ಭಾಲ್ಕಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಭಾಷೆ ಕಲಿಕೆ ಅನಿವಾರ್ಯವಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಜೋಳದಾಪಕಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ ಬೀದರ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಆಂಗ್ಲ ಮಾಧ್ಯಮ ವಿಭಾಗ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಖಾಸಗಿ ಶಾಲೆಗಳಲ್ಲಿನ ದುಬಾರಿ ಶುಲ್ಕದಿಂದ ಪಾಲಕರು ಬೇಸತ್ತಿದ್ದಾರೆ. ಇಂಗ್ಲಿಷ್ ಮಾಧ್ಯಮ ಶಿಕ್ಷಣ ಬಡ ಮಕ್ಕಳಿಗೆ ಕನಸಾಗಿತ್ತು. ಆದರೆ, ಮೈತ್ರಿ ಸರಕಾರದ ದಿಟ್ಟ ನಿರ್ಧಾರದಿಂದ ಇಂದು ಬಡ ಮಕ್ಕಳು ಸಹ ಯಾವುದೇ ಶುಲ್ಕವಿಲ್ಲದೇ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯ ಬಹುದಾಗಿದೆ ಎಂದರು. ಪ್ರಾಥಮಿಕ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಆರಂಭದಿಂದಲೇ ಇಂಗ್ಲಿಷ್ ಕಲಿಕೆಗೆ ಆದ್ಯತೆ ನೀಡುವುದರಿಂದ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಯೊಡ್ಡಲು ಸಹಕಾರಿಯಾಗುತ್ತದೆ ಎಂದರು. ಮಕ್ಕಳ ಕಲಿಕೆಗೆ ಶಿಕ್ಷಕರ ಜತೆಗೆ ಪಾಲಕರ ಹೊಣೆಗಾರಿಕೆಯೂ ಮಹತ್ವದ್ದಾಗಿರುತ್ತದೆ. ಹಾಗಾಗಿ ಶಿಕ್ಷಕರು ಮತ್ತು ಪಾಲಕರು ತಮ್ಮ ಪಾಲಿನ ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದನೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರವಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಅಂಬಾದಾಸ ಕೋರೆ, ಗ್ರಾಮದ ಪ್ರಮುಖರಾದ ಭವರಾವ್ ಪಾಟೀಲ, ಬಾಬುರಾವ್ ಹುಣಸನಾಳೆ, ಅಂಬಾದಾಸ್ ವಾಗ್ಧಾಳೆ, ರಾಮಲಿಂಗ ಪಾಟೀಲ, ಕಾಶೀನಾಥ ಹುಣಸನಾಳೆ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಪ್ರಧಾನ ಕಾರ್ಯದರ್ಶಿ ರತ್ನದೀಪ ಹುಲಸೂರೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ, ಮನೋಹರ ಕೊಳ್ಳುರು, ಎಸ್‌ಡಿಎಂಸಿ ಅಧ್ಯಕ್ಷ ಜಗನ್ನಾಥ, ಮುಖ್ಯ ಶಿಕ್ಷಕ ಸಾಯಿಬಣ್ಣ ನಾಲ್ವಾರ್, ಗಣಿತ ಶಿಕ್ಷಕ ವಿಶ್ವಾರಾಧ್ಯ, ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಹಲವರು ಇದ್ದರು.