Advertisement

ಬಲಿಪರ ಸಂಚಿಯಿಂದ

09:29 AM Aug 18, 2017 | |

ಸ್ಟೀಲಿನ ಪೆಟ್ಟಿಗೆ. ಮುಚ್ಚಳ ತೆರೆದರೆ ಚಿಗುರು ವೀಳ್ಯದೆಲೆ, ಅಡಿಕೆ, ಸುಣ್ಣ, ತಂಬಾಕು. ವೀಳ್ಯದ ಸಂಚಿಯ ಕಡೆಗೆ ದೃಷ್ಟಿ ಹಾಯಿಸಿದವರೇ ಬಲಿಪ ನಾರಾಯಣ ಭಾಗವತರು ಮಾತಿಗೂ ಆರಂಭಿಸಿದರು…

Advertisement

“ನೋಡಿ ಯಕ್ಷಗಾನಕ್ಕೆ ಅದರದ್ದೇ ಆದ ಪರಂಪರೆಯಿದೆ. ಆದರೆ ಹೊಸತು ಹೊಸತು ಎಂದು ಸೇರಿಸುತ್ತಾ ಬಂದರೆ ಯಕ್ಷಗಾನವೇ ಇಲ್ಲದ ಹಾಗಾದೀತು. ಪೂರ್ತಿ ಇಲ್ಲ ಅಂತಾಗ್ಲಿಕಿಲ್ಲ; ಏನಾದರೂ ಇದ್ದೀತಪ್ಪ. ಆದರೆ ಹಿಂದೆ ಇದ್ದ ಹಾಗೆ ಇರ್ಲಿಕಿಲ್ಲ…’ ಇಷ್ಟು ಹೇಳಿ 80 ದಾಟಿದ ಹಿರಿಯ ಜೀವ ಬಲಿಪ ನಾರಾಯಣ ಭಾಗವತರು ತಮ್ಮ ಎಲೆಯಡಿಕೆಯ ಸಂಚಿಯಿಂದ ಒಂದು ದೊಡ್ಡದಾದ ವೀಳಯದೆಲೆಯನ್ನು ತೆಗೆದರು. ಅದರ ತೊಟ್ಟು ಕತ್ತರಿಸುತ್ತಾ, “ಮೂರು ಹಗಲು ಮೂರು ರಾತ್ರಿ ಒಂದು ನಿಮಿಷ ಮಲಗದೇ ನಿದ್ದೆ ಮಾಡದೇ ಪದ್ಯ ಹೇಳಿದ್ದೇನೆ. ರಾತ್ರಿ ಮೇಳದ ಆಟ. ಒಬ್ಬನೇ ಭಾಗವತ. ಹಗಲು ಸಂಗೀತದ ಒಂದು ಕಾರ್ಯಕ್ರಮ. ಬೆಳಗ್ಗೆ ಆಟ ಮುಗಿಸಿ ಉಡುಪಿಯ ಅಂಬಲಪಾಡಿಗೆ ಬರುವುದು. ಅಲ್ಲಿ ದೇವಸ್ಥಾನದ ಹತ್ತಿರ ಹಾಲ್‌. ಸ್ನಾನ ಮಾಡಿ ಫ‌ಲಾರ. ಆಮೇಲೆ ಒಬ್ಬರು ಭಾರತದ ಹೆಸರಾಂತ ಸಂಗೀತಗಾರರಿದ್ದರು. ಅವರ ಹೆಸರು ನೆನಪಿಗೆ ಬರ್ತಾ ಇಲ್ಲ. ಸಂಗೀತಗಾರರು ಎದುರು ಕೂರ್ಲಿಕ್ಕೆ. ನನ್ನ ಜತೆಗೆ ಪಿಟೀಲು ಮತ್ತು ವೀಣೆಯವರು ಇದ್ರು. ನಾನು ಯಕ್ಷಗಾನದ ಹಾಡು ಹಾಡುವುದು. ಅವರು ಅದು ಸಂಗೀತದ ಯಾವ ರಾಗ ಎಂದು ಗುರುತಿಸುವುದು. ಸಂಜೆ 6 ಗಂಟೆಗೆ ಮತ್ತೆ ಆಟದಲ್ಲಿಗೆ ಹೋಗಿ ಸ್ನಾನ, ಊಟ, ಭಾಗವತಿಕೆ. ನಿರಂತರ ಮೂರು ದಿನ ಹಗಲು- ರಾತ್ರಿ ಈ ಪ್ರಕ್ರಿಯೆ ನಡೆಯಿತು. ಮೂರನೇ ದಿನ ಭಾಗವತಿಕೆ ಮಾಡುವಾಗ ನನಗೆ ಸ್ವರ ಇಲ್ಲ! ಅದು ನಿದ್ದೆ ಇಲ್ಲದ ವಿಶ್ರಾಂತಿ ಇಲ್ಲದ ಪರಿಣಾಮ. ಮತ್ತೆ ಆವಾಗ ಮೈಕ ಒಂದೇ ಇದ್ದದ್ದು. ಭಾಗವತರಿಗೆ ಮಾತ್ರ. ಅದು ಬೆಟ್ರಿ ಮೈಕ. ನನ್ನ ಸ್ವರಕ್ಕೆ ಅದೆಲ್ಲಿ ನಿಲ್ತದೆ! ಆದರೂ ಮಧ್ಯರಾತ್ರಿವರೆಗೆ ಹದಾಕೆ ಹಾಡ್ತಿದ್ದೆ. ಆಮೇಲೆ ಜೋರು ಪದ್ಯ ಹೇಳುವಾಗ ಅದು ಕೂಡ ಕೈ ಕೊಡ್ತಿತ್ತು. ಸಂಗೀತದವರ ಎದುರು ಸುಮಾರು 50ಕ್ಕಿಂತ ಹೆಚ್ಚಿಗೆಯ ರಾಗಗಳನ್ನು ನಾನು ಹಾಡಿದ್ದೇನೆ. ಅದನ್ನು ಸಂಗೀತಗಾರರು ಇಂಥದ್ದೇ ರಾಗ ಅಂತ ಗುರುತಿಸಿದ್ದಾರೆ. ಯಾರು ಹೇಳಿದ್ದು, ಯಕ್ಷಗಾನಕ್ಕೆ ಸಂಗೀತದ ಪರಂಪರೆ ಇಲ್ಲ ಎಂದು? ಯಕ್ಷಗಾನಕ್ಕೆ ಯಕ್ಷಗಾನದ್ದೇ ಆದ ರಾಗ ಪರಂಪರೆ ಇದೆ. ಅದಕ್ಕೆ ಬೆರಕೆ ಮಾಡಿ ಲಗಾಡಿ ತೆಗೆಯಬೇಕು ಅಂತ ಇಲ್ಲ’ ಎಂದರು. ಅಷ್ಟು ಹೇಳಿದ ಬಳಿಕ ಅವರಲ್ಲಿದ್ದ ಚಾಕುವಿನಿಂದ ಆ ವೀಳೆಯದೆಲೆಯ ಬದಿಯನ್ನು ಕತ್ತರಿಸಲು ಆರಂಭಿಸಿದರು. 

