Advertisement

Ballari: ಸರಕಾರದ ಬಳಿ ಹಣವಿಲ್ಲವೆಂದು ಬಿಜೆಪಿಯ ಪೆದ್ದ ಶಿಖಾಮಣಿಗಳಿಂದಷ್ಟೇ ಅಪಪ್ರಚಾರ: ಸಿಎಂ

06:17 PM Oct 14, 2024 | Team Udayavani |

ಬಳ್ಳಾರಿ: ರಾಜ್ಯ ಸರಕಾರದ ಬಳಿ ಹಣವಿಲ್ಲ ಎಂದು ಬಿಜೆಪಿಯ ಪೆದ್ದ ಶಿಖಾಮಣಿಗಳು ಸುಳ್ಳು ಹೇಳುತ್ತಾ ಕುಳಿತಿದ್ದಾರೆ. ಸರಕಾರದಲ್ಲಿ ಹಣವಿಲ್ಲದಿದ್ದರೆ ಬರೀ ಸಂಡೂರಿನ ಅಭಿವೃದ್ಧಿಗಾಗಿಯೇ ಕಳೆದ ಒಂದು ವರ್ಷದಲ್ಲಿ ಈ.ತುಕಾರಾಮ್ 1,200 ಕೋಟಿ ರೂಪಾಯಿ ಅನುದಾನ ತರಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿ  ಕ್ಷೇತ್ರದ ಉಪ ಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಣಕಹಳೆ ಮೊಳಗಿಸಿದರು.

Advertisement

ಸಂಡೂರು ತಾಲೂಕಿನಲ್ಲಿ ಸರ್ಕಾರದ ಸಾಧನಾ ಸಮಾವೇಶ ಉದ್ಘಾಟಿಸಿ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಯೋಜನೆಗಳ ಸಂಡೂರು ಜನತೆಗೆ ಅರ್ಪಿಸಿ ಮಾತನಾಡಿ ಈ.ತುಕಾರಾಮ್ ಈ ಬಾರಿ ಶಾಸಕರಾದ ಬಳಿಕ 1,200 ಕೋಟಿ ಅನುದಾನ ಸಂಡೂರು ಜನತೆಗಾಗಿ ತಂದಿದ್ದಾರೆ. ಅಭಿವೃದ್ಧಿ ಎಂದರೆ ತುಕಾರಾಮ್. ತುಕಾರಾಮ್ ಎಂದರೆ ಅಭಿವೃದ್ಧಿ ಎನ್ನುವ ಮೂಲಕ ಉಪ ಚುನಾವಣೆಯಲ್ಲಿ  ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಉಪ ಚುನಾವಣೆಯಲ್ಲಿ ಬಿಜೆಪಿಯ ಸೋಲಿಸಿ: 
ಸಂಡೂರಿನಲ್ಲಿ 12 ಸಾವಿರ ಮನೆಗಳನ್ನು ಕಟ್ಟಿ ಕ್ಷೇತ್ರದ ಜನರಿಗೆ ಹಂಚಿಕೆ ಮಾಡಿರುವುದರ ಶ್ರೇಯಸ್ಸು ಸಂತೋಷ್ ಲಾಡ್- ಈ.ತುಕಾರಾಮ್ ಜೋಡಿಗೆ ಸಲ್ಲಬೇಕು. ನನ್ನ ವಿರುದ್ಧ ಷಡ್ಯಂತ್ರ, ಪಿತೂರಿ ನಡೆಸುತ್ತಿರುವ ಬಿಜೆಪಿಯ ಉಪ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಿ. ಈ.ತುಕಾರಾಮ್ ನನ್ನ ಬಲವಂತಕ್ಕೆ, ಪಕ್ಷದ ಮಾತಿಗೆ ಬೆಲೆ ಕೊಟ್ಟು ಲೋಕಸಭೆಗೆ ಸ್ಪರ್ಧಿಸಿದರು. ಈ.ತುಕರಾಮ್  ಸಂಡೂರು ಜನತೆಯ ಮೇಲೆ ಬಹಳ ಪ್ರೀತಿ, ವಿಶ್ವಾಸವಿಟ್ಟುಕೊಂಡಿದ್ದಾರೆ. ಈ.ತುಕಾರಾಮ್ ರಂತಹ ಕಾಯಕ ನಾಯಕ ನಿಮಗೆ ಬೇರೆಲ್ಲೂ ಸಿಗಲ್ಲ. ಹೀಗಾಗಿ ಸಂಡೂರು ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಮೂಲಕ ನಿಮ್ಮ ಆಶೀರ್ವಾದ ಹೀಗೇ ಮುಂದುವರಿಯಲಿ ಎಂದು ಸಿಎಂ ಸಿದ್ದರಾಮಯ್ಯ  ವಿನಂತಿಸಿದರು.

