ಬಳ್ಳಾರಿ: ಬುಡಾ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಸ್ಥಳಾಂತರ ಬಗ್ಗೆ ಮಾಹಿತಿ ಕೊರತೆಯಿರುವ ಕಾಂಗ್ರೆಸ್ ಮುಖಂಡ ಜೆ.ಎಸ್. ಆಂಜನೇಯಲು ಅವರು ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಪಕ್ಷದ ನಾಯಕರು ನೀಡಿರುವ ಪತ್ರದ ಮೇಲೆಯೇ ಕ್ಯಾಂಟೀನ್ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ತಿರುಗೇಟು ನೀಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ನನ್ನು ಅನಂತಪುರ ರಸ್ತೆ, ಎಂಜಿ ಬಳಿಗೆ ಸ್ಥಳಾಂತರ ಮಾಡುತ್ತಾರೆ. ತೆರವಾದ ಜಾಗವನ್ನು ಶಾಸಕರ ಸಂಬಂಧಿ ಕರಿಗೆ ನೀಡುತ್ತಾರೆ ಎಂಬೆಲ್ಲಾ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಅವರಿಗೆ ಮಾಹಿತಿ ಕೊರತೆಯಿದೆ. ಕಾಂಗ್ರೆಸ್‌ನ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಅವರು ಕಳೆದ 2020 ಜು.25 ರಂದು ಕ್ಯಾಂಟೀನ್ ಸ್ಥಳಾಂತರಕ್ಕೆ ಪತ್ರ ಬರೆದಿದ್ದರು.
ಈ ಪತ್ರವನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿದಾಗ ಅಪರ ಜಿಲ್ಲಾಧಿಕಾರಿಗಳ ಸಲಹೆ ಮೇರೆಗೆ ಅಂದಿನ ಜಿಲ್ಲಾಧಿಕಾರಿಗಳು, ಪೌರಾಡಳಿತ ಆಯುಕ್ತರ ಗಮನ ಸೆಳೆದು ಮುಂದಿನ ಕ್ರಮ ಕೈಗೊಳ್ಳಲಾಗಿದ್ದು, ಇದೀಗ ಅನುಮತಿ ಲಭಿಸಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಜತೆಗೆ ಅಡುಗೆ ಮನೆಯನ್ನು ಸಹ ಬುಡಾ ಆವರಣದಲ್ಲೇ ಸ್ಥಳಾಂತರಿಸುತ್ತೇವೆ ಹೊರತು, ಬೇರೆಕಡೆಯಲ್ಲ ಎಂದು ಸ್ಪಷ್ಟಪಡಿಸಿದರು.
ಕ್ಯಾಂಟೀನ್ ಸ್ಥಳಾಂತರಿಸಿದ ಜಾಗವನ್ನು ಶಾಸಕರ ಸಂಬಂಧಿ ಕರಿಗೆ ನೀಡುವ ಪ್ರಶ್ನೆಯೇ ಇಲ್ಲ ಎಂದು ದಮ್ಮೂರು ಶೇಖರ್, ಆಂಜನೇಯಲು ಅವರು ಸಹ ಬುಡಾ ಅಧ್ಯಕ್ಷರಾಗಿದ್ದವರು. 80-90 ವರ್ಷಗಳಿಗೆ ಲೀಜ್‌ಗೆ ನೀಡಲು ಸರ್ಕಾರದಲ್ಲಿ ಅವಕಾಶವೇ ಇಲ್ಲ. ಸರ್ಕಾರದ ಅಂತಹ ಸುತ್ತೋಲೆಗಳು ಇದ್ದಲ್ಲಿ ನಮಗೆ ಕೊಡಿ. ಕೇವಲ 30 ವರ್ಷಗಳಿಗೆ ಮಾತ್ರ ಲೀಜ್‌ಗೆ ಕೊಡಲು ಕಾನೂನಿನಲ್ಲಿ ಅವಕಾಶವಿದೆ. ಕ್ಯಾಂಟೀನ್ ಜಾಗದಲ್ಲಿ ಬುಡಾ ವತಿಯಿಂದಲೇ 6 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದವರು ಪ್ರತಿಪಾದಿಸಿದರು.
80 ಲಕ್ಷ ರೂ. ಅವ್ಯವಹಾರ: ಕಾಂಗ್ರೆಸ್‌ನ ಜೆ.ಎಸ್. ಆಂಜನೇಯಲು ಬುಡಾ ಅಧ್ಯಕ್ಷರಾಗಿದ್ದ ಅವ ಧಿ ಯಲ್ಲಿ ಸುಮಾರು 80 ಲಕ್ಷ ರೂ.ಗಳಷ್ಟು ಅವ್ಯವಹಾರ ನಡೆದಿದೆ. ಪಾರ್ಕ್, ರಸ್ತೆ ಸೇರಿ ಇನ್ನಿತರೆಡೆಗಳಲ್ಲಿ ಕಾಮಗಾರಿಗಳಿಗೆ ನಿಗದಿಗಿಂತ ಹೆಚ್ಚುವರಿಯಾಗಿ ಹಣ ಖರ್ಚು ಮಾಡಿರುವ 16-20 ಗುತ್ತಿಗೆದಾರರು ಬಿಲ್‌ಗಾಗಿ ಈ ಬುಡಾಕ್ಕೆ ಅಲೆಯುತ್ತಿದ್ದಾರೆ.
ಹೀಗೆ ಸಾಕಷ್ಟು ಅವ್ಯವಹಾರ ನಡೆದಿದ್ದು ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. ಪುತ್ಥಳಿ ಪ್ರತಿಷ್ಠಾಪನೆ: ನಗರದ ವಿವಿಧ ಉದ್ಯಾನವನ, ಪ್ರದೇಶಗಳಲ್ಲಿ ಸ್ವಾಮಿ ವಿವೇಕಾನಂದ, ಪೈಲ್ವಾನ್ ರಂಜಾನ್‌ಸಾಬ್, ಹರಗಿನಡೋಣಿ ಸಣ್ಣ ಬಸವನಗೌಡ, ಸಾವಿತ್ರಿಬಾಯಿ ಪೂಲೆ, ಬಹದ್ದೂರ್ ಶೇಷಗಿರಿರಾವ್, ಡಾ| ಜೋಳದರಾಶಿ ದೊಡ್ಡನಗೌಡ, ಡಾ| ಸುಭದ್ರಮ್ಮ ಮನ್ಸೂರ್ ಅವರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು. ಜು.27ರಂದು ದೊಡ್ಡನಗೌಡರ ಪುತ್ಥಳಿ ಅನಾವರಣ ಗೊಳಿಸಲಾಗುವುದು ಎಂದವರು ತಿಳಿಸಿದರು.