ಆರ್.ಬಸವರೆಡ್ಡಿ ಕರೂರು
ಸಿರುಗುಪ್ಪ: ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಮೊಸಳೆಗಳು ಕಾಣಿಸಿಕೊಂಡಿರುವ ಮತ್ತು ಕಾಣಿಸಿಕೊಳ್ಳುತ್ತಿರುವ ಸ್ಥಳಗಳಲ್ಲಿ ಮೊಸಳೆಗಳಿವೆ ಎನ್ನುವ ಎಚ್ಚರಿಕೆ ನಾಮಫಲಕಗಳನ್ನು ಅಳವಡಿಸಬೇಕೆಂದು ಅರಣ್ಯಾಧಿಕಾರಿಗಳಿಗೆ ತಹಶೀಲ್ದಾರರೇ ಖುದ್ದಾಗಿ ತಿಳಿಸಿದ್ದರೂ ಇಲ್ಲಿಯವರೆಗೆ ಅರಣ್ಯ ಇಲಾಖೆ ಅಧಿಕಾರಿಗಳ ಮಾತ್ರ ನಾಮಫಲಕ ಅಳವಡಿಸಲು ಮುಂದಾಗಿಲ್ಲ.
ತಾಲೂಕಿನ ದೇಶನೂರು ಮತ್ತು ಬಾಗೇವಾಡಿ, ಇಬ್ರಾಹಿಂಪುರ ಗ್ರಾಮದ ಹತ್ತಿರ ಹರಿಯುವ ತುಂಗಭದ್ರಾ ನದಿ ದಂಡೆಯಲ್ಲಿ ಇತ್ತೀಚೆಗೆ ಮೊಸಳೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ದೇಶನೂರು ಹತ್ತಿರದ ಹರಿಗೋಲ್ ಘಾಟ್‌ನಲ್ಲಿ ದೊಡ್ಡ ಸಂಖ್ಯೆಯ ಮೊಸಳೆಗಳು ಕಾಣಿಸಿಕೊಳ್ಳುತ್ತಿದ್ದು ಈ ಘಾಟ್‌ನಲ್ಲಿ ಮೀನು ಹಿಡಿಯಲು ಹೋಗುವವರ ಸಂಖ್ಯೆಯು ಹೆಚ್ಚಾಗಿದೆ.
ಅಲ್ಲದೆ ದನಕರುಗಳು ಕೂಡ ಇಲ್ಲಿ ನೀರು ಕುಡಿಯಲು ಬರುತ್ತವೆ. ಈ ಜಾಗದಲ್ಲಿ ಹೆಚ್ಚಾಗಿ ಮೊಸಳೆಗಳಿದ್ದು ಈ ಜಾಗದಲ್ಲಿಯೇ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬನ ಮೇಲೆ ದೊಡ್ಡ ಗಾತ್ರದ ಮೊಸಳೆಯೊಂದು ದಾಳಿ ಮಾಡಿದ ಪರಿಣಾಮ ನಗರದ ವ್ಯಕ್ತಿಯೊಬ್ಬರು 2 ವರ್ಷದ ಹಿಂದೆ ಸಾವನ್ನಪ್ಪಿದ್ದರು. ಆಗ ತಹಶೀಲ್ದಾರರು ಈ ಜಾಗದಲ್ಲಿ ಮೊಸಳೆಗಳಿರುವ ಬಗ್ಗೆ ಎಚ್ಚರಿಕೆ ನಾಮಫಲಕಗಳನ್ನು ಅಳವಡಿಸಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದ್ದರು.
ಇತ್ತೀಚೆಗೆ ದೇಶನೂರು ಗ್ರಾಮದ ತೋಟಗಾರಿಕೆ ಸಸ್ಯ ಕ್ಷೇತ್ರದಲ್ಲಿ ಮೊಸಳೆಗಳ ಹಿಂಡು ಕಾಣಿಸಿಕೊಂಡಿತ್ತು. ಇಬ್ರಾಹಿಂಪುರ ಗ್ರಾಮದ ಸೇತುವೆ ಹತ್ತಿರವೂ ಮೊಸಳೆ ಮರಿಯೊಂದು ರಸ್ತೆಗೆ ಬಂದು ವಿಶ್ರಾಂತಿ ಪಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಪಾತ್ರದಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚಾಗಿ ಮೊಸಳೆಗಳು ಕಾಣಿಸಿಕೊಳ್ಳುತ್ತಿರುವ ಜಾಗಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮೊಸಳೆಗಳಿರುವ ಬಗ್ಗೆ ನಾಮಫಲಕಗಳನ್ನು ಅಳವಡಿಸಬೇಕೆಂದು ಹಲವು ಬಾರಿ ತಹಶೀಲ್ದಾರ್‌ರು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಇಲ್ಲಿಯವರೆಗೆ ತಹಶೀಲ್ದಾರ್ ರ ಸೂಚನೆಯನ್ನು ಪಾಲಿಸಲು ಮುಂದಾಗಿಲ್ಲ.