ಹೊಸಪೇಟೆ: ಆಂಧ್ರ ಪ್ರದೇಶದ ಗುತ್ತಿಯಿಂದ ಹೊಸಪೇಟೆವರೆಗಿನ 95 ಕಿಮೀ ಉದ್ದದ ರಾಷೀóಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ವಾಹನ ಸಂಚಾರಕ್ಕೆ ಕಂಠಕ ಪ್ರಾಯವಾಗುತ್ತಿದೆ. ಗುತ್ತಿ-ಹೊಸಪೇಟೆ ವರೆಗಿನ 95 ಕಿಮೀ ಹೆದ್ದಾರಿ ನಿರ್ಮಾಣಕ್ಕೆ ಅಂದಾಜು 870 ಕೋಟಿ. ರೂಗೆ ಗ್ಯಾಮನ್ ಇಂಡಿಯಾ ಎಂಬ ಖಾಸಗಿ ಕಂಪನಿ ಗುತ್ತಿಗೆ ಪಡೆದಿದೆ.
ಗುತ್ತಿಗೆ ಅವ ಧಿ ಪ್ರಕಾರ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ ನಾಲ್ಕು ವರ್ಷ ಪೂರ್ಣಗೊಂಡು ಐದನೇ ವರ್ಷಕ್ಕೆ ಕಾಲಿರಿಸಿದರೂ ಕಾಮಗಾರಿ ಮಾತ್ರ ಇನ್ನೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ಅವೈಜ್ಞಾನಿಕ ಮೇಲ್ಸೇತುವೆ: ಫ್ಲೈ ಓವರ್ ನಿರ್ಮಿಸಲಾಗಿರುವ ಸೇತುವೆ ಅವೈಜ್ಞಾನಿಕವಾಗಿದ್ದು, ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಹೆದ್ದಾರಿಯಲ್ಲಿ ಸಂಡೂರು ಮಾರ್ಗವಾಗಿ ಬರುವ ವಾಹನಗಳು ನೇರವಾಗಿ ಎನ್.ಎಚ್.63ಕ್ಕೆ ಸಂಪರ್ಕ ಕಲ್ಪಿಸುವ ವೇಳೆ ಫ್ಲೈ ಓವರ್ ಮೇಲೆ ಹಾದು ಹೋಗುವಂತೆ ಯೋಜನೆ ರೂಪಿಸಲಾಗಿದೆ. ಆದರೆ, ಫ್ಲೈ ಓವರ್ ನಿರ್ಮಿಸುವ ಮೊದಲು ಸರ್ವಿಸ್ ರಸ್ತೆಯನ್ನು ತಾತ್ಕಾಲಿಕವಾಗಿ ನಿರ್ಮಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಹೊಸಪೇಟೆ ನಗರದಿಂದ ದಾವಣಗೆರೆ ಕಡೆಗೆ ತೆರಳುವ ಮತ್ತು ಕೊಪ್ಪಳ ಕಡೆಯಿಂದ ಸಂಡೂರು ಮಾರ್ಗದ ಕಡೆಗೆ ತೆರಳುವ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಟ್ರಾಫಿಕ್ ಸಮಸ್ಯೆ: ಈ ಮಾರ್ಗವಾಗಿ ನಿತ್ಯ ಎರಡು ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಬಳ್ಳಾರಿಯಿಂದ ಹೊಸಪೇಟೆ ಮಾರ್ಗವಾಗಿ ಕೊಪ್ಪಳ, ವಿಜಯಪುರ, ಬಾಗಲಕೋಟೆ, ದಾವಣಗೆರೆ, ಶಿವಮೊಗ್ಗದ ಕಡೆಗೆ ತೆರಳುವ ಬಹುತೇಕ ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ಸರ್ವೀಸ್ ರಸ್ತೆಯೂ ಇಕ್ಕಟ್ಟಾಗಿರುವ ಕಾರಣ ಭಾರಿ ಗಾತ್ರದ ವಾಹನಗಳು ಅಡ್ಡದಿಡ್ಡಿಯಾಗಿ ನಿಲ್ಲುವ ಜತೆಗೆ ದಿಬ್ಬವನ್ನು ಹೇರದೆ ಹಿಂದಕ್ಕೆ ಮುಂದಕ್ಕೆ ಚಲಿಸುತ್ತಾ ನಿಲ್ಲುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ಇಬ್ಬರು, ಮೂವರು ಸಂಚಾರ ಠಾಣೆ ಪೊಲೀಸರನ್ನು ನಿಯೋಜಿಸಿದ್ದರೂ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ. ಇಲ್ಲಿನ ಟ್ರಾಫಿಕ್ ಸಮಸ್ಯೆ ಪೊಲೀಸರಿಗೂ ತಲೆ ನೋವು ತರಿಸಿದೆ.
ಧೂಳು ಸಮಸ್ಯೆ ಹೇಳತೀರದು: ಸಂಡೂರು ಕಡೆಯಿಂದ ಬರುವ ಹೆಚ್ಚಿನ ಸಂಖ್ಯೆಯ ಮೈನಿಂಗ್ ಲಾರಿಗಳಿಂದ ಧೂಳಿನ ಸಮಸ್ಯೆ ಹೆಚ್ಚಾಗಿದೆ. ಫ್ಲೆಓವರ್ ನಿರ್ಮಾಣಕ್ಕಾಗಿ ಸೇತುವೆ ನಿರ್ಮಿಸಿದ್ದು, ಅಕ್ಕಪಕ್ಕದ ಜಾಗ ಮಣ್ಣಿನಿಂದ ಕೂಡಿದೆ. ಭಾರಿ ಗಾತ್ರದ ಲಾರಿ, ಮೈನಿಂಗ್ ಲಾರಿಗಳಿಂದ ಕೆಲ ಬಾರಿ ರಸ್ತೆಯೇ ಕಾಣದಂತೆ ಧೂಳು ಆವರಿಸುತ್ತಿದೆ.