“ನಿಮಗೆ ಆರಂಭದಲ್ಲಿ ಸಂಬಳ ಅಂತ ಎಷ್ಟು ಇತ್ತು ಭಾಗವತರೇ’ ಎಂದು ಕೇಳಿದೆ. “ನೋಡಿ ಯಕ್ಷಗಾನ ಕಲಾವಿದರ ಸಂಬಳ ಕೇಳಬಾರದು. ಏಕೆಂದರೆ ಅದು ಸಿಕ್ಕಿದರೆ ಸಿಕ್ಕಿತು ಎಂಬ ಸ್ಥಿತಿ ಇತ್ತು ಆಗ. ಆರು ತಿಂಗಳಿಗೆ ಎಂದು ಸಂಬಳ ನಿಘಂಟು ಮಾಡಿದರೂ ಯಜಮಾನ ಲಾಸು ಆದರೆ ಎಲ್ಲಿಂದ ಕೊಡುವುದು? ಆಟ ಆಡಿಸಲು ಜನ ನಿಘಂಟಾಗ ದಿದ್ದರೆ, ವೀಳ್ಯ ಕೊಡುವಾಗ ಕಮ್ಮಿ ಕೊಟ್ಟರೆ ಅವನಾದರೂ ಎಂತ ಮಾಡುವುದು. ಸಂಬಳ ಸರಿಯಾಗಿ ಕೊಡುವ ಕ್ರಮ ಶುರುವಾದದ್ದು ಕೊರಗ ಶೆಟ್ಟರಿಂದ. ಇರಾ ಮತ್ತು ಕುಂಡಾವು ಮೇಳ ಶುರುವಾದ ಅನಂತರ ಕಲಾವಿದರಿಗೆ ಹೇಳಿದ ಸಂಬಳ ಬಟವಾಡೆಯಾಗುತ್ತಿತ್ತು. ಅದಕ್ಕಿಂತ ಮೊದಲು ಕಟೀಲು, ಕೂಡ್ಲು ಮೇಳಗಳಷ್ಟೇ ಇದ್ದದ್ದು…’

