆ. ಆದರೆ ಇದೀಗ ವಿಜಯನಗರ ಜಿಲ್ಲೆಗಾಗಿ ಈ ವಿವಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆಯೇ ಎಂಬ ಆತಂಕ ಕೆಲವರನ್ನು ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next