ಸಿರುಗುಪ್ಪ: ಕೂರಿಗೆ ಭತ್ತದ ಬಿತ್ತನೆಯಿಂದ ಹೆಚ್ಚುಲಾಭ, ಕಡಿಮೆ ಖರ್ಚು. ಆದ್ದರಿಂದ ರೈತರು ಕೂರಿಗೆ ಭತ್ತದ ಬಿತ್ತನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹಮ್ಮದ್ ತಿಳಿಸಿದರು.
ಕೃಷಿ ಸಂಶೋಧನಾ ಕೇಂದ್ರದಿಂದ ಏರ್ಪಡಿಸಿದ್ದ ತಾಲೂಕಿನ ನೆಹರುನಗರ ಕ್ಯಾಂಪ್‌ನ ನಾಗಭೂಷಣಂ ಹೊಲದಲ್ಲಿ ಕೂರಿಗೆಯಿಂದ ಭತ್ತ ಬಿತ್ತನೆ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ತಾಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿ ನಾಟಿ ಪದ್ಧತಿಯಲ್ಲಿ ರೈತರು ಭತ್ತ ಬೆಳೆಯುವುದರಿಂದ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ.
ನಾಟಿಗೆ ಸಮಯಕ್ಕೆ ಸರಿಯಾಗಿ ನೀರು ಸಿಗದೇ ಇರುವುದು, ಅಸಮರ್ಪಕ ನೀರಿನ ಬಳಕೆಯಿಂದ ಕಾಲುವೆ ಕೊನೆ ಪ್ರದೇಶಗಳಿಗೆ ನೀರು ದೊರೆಯದೇ ಇರುವುದು, ಕೃಷಿ ಕಾರ್ಮಿಕರ ಕೊರತೆ, ಅ ಧಿಕ ಖರ್ಚು ಮತ್ತು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಭೂಮಿ ಫಲವತ್ತತೆ ಇತ್ಯಾದಿ ಈ ಎಲ್ಲ ಸಮಸ್ಯೆಗಳಿಗೆ ಕೂರಿಗೆ ಭತ್ತದ ಬೇಸಾಯ ಮಾಡುವುದು ಉತ್ತಮ ಪರಿಹಾರವಾಗಿದೆ.
ಮುಂಗಾರು ಹಂಗಾಮಿಗೆ ಮುನ್ನ ಜಮೀನನ್ನು ಉಳುಮೆ ಮಾಡಿ ಹದವಾಗಿ ತಯಾರಿಸಬೇಕು. ಬಿತ್ತುವ ಸಮಯದಲ್ಲಿ ಹಸಿ ಚೆನ್ನಾಗಿದ್ದರೆ ಮೂಲ ಗೊಬ್ಬರವನ್ನು ಭತ್ತದ ಜೊತೆಗೆ ಹಾಕುವುದು ಉತ್ತಮ, ಟ್ರಾಕ್ಟರ್ ಚಾಲಿತ ಕೂರಿಗೆಯಿಂದ ಭತ್ತ ಬಿತ್ತನೆ ಮಾಡಬಹುದು. ಸೂಕ್ತ ಸಮಯದಲ್ಲಿ ಬಿತ್ತನೆ, ನಾಟಿ ಪದ್ಧತಿಯಲ್ಲಿ ಭೂಮಿ ತಯಾರಿಸುವ ವೆಚ್ಚ ಮತ್ತು ಸಸಿ ಮಡಿ ತಯಾರಿಸಿ ಅದನ್ನು ಸಂರಕ್ಷಿಸುವ ಖರ್ಚನ್ನು ಉಳಿಸಬಹುದು.
ಬಿತ್ತನೆಗೆ ಎಕರೆಗೆ 8-12 ಕಿಗ್ರಾಂ ಬೀಜ ಸಾಕು, ಎಕರೆಗೆ 8-10 ಲೀಟರ್ ಇಂಧನ ಉಳಿತಾಯ ಮತ್ತು ವಾಯುಮಾಲಿನ್ಯ ಕಡಿಮೆ, ಕೂರಿಗೆ ಭತ್ತದ ಬೇಸಾಯದಿಂದ ನೀರಿನ ಉಳಿತಾಯ ಹಾಗೂ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಒದಗಿಸಬಹುದು. ಆಳುಗಳ ಬೇಡಿಕೆ ಕಡಿಮೆ, ಅತಿಯಾದ ನೀರಿನ ಬಳಕೆಯಿಂದಾಗುವ ಕೆಟ್ಟ ಪರಿಣಾಮಗಳನ್ನು ತಡೆಯಬಹುದು.
ಕೀಟ, ರೋಗದ ಬಾಧೆ ಕಡಿಮೆ ಮತ್ತು ಇಳುವರಿಯು ಉತ್ತಮವಾಗಿ ಬರುತ್ತದೆ. ತಾಲೂಕಿನಲ್ಲಿ ಈ ವರ್ಷ 5 ಸಾವಿರ ಎಕರೆ ಪ್ರದೇಶದಲ್ಲಿ ಕೂರಿಗೆಯಿಂದ ಭತ್ತ ಬಿತ್ತನೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಕೃಷಿ ವಿಜ್ಞಾನಿ ಎಂ.ಎ. ಬಸವಣ್ಣೆಪ್ಪ ಮಾತನಾಡಿದರು.