ಇಷ್ಟು ಹೇಳಿ ಮುಗಿಸುವಾಗ ವೀಳಯದೆಲೆಯ ಬದಿಯನ್ನು ನಾಜೂಕಾಗಿ ಕತ್ತರಿಸಿ ಮುಗಿದಿತ್ತು. ಅಡಿಕೆಯೊಂದನ್ನು ಕೈಗೆತ್ತಿಕೊಂಡು; “ಚಂದ್ರಸೇನ ಚರಿತ್ರೆ ಅಂತ ಒಂದು ಪ್ರಸಂಗ ಬರೆದೆ. ಅದರಲ್ಲಿ ಪೆರುವಡಿ ನಾರಾಯಣ ಹಾಸ್ಯಗಾರರು “ಪಾಪಣ್ಣ’ ಪಾತ್ರ ಮಾಡುತ್ತಿ ದ್ದರು. ಅದು ರೈಸಿತು. ಹಾಗಾಗಿ ಮೇಳದವರು ಅದಕ್ಕೆ “ಪಾಪಣ್ಣ ವಿಜಯ’ ಅಂತ ಹೆಸರು ಕೊಡುವುದೋ ಅಂತ ಕೇಳಿದರು. ಅಷ್ಟರವರೆಗೆ ಹಾಸ್ಯ ಪಾತ್ರದ ಹೆಸರಿನಲ್ಲಿ ಪ್ರಸಂಗದ ಹೆಸರು ಬರುವ ಕ್ರಮ ಇರಲಿಲ್ಲ. “ನಳ ದಮಯಂತಿ’ಯಲ್ಲಿ ಬಾಹುಕ ಚಂದ ಆಗ್ತದೆ ಅಂತ “ಬಾಹುಕ ಪ್ರತಾಪ’ ಅಂತ ಇಡ್ಲಿಕೆ ಆಗ್ತದೋ. ಈಗೀಗ ಎಲ್ಲವೂ ಆಗ್ತದೆ. ಹಾಗೆ “ಚಂದ್ರಸೇನ ಚರಿತ್ರೆ’, “ಪಾಪಣ್ಣ ವಿಜಯ’ ಅಂತಾಯ್ತು. ಮೊನ್ನೆ ಪಟ್ಲ ಫೌಂಡೇಶನ್ನಿನವರು ನೋಡಿ ನನ್ನ 16 ಪ್ರಸಂಗಗಳನ್ನು ಸೇರಿಸಿ “ಜಯಲಕ್ಷ್ಮೀ’ ಅಂತ ನನ್ನ ಹೆಂಡತಿಯ ಹೆಸರಿಟ್ಟು ಒಂದು ಪುಸ್ತಕ ಹೊರತಂದಿದ್ದಾರೆ. ಅದಕ್ಕಿಂತ ಮೊದಲು ಸುಮಾರು 16 ಪ್ರಸಂಗಗಳು ಬೇರೆ ಬೇರೆಯವರ ಮುಖಾಂತ್ರ ಬಂದಿವೆ. ಎಷ್ಟು ಬರೆದಿದ್ದೇನೆ ಅಂತ ನನಗೆ ಲೆಕ್ಕವೂ ಇಲ್ಲ, ನೆನಪೂ ಇಲ್ಲ. ಅದೆಲ್ಲ ಆಟಕ್ಕೆ -ಆಡ್ಲಿಕೆ ಬೇಕಾದ ಹಾಗೆ ಬರªದ್ದು. ನಾನು ಕವಿಯಲ್ಲ…’

