Advertisement

ಮೇಯರ್‌-ಉಪಮೇಯರ್‌ ಆಯ್ಕೆ ವಿಳಂಬಕ್ಕೆ ಕೈ ಗರಂ

09:57 PM Jul 07, 2021 | Team Udayavani |

„ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ: ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಎರಡು ತಿಂಗಳು ಗತಿಸಿದರೂ ಅಧಿಸೂಚನೆ ಹೊರಡಿಸದೆ, ಮೇಯರ್‌ -ಉಪಮೇಯರ್‌ ಆಯ್ಕೆಗೆ ಚುನಾವಣೆ ನಡೆಸದೆ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್‌ ಬಳ್ಳಾರಿ ಜಿಲ್ಲಾ ಸಮಿತಿ ಹೈಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದ್ದು ಇನ್ನೆರಡು ದಿನಗಳಲ್ಲಿ ದಾವೆ ಹೂಡಲು ಸಿದ್ಧತೆ ನಡೆಸಿದೆ.

ಬಳ್ಳಾರಿ ಮಹಾನಗರ ಪಾಲಿಕೆಗೆ 8 ವರ್ಷಗಳ ಬಳಿಕ ಕಳೆದ ಏಪ್ರಿಲ್‌ 27ರಂದು ಮತದಾನ ನಡೆದು ಏ. 30ರಂದು ಫಲಿತಾಂಶ ಹೊರಬಿತ್ತು. ಚುನಾವಣೆಯಲ್ಲಿ 39ರಲ್ಲಿ 21 ಸ್ಥಾನಗಳಲ್ಲಿ ಕಾಂಗ್ರೆಸ್‌, 5 ಸ್ಥಾನಗಳಲ್ಲಿ ಪಕ್ಷೇತರರು (ಕಾಂಗ್ರೆಸ್‌ ಬಂಡಾಯ), 13 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿತು. ಪಾಲಿಕೆಯಲ್ಲಿ ಸತತ ಎರಡನೇ ಬಾರಿಗೆ ಅಧಿಕಾರ ನಡೆಸಲು ಕಾಂಗ್ರೆಸ್‌ ಸಂಪೂರ್ಣ ಬಹುಮತ ಲಭಿಸಿದೆಯಾದರೂ, ಚುನಾವಣೆ ನಡೆದು ಎರಡು ತಿಂಗಳು ಗತಿಸಿದರೂ, ರಾಜ್ಯ ಸರ್ಕಾರ ನೂತನ ಸಮಿತಿಗೆ ಅಧಿಸೂಚನೆ ಹೊರಡಿಸದೆ ಮೇಯರ್‌ -ಉಪಮೇಯರ್‌ ಆಯ್ಕೆಗೆ ಚುನಾವಣೆಯನ್ನೂ ನಡೆಸದೆ ವಿಳಂಬ ಮಾಡುತ್ತಿದೆ.

ಮೇಲಾಗಿ ಮುಂದಿನ 6 ತಿಂಗಳವರೆಗೆ ಮೇಯರ್‌-ಉಪಮೇಯರ್‌ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಿದೆ. ಸರ್ಕಾರದ ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಜಿಲ್ಲಾ ಸಮಿತಿ ಹೈಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದ್ದು, ಸಿದ್ಧತೆ ನಡೆಸಿದೆ.

ಮಾಜಿ ಸಂಸದರೊಂದಿಗೆ ಚರ್ಚೆ: ಈ ಬಗ್ಗೆ ಮಾಜಿ ಸಂಸದ, ಕಾನೂನು ತಜ್ಞ ವಿ.ಎಸ್‌. ಉಗ್ರಪ್ಪ ಅವರೊಂದಿಗೆ ಕಾಂಗ್ರೆಸ್‌ ಜಿಲ್ಲಾ ಸಮಿತಿಯು ಚರ್ಚಿಸಿ, ಹೈಕೋರ್ಟ್‌ ಮೊರೆ ಹೋಗುವ ನಿರ್ಣಯ ಕೈಗೊಳ್ಳಲಾಗಿದೆ. ಆಡಳಿತ ಪಕ್ಷದ ಸ್ಥಳೀಯ ಜನಪ್ರತಿನಿಧಿಗಳು ಪಾಲಿಕೆಯನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಅ ಧಿಕಾರ ಚಲಾಯಿಸಲು ಯತ್ನಿಸುತ್ತಿದ್ದಾರೆ.

