Advertisement
ರಾಮಾಯಣ, ಮಹಾಭಾರತ, ಭಾಗವತ ಹಾಗೂ ಪುರಾಣ ಗ್ರಂಥಗಳಲ್ಲಿ ಕಾಣುವ ಘಟನೆಗಳು ನಡೆದು ಸಾವಿರಾರು ವರುಷಗಳೇ ಕಳೆದಿವೆ. ಆದರೂ, ಅಂದಿನ ಪ್ರಮುಖ ಸಂಗತಿಗಳು ನಾವಿಂದು ವರ್ಷಂಪ್ರತಿ ಆಚರಿಸುವ ಹಬ್ಬಗಳಲ್ಲಿ ಕಣ್ಣಮುಂದೆ ಬಂದು ನಿಲ್ಲುತ್ತವೆ. ಸಾಲುದೀಪಗಳನ್ನು ಬೆಳಗಿ, ಬಾಣ-ಬಿರುಸುಗಳೊಂದಿಗೆ ಸಂಭ್ರಮದಿಂದ ಆಚರಿಸುವ ದೀಪಾವಳಿಯಲ್ಲಿ ವಿವಿಧ ಕಾಲಘಟ್ಟಗಳಲ್ಲಿ ನಡೆದಿರುವ ಹಲವು ಸಂಗತಿಗಳು ಸೇರಿರುವುದು ಕಂಡುಬರುತ್ತವೆ. ಇದರಲ್ಲಿ, ಶ್ರೀ ಕೃಷ್ಣನಿಂದ ದುಷ್ಟ ನರಕಾಸುರನ ಸಂಹಾರವಾದ ದಿನ ಅಂದರೆ, ಅವನಿಂದ ತುಂಬಿದ್ದ ತಮಸ್ಸು ಹೋಗಿ, ಬೆಳಕು ಹರಡಿದ ದಿನದ ಸಂಭ್ರಮವಿದೆ. ಅದರೊಂದಿಗೇ “ಸುತಲ’ ಲೋಕದಿಂದ ವರ್ಷಕ್ಕೊಮ್ಮೆ ಇಲ್ಲಿಗೆ ಬರುವ, ಹಲವು ನೂರು ವರ್ಷಗಳ ಹಿಂದೆ ಇದ್ದ ನಮ್ಮ ಬಲಿ ಚಕ್ರವರ್ತಿಯ ಪೌರಾಣಿಕ ಸಂಗತಿಯೊಂದಿಗೆ ಈಗ ಆ ಪ್ರದೇಶದಲ್ಲಿ ಕಾಣುವ ರಚನೆಗಳ ಅವಲೋಕನ ರೋಚಕವೆನಿಸುತ್ತದೆ.
Related Articles
ರಾಮಾಯಣದ ಕಾಲಘಟ್ಟದಲ್ಲಿ ಭಾರತದ ಸುತ್ತಮುತ್ತಲ ನಾಡುಗಳ ನೋಟ: ನಮ್ಮ ಹಲವಾರು ಪುರಾಣ ಗ್ರಂಥಗಳಲ್ಲಿ ಹಾಗೂ ಆರ್ಯಭಟ ಮುಂತಾದ ಖಗೋಳ ಶಾಸ್ತ್ರಜ್ಞರ ಗ್ರಂಥಗಳಲ್ಲಿ ಭಾರತದ ಹೊರಗಿರುವ ಅನೇಕ ನಾಡುಗಳ ವರ್ಣನೆ ಕಂಡುಬರುತ್ತದೆ. ರಾಮಾಯಣದ ಕಾಲಘಟ್ಟದಲ್ಲಿ ಸಾಗರೋತ್ತರ ನಾಡುಗಳೊಂದಿಗೆ ಸಂಪರ್ಕವಿದ್ದ ಸಂಗತಿಯನ್ನು ಮಹರ್ಷಿ ವಾಲ್ಮೀಕಿಗಳು ಹೇಳುತ್ತಾರೆ. ರಾವಣನಿಂದ ಅಪಹೃತಳಾದ ಸೀತೆಯನ್ನು ಹುಡುಕಲು ತನ್ನ ಸೈನ್ಯವನ್ನು ಕಳುಹಿಸುವ ಸಮಯದಲ್ಲಿ, ಸುಗ್ರೀವನು ಸಾಗರದಾಚೆಯ ಅನೇಕ ನಾಡುಗಳ ವಿವರ ಕೊಡುತ್ತಾನೆ. ಯವ (ಜಾವಾ) ದ್ವೀಪ ಏಳು ಖಂಡಗಳಾಗಿ ವಿಭಾಗಿಸಲ್ಪಟ್ಟಿದೆ. ಕೆಲವು ಕಡೆ ಪರ್ವತಗಳನ್ನು ದಾಟಿ, ಕೆಲವು ಕಡೆ ತೆಪ್ಪಗಳ ಮೂಲಕ ಹೋಗಬೇಕಾಗುತ್ತದೆ. ಆ ಯವದ್ವೀಪದ ಸಮೀಪದಲ್ಲಿ ಸುವರ್ಣಕ್ಕೆ ಆಕರವಾದ ಸುವರ್ಣ ದ್ವೀಪವಿದೆ (ಸುಮಾತ್ರಾ). ಯವದ್ವೀಪ ದಾಟಿದ ಮೇಲೆ ಶಿಶಿರವೆಂಬ ಪರ್ವತ ಸಿಗುತ್ತದೆ. ಅದರ ಶೃಂಗ, ಸ್ವರ್ಗವನ್ನು ಮುಟ್ಟುವಷ್ಟು ಉನ್ನತವಾಗಿದೆ ಎನ್ನುವ ವಿವರ ಅಲ್ಲಿ ಕಾಣುತ್ತದೆ (ರಾಮಾಯಣ: ಕಿಷ್ಕಿಂಧಾಕಾಂಡ 4.40.29- 31).
