Advertisement
ಬಳ್ಳಾರಿ: ಕೋವಿಡ್ ಸೋಂಕು ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ ಮೂರನೇ ಅಲೆ ಆವರಿಸುವ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿದ್ದು, ಸಮರ್ಥವಾಗಿ ಎದುರಿಸಲು ಮುಂದಾಗಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ರಾಜ್ಯದಲ್ಲೇ ಮೊದಲ ಬಾರಿಗೆ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡುವುದರ ಜತೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
Related Articles
Advertisement
ಉಭಯ ಜಿಲ್ಲೆಗಳ ಎಲ್ಲ ತಾಲೂಕು ಆಸ್ಪತ್ರೆ, ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆಗಳಲ್ಲಿನ ನರ್ಸ್‌ಗಳು ತರಬೇತಿ ಪಡೆಯುತ್ತಿದ್ದಾರೆ. 50 ನರ್ಸ್‌ಗಳುಳ್ಳ ಒಟ್ಟು 6 ಗುಂಪುಗಳನ್ನು ರಚನೆ ಮಾಡಲಾಗಿದೆ. ಮೊದಲ 50 ನರ್ಸ್‌ಗಳ ಗುಂಪಿಗೆ ಈಗಾಗಲೇ ತರಬೇತಿ ಕಾರ್ಯ ಆರಂಭವಾಗಿದ್ದು, ಮಕ್ಕಳ ತಜ್ಞರು, ಅರವಳಿಕೆ ತಜ್ಞರು ತರಬೇತಿ ನೀಡುತ್ತಿದ್ದಾರೆ.
ಐಸಿಯು ವಾರ್ಡ್‌ಗಳಲ್ಲಿ ದಾಖಲಾಗುವ ಸೋಂಕಿತ ಮಕ್ಕಳಿಗೆ ಆಕ್ಸಿಜನ್ ಹೇಗೆ ಅಳವಡಿಸಬೇಕು? ಔಷಧ ಹೇಗೆ ನೀಡಬೇಕು? ಮಕ್ಕಳೊಂದಿಗೆ ಐಸಿಯು ವಾರ್ಡ್‌ಗೆ ಬರುವ ಪೋಷಕರಲ್ಲಿ ಭಯ, ಆತಂಕಕ್ಕೊಳಗಾಗುವ ಸಾಧ್ಯತೆಯಿದ್ದು, ಅಂಥವರಿಗೆ ಕೌನ್ಸೆಲಿಂಗ್ ಮಾಡುವ ಮೂಲಕ ಅವರಲ್ಲಿನ ಭಯ, ಆತಂಕವನ್ನು ದೂರ ಮಾಡುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ತರಬೇತಿಯಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ತಿಳಿಸಿದರು.
ಮಕ್ಕಳ ವೆಂಟಿಲೇಟರ್ ಸಿದ್ಧತೆ: ಕೋವಿಡ್ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಈಗಾಗಲೇ ಅಗತ್ಯ ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗಾಗಿ ಪ್ರತ್ಯೇಕ ಪೀಡಿಯಾಟ್ರಿಕ್ ವೆಂಟಿಲೇಟರ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ.
ಸೋಂಕಿತ ಮಕ್ಕಳೊಂದಿಗೆ ತಾಯಂದಿರೂ ಇರುತ್ತಾರೆ. ಅವರನ್ನು ಹೇಗೆ ಆರೈಕೆ ಮಾಡಬೇಕು ಎಂಬುದರ ಕುರಿತು ತರಬೇತಿ ನೀಡಲಾಗುತ್ತದೆ. ರಾಜ್ಯದಲ್ಲೇ ಮೊದಲು: ಕೋವಿಡ್ ಸೋಂಕು ಎರಡನೇ ಅಲೆಯಿಂದ ಸಾಕಷ್ಟು ಅನುಭವ ಆಗಿರುವ ಹಿನ್ನೆಲೆಯಲ್ಲಿ ಮೂರನೇ ಅಲೆಗೂ ಮುನ್ನ ಎಚ್ಚೆತ್ತುಕೊಂಡಿರುವ ವಿಮ್ಸ್, ಜಿಲ್ಲಾಡಳಿತ, ಆರೋಗ್ಯ ಇಲಾಖೆ ರಾಜ್ಯದಲ್ಲೇ ಮೊದಲ ಬಾರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಐಸಿಯುನಲ್ಲಿ ಕಾರ್ಯನಿರ್ವಹಿಸುವ ಸ್ಟಾಫ್ ನರ್ಸ್‌ಗಳಿಗೆ ತರಬೇತಿ ನೀಡಲಾಗುತ್ತಿದೆ.
ಬಳ್ಳಾರಿಯಲ್ಲಿ ಯಶಸ್ವಿಯಾದಲ್ಲಿ ರಾಜ್ಯವ್ಯಾಪಿ ವಿಸ್ತರಿಸುವ ಸಾಧ್ಯತೆಯಿದೆ. ಕೋವಿಡ್ ಮೊದಲ ಅಲೆ ಅನುಭವವಾಗಿದ್ದರೂ, ಎರಡನೇ ಅಲೆಯಲ್ಲಿ ಆಕ್ಸೀಜನ್, ವೆಂಟಿಲೇಟರ್, ಬೆಡ್‌ಗಳ ಕೊರತೆಗಳಿಂದ ಸಾಕಷ್ಟು ಸಾವು-ನೋವು ಸಂಭವಿಸಿತು. ಇದೀಗ ಮೂರನೇ ಅಲೆ ಆವರಿಸುವುದಕ್ಕೂ ಮುಂಜಾಗ್ರತೆ ವಹಿಸಿಕೊಂಡರೂ ಎಷ್ಟರ ಮಟ್ಟಿಗೆ ನಿಯಂತ್ರಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.