Advertisement

ಹಾಗಾಗಿ ಮೇಯರ್‌-ಉಪಮೇಯರ್‌ ಆಯ್ಕೆ ಚುನಾವಣೆ ವಿಳಂಬವಾಗಲು ಕಾರಣವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಕಾಂಗ್ರೆಸ್‌ ಜಿಲ್ಲಾ ಸಮಿತಿ ಈ ನಿರ್ಣಯಕ್ಕೆ ಬಂದಿದ್ದು, ಇನ್ನೆರಡು ದಿನಗಳಲ್ಲಿ ಉಗ್ರಪ್ಪ ಅವರು ಹೈಕೋರ್ಟ್‌ನಲ್ಲಿ ದಾವೆ ಹೂಡಲಿದ್ದಾರೆ ಎಂದು ತಿಳಿದು ಬಂದಿದೆ.

ಆಪರೇಷನ್‌ ಕಮಲ ಭೀತಿ: ಪಾಲಿಕೆ ಚುನಾವಣೆಯಲ್ಲಿ ಬಹುಮತಕ್ಕೆ ಬೇಕಾದ ಸ್ಥಾನಗಳಲ್ಲಿ ಗೆಲ್ಲಲು ವಿಫಲವಾಗಿರುವ ಬಿಜೆಪಿ ಮುಖಂಡರು, ಆಪರೇಷನ್‌ ಕಮಲದ ಮೂಲಕ ಪಾಲಿಕೆ ಅಧಿಕಾರ ಹಿಡಿಯಲು ತೆರೆಮರೆ ಯತ್ನ ನಡೆಸಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷೇತರರು ಸೇರಿ ಹತ್ತಕ್ಕೂ ಹೆಚ್ಚು ಸದಸ್ಯರು ಬಿಜೆಪಿಯವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಹೀಗಾಗಿ ಮೂವರು ಪಕ್ಷೇತರ ಸದಸ್ಯರಾದ 15ನೇ ವಾರ್ಡ್‌ನ ನೂರ್‌ ಮಹ್ಮದ್‌, 17ನೇ ವಾರ್ಡ್‌ನ ಕವಿತಾ ಹೊನ್ನಪ್ಪ, 32ನೇ ವಾಡ್‌ ìನ ಮಂಜುಳಾ ಉಮಾಪತಿ ಅವರನ್ನು ಈಗಾಗಲೇ ಕಾಂಗ್ರೆಸ್‌ ಪಕ್ಷ ತನ್ನ ತೆಕ್ಕೆಗೆ ಸೇರಿಸಿಕೊಂಡು ತನ್ನ ಸದಸ್ಯ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಂಪೂರ್ಣ ಬಹುಮತ ಹೊಂದಿರುವ ಕಾಂಗ್ರೆಸ್‌ ಪಕ್ಷಕ್ಕೆ ಆಡಳಿತ ಪಕ್ಷದವರಿಂದ ಯಾವುದೇ ತೊಡಕಾಗದಿರಲಿ, ತ್ವರಿತವಾಗಿ ಮೇಯರ್‌-ಉಪಮೇಯರ್‌ ಆಯ್ಕೆಗೆ ಚುನಾವಣೆ ನಡೆಯಲಿ ಎಂಬ ಉದ್ದೇಶದಿಂದ ಹೈಕೋರ್ಟ್‌ ಮೊರೆ ಹೋಗುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next