ತೆರಿಗೆ ಹಣಕ್ಕೆ ಕೇಂದ್ರ ಸರ್ಕಾರದಿಂದ ನಿರಂತರ ವಂಚನೆ: 
ಸಂಡೂರಿನ ಜನತೆ ಸೇರಿದಂತೆ ರಾಜ್ಯದ ಜನತೆಗೆ ಐದೈದು ಗ್ಯಾರಂಟಿಗಳನ್ನು 56,000 ಕೋಟಿ ವೆಚ್ಚದಲ್ಲಿ ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಬಿಜೆಪಿಯವರು ಮಾತ್ರ ಸುಳ್ಳುಗಳ ಎರಚುತ್ತಾ ಕುಳಿತಿದ್ದಾರೆ. ಸಂಡೂರಿನ ಜನರ ತೆರಿಗೆ ಹಣಕ್ಕೆ, ರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರ ಸರ್ಕಾರ ನಿರಂತರವಾಗಿ ವಂಚಿಸುತ್ತಿದೆ. ನಿಮಗೆ, ನಮಗೆ ಕೇಂದ್ರದಿಂದ ಬರಬೇಕಾದ ಹಣ ಕೊಡಿ ಎಂದು ಮೋದಿಗೆ ಕೇಳುವ ಧೈರ್ಯ ಬಿಜೆಪಿಗೆ, ವಿಜಯೇಂದ್ರಗೆ ಇಲ್ಲ. ಇದು ಸಂಡೂರು ಹಾಗೂ ರಾಜ್ಯದ ಜನತೆಗೆ ಬಗೆದ ದ್ರೋಹ ಅಲ್ಲವೇ? ತೆರಿಗೆ ಕಟ್ಟುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆದರೆ ನಮ್ಮ ಪಾಲು ವಾಪಸ್ ಕೊಡುವುದರಲ್ಲಿ ಕೇಂದ್ರ ಸರ್ಕಾರ ಕೊನೆ ಸ್ಥಾನದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Advertisement

ಫಲಾನುಭವಿಗಳಿಗೆ ಮನೆ ಹಂಚಿಕೆ ಪತ್ರ ವಿತರಣೆ: 
ರಾಜೀವ್‌ ಗಾಂಧಿ ವಸತಿ ನಿಗಮದ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ಸರ್ವರಿಗೂ ಸೂರು ಯೋಜನೆಯಡಿ ಬಳ್ಳಾರಿ ಜಿಲ್ಲೆಯ ಸಂಡೂರಿನ ಸ್ಕಂದಗಿರಿ ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ 2,172 ಮನೆಗಳ ಪೈಕಿ ಮೊದಲ ಹಂತದಲ್ಲಿ ಪೂರ್ಣಗೊಂಡಿರುವ ಮನೆಗಳ ಮುಖ್ಯಮಂತ್ರಿ ಸಿದ್ದರಾಮಯ್ಯ  ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌  ಲೋಕಾರ್ಪಣೆಗೊಳಿಸಿ, ಫಲಾನುಭವಿಗಳಿಗೆ ಮನೆ ಹಂಚಿಕೆ ಪತ್ರ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next