Advertisement
ಪೆರುನಲ್ಲಿ (ಸುತಲ) ತ್ರಿಶೂಲ ಚಿಹ್ನೆ: ಮತ್ತಷ್ಟು ತಾಣಗಳ ವಿವರ ಕೊಡುವ ಸುಗ್ರೀವ, ಪೂರ್ವದಿಕ್ಕಿನಲ್ಲಿ ಪರ್ವತಾಗ್ರದಲ್ಲಿರುವ, ತ್ರಿಮೂರ್ತಿಗಳು ನಿರ್ಮಿಸಿರುವ ಮೂರು ಶಿಖರಗಳುಳ್ಳ ಕನಕಮಯ ತಾಳಧ್ವಜವನ್ನು (ಸ.40.53-54) ಕುರಿತು ಹೇಳುತ್ತಾನೆ. ಇದು ಕೇವಲ ಕಾವ್ಯಮಯ ಸಂಗತಿಯಾಗಿ ಮಾತ್ರವಲ್ಲದೆ, ಈಗಲೂ ಕಾಣುವ ಅದ್ಭುತ ದೃಶ್ಯ. ಇಂದು ವಿಮಾನದಲ್ಲಿ ಪಯಣಿಸುವಾಗ ಪಿಸ್ಕೋ ಉಪಸಾಗರದ ತೀರದ ಮೇಲೆ ಕಂಡುಬರುವ, ಶಿಲೆಯಲ್ಲಿ ಕೊರೆದಿರುವ ತ್ರಿಶೂಲಾಕಾರದಂತೆ ಕಾಣುವ (TRIDENT) ಒಂದು ಶಿಲಾ ಸ್ತಂಭದ ಎತ್ತರ 820 ಅಡಿಗಳು ಹಾಗೂ ಹೊಳೆಯುತ್ತಿರುವ ಅದರ ಮೂರು ಶೂಲಗಳ ಉದ್ದ 121/2 ಅಡಿಗಳು. ಇದನ್ನು ಯಾರು, ಎಂದು ಹಾಗೂ ಯಾವ ಉದ್ದೇಶದಿಂದ ಅಲ್ಲಿ ನಿರ್ಮಿಸಿದರು ಎನ್ನುವುದು ಇಂದಿನ ವಿದ್ವಾಂಸರಿಗೆ ಸವಾಲಾಗಿರುವ ವಿಚಾರವಾದರೂ, ಇದು ರಾಮಾಯಣದಲ್ಲಿ ಕಾಣುವ ಶೃಂಗ ಎನ್ನುವುದು ನಿಚ್ಚಳವಾಗಿ ಕಾಣುವಂಥದ್ದು.
ಅದು ವಿಮಾನ ನಿಲ್ದಾಣವೇ?: ಪೆರು ನಾಡಿನಲ್ಲಿ ತ್ರಿಶೂಲ ಚಿಹ್ನೆ ಕಾಣುವ ತಾಣದಿಂದ ನೂರು ಮೈಲುಗಳಷ್ಟು ದೂರದಲ್ಲಿರುವ ನಾಝಾRದ ಕಣಿವೆ ಪ್ರದೇಶದಲ್ಲಿ ವಿವಿಧ ಪ್ರಾಣಿಗಳ ಚಿತ್ರಗಳೊಂದಿಗೆ ಉದ್ದನೆಯ ರೇಖಾಚಿತ್ರರಚನೆ ಕಂಡುಬರುತ್ತದೆ. ವಿಮಾನಯಾನದ ವೇಳೆ, ಎತ್ತರದಿಂದ ಮಾತ್ರ ಕಾಣುವಂಥ 30 ಮೈಲುಗಳಷ್ಟು ಉದ್ದವಿರುವ ಈ ರೇಖಾಚಿತ್ರಗಳು ಪ್ರಾಚೀನ ಕಾಲದಲ್ಲಿ ನಿರ್ಮಾಣವಾದ ವಿಮಾನ ನಿಲ್ದಾಣವಿರಬೇಕು ಎನ್ನುವುದು ಸಂಶೋಧಕರ ಅಭಿಮತ. ಆ ಪ್ರದೇಶದಲ್ಲಿ ಕಾಣುವ 2 ಮೈಲು ಉದ್ದ ಹಾಗೂ 500 ಮೈಲು ಅಗಲದ ಸಭಾಗೃಹದಂತೆ ಕಾಣುವ ಒಂದು ರಚನೆ ಇದೆ. ಅದರ ಮಧ್ಯದಲ್ಲಿ ಮಹಾಕಾಯನಾಗಿದ್ದ ವ್ಯಕ್ತಿಯೊಬ್ಬ ಕೂರಬಹುದಾಗಿದ್ದ ಸುಮಾರು 16 ಅಡಿಗಳಷ್ಟು ಉದ್ದದ ಪೀಠವೊಂದು ಕಾಣುತ್ತದೆ. ಇಂಥ ರಚನೆಯನ್ನು ಮಯಾಸುರನು, ಬಲಿ ಚಕ್ರವರ್ತಿಗಾಗಿ ನಿರ್ಮಾಣ ಮಾಡಿದ ಎನ್ನುವ ಉಲ್ಲೇಖ ಪುರಾಣದಲ್ಲಿ ಕಾಣುತ್ತದೆ. ಹೀಗೆ, ದಕ್ಷಿಣ ಅಮೆರಿಕದಲ್ಲಿ ಕಾಣುವ ಭಾರತೀಯ ಸಂಸ್ಕೃತಿಯ ದ್ಯೋತಕವಾಗಿರುವ ಅನೇಕ ರಚನೆಗಳು, ಭಾರತದಿಂದ ಪಾತಾಳ ಪ್ರದೇಶಗಳಿಗೆ ಹೋಗಿ, ಅಲ್ಲಿಯೇ ನೆಲೆಸಿದವರು ನಿರ್ಮಾಣ ಮಾಡಿರುವುದನ್ನು ಪುಷ್ಟೀಕರಿಸುತ್ತವೆ.
ರಾವಣನ ತಾತ ಸುಮಾಲಿಯ “ಪಾತಾಲ ಲೋಕ’: ಭಾರತೀಯ ಪರಂಪರೆಯಲ್ಲಿ ಕಾಲವನ್ನು ಕೃತ, ತ್ರೇತಾ, ದ್ವಾಪರ ಹಾಗೂ ಕಲಿಯುಗಗಳೆಂಬ 4 ಭಾಗಗಳಲ್ಲಿ ಕಾಣಬಹುದು. ಮಹಾವಿಷ್ಣು ತ್ರಿವಿಕ್ರಮ ಮತ್ತು ವಾಮನ ಅವತಾರ ತಾಳುವುದು ಹಾಗೂ ಬಲಿ ಚಕ್ರವರ್ತಿಯ ಸಂಗತಿ ಕಾಣುವುದು ಕೃತಯುಗದಲ್ಲಿ. ಮುಂದಿನ ಕಾಲಘಟ್ಟದಲ್ಲಿ ತ್ರಿಕೂಟ ಪರ್ವತದಲ್ಲಿರುವ ಲಂಕೆಯಲ್ಲಿ ಸುಮಾಲಿ, ಮಾಲಿ ಹಾಗೂ ಮಾಲ್ಯವಂತ ಎಂಬ ದಾನವ ವಂಶದವರು ಆಳುತ್ತಿದ್ದ ಸಂಗತಿಯನ್ನು ವಾಲ್ಮೀಕಿ ರಾಮಾಯಣ ಹೇಳುತ್ತದೆ. ಅತಿಬಲರಾಗಿದ್ದ ಈ ಸೋದರರು ಯಜ್ಞಾದಿ ಧಾರ್ಮಿಕ ಕಾರ್ಯಗಳನ್ನು ಧ್ವಂಸ ಮಾಡುತ್ತಾ ಪ್ರಜಾಪೀಡಕರಾಗಿದ್ದರು. ಅವರನ್ನು ನಿಗ್ರಹಿಸಲು ನಡೆದ ಮಹಾಯುದ್ಧದಲ್ಲಿ ವಿಷ್ಣುವಿನಿಂದ ಮಾಲಿಸಹಿತವಾಗಿ ಅನೇಕ ದುರುಳ ರಾಕ್ಷಸರು ಮಡಿದರು. ಬದುಕುಳಿದ ಸುಮಾಲಿ ಹಾಗೂ ಮಾಲ್ಯವಂತರು ಲಂಕೆಯನ್ನು ತೊರೆದು “ಪಾತಾಳ’ಕ್ಕೆ ಓಡಿಹೋದರು. ಸುಮಾಲಿಯ ಮಗಳಾದ ಕೈಕಸಿಯೇ ರಾವಣಾಸುರನ ತಾಯಿ. ಆ ದಾನವರು ತೊರೆದು ಹೋದ ಲಂಕೆಯಲ್ಲಿ ನೆಲೆಸಿದ್ದ ತನ್ನ ಅಣ್ಣ ಕುಬೇರನನ್ನು ಅಲ್ಲಿಂದ ಓಡಿಸಿ ರಾವಣ ಅಲ್ಲಿ ಅಧಿಪತಿಯಾಗುತ್ತಾನೆ.
* ಡಾ. ಜಯಂತಿ ಮನೋಹರ್, ಸಂಶೋಧಕಿ, ವೇದಾರ್ಥ ಚಿಂತಕಿ