ಕೈಯಲ್ಲಿದ್ದ ಅಡಿಕೆ ಚಾಕುವಿಗೆ ಸಿಕ್ಕಿ ನಾಲ್ಕು ಹೋಳಾಗಿತ್ತು. ಬಲಿಪರ ಮೂರನೇ ಮಗ ತಂದುಕೊಟ್ಟ ಚಕ್ಕುಲಿ ಬಾಯಿಗೆ ಹೋಯಿತು. ಅಡಿಕೆ ಕೈಯಲ್ಲೆ ಉಳಿಯಿತು. ” ನಮ್ಮದು ಬಲಿಪ ಅಂತ ಹೆಸರು ಬರ್ಲಿಕೆ ಕಾರಣ ಏನೂಂತ ಗೊತ್ತಿಲ್ಲ. ಬಹುಶಃ ನಮ್ಮ ಕುಟುಂಬದ ಯಾರಾದರೂ ಹಿರಿಯರನ್ನು ಯಾರಾದರೂ ಹಾಗೆ ಕರೆಯಲು ಶುರು ಮಾಡಿ ಅದುವೇ ಮುಂದುವರಿಯಿತೋ ಏನೋ. ಕೊಡಗಿನಲ್ಲಿದ್ದಾಗ ನಮ್ಮ ಕುಟುಂಬದ ಹಿರಿಯರಾರೋ ಬಲಿಪ ಹುಲಿಯನ್ನು ಕೊಂದ ಪರಾಕ್ರಮಕ್ಕೆ ಮೆಚ್ಚಿ ಉಪಾಧಿಯಾಗಿ ಇದು ಬಂತು ಎಂದೂ ಹೇಳುತ್ತಾರೆ. ಏಕೆಂದರೆ ನಮ್ಮ ಹಿರಿಯರು ಎಲ್ಲ ವೀರಾಧಿವೀರ, ಶೂರಾಧಿಶೂರರೇ…’ 

Advertisement

ಇದಿಷ್ಟು ಹೇಳುವಾಗ ಬಾಯಲ್ಲಿದ್ದ ಚಕ್ಕುಲಿ ಬಾಯಲ್ಲುಳಿದ ಕೆಲವೇ ಕೆಲವು ಹಲ್ಲುಗಳ ನಡುವೆ ಸಿಕ್ಕಿ ತನ್ನ ಗತ ಇತಿಹಾಸವನ್ನು ಸಾರುತ್ತಿತ್ತು. ಕೈಯಲ್ಲಿದ್ದ ಅಡಿಕೆ ಬಾಯೊಳಗೆ ಇಣುಕಲು ತವಕಿಸುತ್ತಿತ್ತು.

“”ಬಲಿಪ ಗೋವಿಂದ ಭಟ್ಟರು ಕೊಡಗಿಗೆ ಇಲ್ಲಿಂದ ಜನ ಕೊಂಡ್ಹೊಗಿ ಯುದ್ಧ ಮಾಡಿದ್ದಾರಂತೆ. ನಮ್ಮದು ಭಾಗವತಿಕೆಯಲ್ಲಿ ಮುಂದುವರಿಯಿತು, ಇನ್ನು ಕೆಲವರು ಜ್ಯೋತಿಷ, ಮತ್ತೆ ಕೆಲವರು ಪೌರೋಹಿತ್ಯ -ಹೀಗೆ ಬೇರೆ ಉದ್ಯೋಗದಲ್ಲಿ ಮುಂದುವರಿದು ಹೆಸರು ಮಾಡಿದ್ದಾರೆ. ಎಲ್ಲ ಘಟಾನುಘಟಿಗಳೇ, ನಮ್ಮ ಕುಟುಂಬದಲ್ಲಿ ಇದ್ದದ್ದು’ ಎಂದು ಹೇಳಿ ಬಲಗೈಯನ್ನು ಜೋರಾಗಿ ಎಡಗೈಯಿಂದ ಎಳೆದರು.

“ಒಂದು ಆಪರೇಷನ್‌ ಆದ ಮೇಲೆ ಬಲಗೈ ನೋವು. ಎಲ್ಲರೂ ಹೇಳ್ತಾರೆ, ಪದ್ಯ ಹೇಳಿ ಜಾಗಟೆ ಬಡಿದು ನೋವು ಬಂದದ್ದು ಅಂತ. ಜಾಗಟೆ ಬಡಿದು ನೋವು ಬರ್ಲಿಕ್ಕೆ ಉಂಟಾ! 70 ವರ್ಷ ಜಾಗಟೆ ಬಡಿದ ಕೈ ಇದಲ್ವಾ…’ ಎಂದು ಅಡಿಕೆಯನ್ನು ಜಗಿಯುತ್ತಾ ವೀಳ್ಯದೆಲೆಗೆ ಸುಣ್ಣ ನೀವತೊಡಗಿದರು. 

“35 ವರ್ಷ ಕಳೆಯಿತು. ದಿನಕ್ಕೊಂದೇ ಊಟ. ಮಧ್ಯಾಹ್ನ ಊಟ ಮಾಡಿದರೆ ರಾತ್ರಿ ಇಲ್ಲ. ರಾತ್ರಿ ಮಾಡಿದರೆ ಮಧ್ಯಾಹ್ನ ಇಲ್ಲ. ಆವಾಗೆಲ್ಲ ಆಟದ ಬಿಡಾರಕ್ಕೆ ಮೈಲುಗಟ್ಟಲೆ ನಡೆದುಕೊಂಡು ಹೋಗಬೇಕು. ಒಮ್ಮೊಮ್ಮೆ 29 ಮೈಲಿ ನಡೆದದ್ದೂ ಇದೆ. ಮುಟ್ಟುವಾಗ ಸಂಜೆಯಾಗ್ತಿತ್ತು. ಸ್ನಾನ, ಊಟ ಮಾಡಿ ಸೀದ ರಂಗಸ್ಥಳಕ್ಕೇ ಹೋಗುವುದು. ಒಬ್ಬನೇ ಭಾಗವತ. ನಿದ್ದೆಯೇ ಇಲ್ಲದೆ ಪದ್ಯ ಹೇಳಬೇಕಾಗಿ ಬರ್ತಿತ್ತು. ಬಿಡಾರ ತಲ್ಪಿದ ಮೇಲೆ ಪ್ರಸಂಗ ನಿಘಂಟಾಗಬೇಕು. ರಾತ್ರಿ 10 ಗಂಟೆ ಆದರೂ ಪ್ರಸಂಗ ನಿಘಂಟಾಗದ ದಿನಗಳುಂಟು. ಕೆಲವು ಸಲ ಚರ್ಚೆ ಜೋರಾಗಿ ರಂಗಸ್ಥಳಕ್ಕೆ ಹತ್ಲಿಕ್ಕೆ ಆಗುವಾಗ ಪ್ರಸಂಗ ನಿಶ್ಚಯ ಆಗ್ತಿತ್ತು. ಕೂಡಲೇ ಕೂಡಲೇ ಪಾತ್ರ ನಿಶ್ಚಯಿಸಿ ಆಟ ಸುರು ಮಾಡ್ತಿದ್ದೆವು. ಅದಕ್ಕಿಂತ ಮೊದಲು ಒಂದು ಪುಂಡುವೇಷ, ಒಂದು ರಾಜವೇಷ, ಬಣ್ಣದವನಿಗೆ ಬಣ್ಣ; ಹೆಣ್ಣು ಬಣ್ಣದವನಿಗೆ ಹೆಣ್ಣು ಬಣ್ಣ, ಮುಖ್ಯ ಸ್ತ್ರೀ ವೇಷದವನಿಗೆ ವೇಷ ಹಾಕ್ಲಿಕೆ ಹೇಳ್ತಿದ್ದೆವು. ಪ್ರಸಂಗ ನಿಶ್ಚಯ ಆದಮೇಲೆ ಅವರಿಗೆ ಇಂತಹ ಪಾತ್ರ ಅಂತ ತಿಳಿಸ್ತಿದ್ದೆವು. ಕೆಲವು ಸಲ  ಬಿಡಾರದಿಂದ ಬಿಡಾರಕ್ಕೆ ನಡೆದುಕೊಂಡು ಮುಟ್ಟುವಾಗ ಮಧ್ಯಾಹ್ನ ಆಗ್ತಿತ್ತು. ಊಟ ತಯಾರಾಗುವಾಗ ಸಂಜೆ 4 ಆಗ್ತಿತ್ತು. ಹಾಗಾಗಿ ಮಧ್ಯಾಹ್ನ ಊಟ ಮಾಡುವ ಕ್ರಮ ಕ್ರಮೇಣ ಕಮ್ಮಿಯಾಯ್ತು. ಹಗಲು ನಿದ್ದೆ ಮಾಡಿ ಸಂಜೆ ಎದ್ದ ಮೇಲೆ ಊಟ ಮಾಡ್ತಿದ್ದೆ. ಈಗ ಮೇಳ ಬಿಟ್ಟು ಇಷ್ಟು ವರ್ಷವಾದರೂ ಬೆಳಗ್ಗೆ 4 ಗಂಟೆವರೆಗೆ ನಿದ್ದೆ ಬರುವುದಿಲ್ಲ. ಆಮೇಲೆ ಹಗಲು ಕೂಡ ನಿದ್ದೆ ಬರ್ತದೆ. ನಿದ್ದೆ ಬಂದಾಗ ಮಲಗುವುದು ಎಂದಾಗಿದೆ. ಎಷ್ಟಾದರೂ ಅಭ್ಯಾಸ ಬಿಟ್ಟು ಹೋಗುವುದಿಲ್ಲ ನೋಡಿ’ ಎಂದು ಹೇಳಿ ಸುಣ್ಣ ಸವರಿದ ವೀಳ್ಯದೆಲೆ ಬಾಯಿಗೆ ಹಾಕಿಕೊಂಡರು. 

