ಬಾಳೆಹೊನ್ನೂರು: ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವ್ಯಾಪ್ತಿಯ ಕ್ಯಾತನಮಕ್ಕಿ ಹುಲ್ಲುಗಾವಲು ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತ ವಿಫಲವಾಗಿವೆ ಎಂದು ಪ್ರಜಾಪ್ರಭುತ್ವ ಉಳಿಸಿ ಅಂದೋಲನ ವೇದಿಕೆ ಸಂಚಾಲಕ ನಾಗೇಶ್ ಅಂಗೀರಸ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳು ಜಿಪಂ ಹಾಗೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಹಿಂದೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿತ್ತು. ಆದರೆ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಪಂ ಆದೇಶ ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಕ್ಯಾತನಮಕ್ಕಿ ಪಶ್ಚಿಮ ಘಟ್ಟಗಳ ಸಾಲಿನ ನಯನ ಮನೋಹರ ಗಿರಿಶ್ರೇಣಿಯಾಗಿದ್ದು, ಸಾವಿರಾರು ಎಕರೆ ಹುಲ್ಲುಗಾವಲು ಪ್ರದೇಶವಿದೆ. ಇಲ್ಲಿ ಸಾವಿರಾರು ಜಾನುವಾರುಗಳು ಸ್ವಚ್ಛಂದವಾಗಿ ಮೇವನ್ನು ತಿಂದು ಸದೃಢವಾಗಿ ಬೆಳೆಯುತ್ತವೆ ಎಂದರು. ಈ ಹಿಂದೆ 2015ರಲ್ಲಿ ಬಾಳೆಹೊನ್ನೂರು ಎಸಿಎಫ್ ಅವರು ಈ ಭಾಗದಲ್ಲಿ ಚೆಕ್‌ಪೋಸ್ಟ್ ತೆರೆಯುವ ಬಗ್ಗೆ ಪತ್ರಕರ್ತರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಈ ಪ್ರದೇಶಕ್ಕೆ ಭೇಟಿ ನೀಡಲು ಸಮಯ ನಿಗದಿ ಪ್ಲಾಸ್ಟಿಕ್ ಹಾಗೂ ಮದ್ಯವನ್ನು ಕೊಂಡೊಯ್ಯುವ ಬಗ್ಗೆ ನಿರ್ಬಂಧ ವಿಧಿಸುವ ಬಗ್ಗೆ ಚರ್ಚಿಸಲಾಗಿತ್ತು ಹಾಗೂ ಅಂದಿನ ನಕ್ಸಲ್ ನಿಗ್ರಹ ಪಡೆಯ ಇನ್ಸ್‌ಪೆಕ್ಟರ್ ಸಹ ಪತ್ರಕರ್ತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿದ್ದರು. ಅವರ ವರ್ಗಾವಣೆ ನಂತರ ಈ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದರು.
ಮೋಜು ಮಸ್ತಿಯ ತಾಣ: ಕ್ಯಾತನಮಕ್ಕಿ ಪ್ರವಾಸಿಗರ ಸ್ವರ್ಗವಾಗಿದ್ದು, ಯಾವುದೇ ಬದ್ಧತೆಯಲ್ಲದೆ ಹುಲ್ಲುಗಾವಲು ಹಾಗೂ ಅರಣ್ಯಕ್ಕೆ ಪ್ರವೇಶಿಸಿ ಮೋಜು-ಮಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಗೋ ಹತ್ಯೆ ಹಾಗೂ ವನ್ಯ ಜೀವಿಗಳ ಹತ್ಯೆಯೂ ನಿರಂತರವಾಗಿ ನಡೆಯುತ್ತಿದ್ದು, ಸ್ಥಳೀಯ ಕೆಲವು ಪ್ರಭಾವಿಗಳು ಕೆಲವು ಗಿರಿಜನರಿಗೆ ಹಣದ ಆಮಿಷ ತೋರಿಸಿ ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದೀಗ ಕೋವಿಡ್ ಕರ್ಫ್ಯೂ ಇದ್ದಾಗಲೂ ಪ್ರವಾಸಿಗರು ಮೋಜು-ಮಸ್ತಿ ಮಾಡಲು ಈ ಪ್ರದೇಶಕ್ಕೆ ಲಗ್ಗೆ ಇಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಳಸ ವಲಯ ಅರಣ್ಯ ವ್ಯಾಪ್ತಿಯಲ್ಲಿ ಜೀಪೊಂದು ಅಪಘಾತಕ್ಕೀಡಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಬಿದ್ದಿರುವುದು ಪತ್ರಿಕೆಯಲ್ಲಿ ವರದಿಯಾಗಿದೆ ಎಂದರು.
ಈ ಪ್ರದೇಶ ಇನಾಂ ಭೂಮಿ ವ್ಯಾಪ್ತಿಗೆ ಒಳಪಟ್ಟಿದ್ದು, ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶ ಮಾಡಿದೆ. ಆದಾಗ್ಯೂ ಅಧಿಕೃತ ಹಾಗೂ ಅನಧಿಕೃತ ರೆಸಾರ್ಟ್ ತಲೆ ಎತ್ತಿವೆ. ಪರ ಊರಿನಿಂದ ಬಂದವರಿಗೆ ಶಿಕಾರಿ ಮಾಡಿದ ಮಾಂಸ ನೀಡುವ ಬಗ್ಗೆಯೂ ಗ್ರಾಮದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು. ನಾವು ಪ್ರವಾಸೋದ್ಯಮದ ವಿರೋಧಿಗಳಲ್ಲ. ಶಿಸ್ತುಬದ್ಧ ಪ್ರವಾಸೋದ್ಯಮ ನಡೆಸುವ ಬಗ್ಗೆ ನಮ್ಮದು ಸಹಮತವಿದೆ. ಇದು ಯುನೆಸ್ಕೋ ಪಾರಂಪರಿಕ ವಿಶ್ವ ತಾಣ ಮತ್ತು ಪಶ್ಚಿಮಘಟ್ಟಗಳ ಅತೀ ಸೂಕ್ಷ್ಮ ಪರಿಸರ ಪ್ರದೇಶ ಎಂಬುದನ್ನು ಪತ್ರದಲ್ಲಿ ಉಲ್ಲೇಖೀಸಲಾಗಿದೆ. ಈ ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.