“ಪ್ರಸಂಗ ಪದ್ಯಗಳು ನನಗೆ ಬಾಯಿಗೆ ಬರ್ತವೆ. ಮೊದಲೆಲ್ಲ ಎರಡು ದಿನ ಮೊದಲೇ ಪ್ರಸಂಗ ಹೇಳಿದರೆ ಎರಡು ಸಲ ಪುಸ್ತಕ ನೋಡಿದರೆ ಅದು ಬಾಯಿಗೆ ಬರಿ¤ತ್ತು. ಏನೂ ಸಮಸ್ಯೆ ಆಗ್ತಾ ಇರ್ಲಿಲ್ಲ. ಈಗೀಗ ಸ್ವಲ್ಪ ಮರ್ತು ಹೋಗ್ತದೆ. ಪ್ರಾಯ ಆಯ್ತು ನೋಡಿ. ಆದ್ರೂ ತಾಳ ಹಾಕ್ಲಿಕೆ ಆಗ್ತದೆ. ಏನೂ ತೊಂದ್ರೆಯಾಗುವುದಿಲ್ಲ’ ಎಂದು ಹೇಳುವಾಗ ಮುಖದ ತುಂಬಾ ಉತ್ಸಾಹ, ಬಾಯಿ ತುಂಬಾ ವೀಳ್ಯದೆಲೆಯ ರಸ. ಕವಳದಂತೆಯೇ ಅವರ ನೆನಪುಗಳೂ ಕೇಳುವವರಿಗೆ ರಸಗವಳ. ಎಷ್ಟು ಹೇಳಿದರೂ ಕೊನೆಯಾಗದ ನೆನಪಿನ ಆಳ; ಬಲಿಪರು ಯಕ್ಷಗಾನದ ಜೀವಾಳ. 

ಲಕ್ಷ್ಮೀ ಮಚ್ಚಿನ
 

Advertisement

Udayavani is now on Telegram. Click here to join our channel and stay updated with the latest news.

Next