Advertisement

ಬಾಲ್ಕನಿ ಕಹಾನಿ ಮನೆಯ ಒಳಹೊರಗೆ

03:45 AM Jan 30, 2017 | Harsha Rao |

ಕೆಲ ಬಾರಿ ಸಣ್ಣಪುಟ್ಟ ವಿಷಯಗಳು ಎಂಬಂತಹವೂ ಅಸಡ್ಡೆ ತೋರಿದರೆ ತೊಂದರೆ ಕೊಡುತ್ತವೆ. ಕೆಲವೊಮ್ಮೆ ತಕ್ಷಣಕ್ಕೆ ಏನೂ ಆಗದಿದ್ದರೂ ಕಾಲಾಂತರದಲ್ಲಿ ತಮ್ಮ ನ್ಯೂನತೆಗಳನ್ನು ತೋರಿಸ ತೊಡಗುತ್ತವೆ. ಆದುದರಿಂದ ಕೆಲ ಮುಖ್ಯವಾದ ಸಣ್ಣ ವಿಷಯಗಳ ಬಗ್ಗೆ ನಿಖರವಾದ ಮಾಹಿತಿ ಹೊಂದುವುದು ಅತ್ಯಗತ್ಯ. 

Advertisement

ಬಾಲ್ಕನಿ ಎಂಬ ಹೊರಚಾಚು
ನಾನಾ ಕಾರಣಗಳಿಗೆ ಮನೆಯಿಂದ ಹೊರಗೆ, ಸಾಮಾನ್ಯವಾಗಿ ಮೊದಲ ಮಹಡಿಯ ಗೋಡೆಗಳ ಹೊರಗೆ ಸ್ಲಾಬ್‌ಗಳನ್ನು ಪ್ರೊಜೆಕ್ಟ್ ಮಾಡುವುದು ಇದೆ. ಹೆಚ್ಚುವರಿ ಸ್ಥಳ ಸಿಗಲಿ ಎಂದು, ಮನೆಯ ವಿನ್ಯಾಸ ಆಕರ್ಷಕವಾಗಿರಲಿ ಎಂದೂ ಕೂಡ ಈ ರೀತಿಯಾಗಿ ಹೊರಚಾಚಲಾಗುತ್ತದೆ. ಹೀಗೆ ಹೊರಚಾಚಿದ ಜಾಗ ಎಷ್ಟು ಭಾರ ಹೊರಬೇಕಾಗುತ್ತದೆ? ಎಂದು ನಿರ್ಧರಿಸಿ ಅದಕ್ಕೆ ತಕ್ಕಂತೆ ಸೂಕ್ತ ಕಂಬಿಗಳನ್ನು ಹಾಗೂ ಸ್ಲಾ$Âಬ್‌ ದಪ್ಪವನ್ನು ನಿರ್ಧರಿಸಬೇಕಾಗುತ್ತದೆ. ಮೊದಲು ಮಾತನಾಡುವಾಗ “ಹೆಚ್ಚಿಗೆ ಏನೂ ಭಾರ ಬರುವುದಿಲ್ಲ’ ಎಂದು ಹೇಳುವವರು ನಂತರ ಇಂಥ ಹೊರಚಾಚಿನ ಮೇಲೆ ಅತ್ಯಧಿಕ ಎನ್ನುವಷ್ಟು ಭಾರವನ್ನು ಹೊರಿಸಿರುತ್ತಾರೆ. ಹೇಳಿಕೇಳಿ ಸಾಮಾನ್ಯ ಸ್ಲಾಬ್‌ಗ ಹೋಲಿಸಿದರೆ ಬಾಲ್ಕನಿಗಳು ಅಷ್ಟೊಂದು ಗಟ್ಟಿಮುಟ್ಟಾಗಿರುವುದಿಲ್ಲ. ಕಾರಣ ಇವಕ್ಕೆ ಒಂದೇ ಕಡೆ ಆಧಾರ ಇದ್ದು, ಇನ್ನೊಂದು ಕಡೆ ಗಾಳಿಯಲ್ಲಿ ತೇಲುತ್ತಿರುತ್ತವೆ. ಹಾಗಾಗಿ ಎರಡೂ ಕಡೆ ಆಧಾರ ಇರುವ ಮಾಮೂಲಿ ಸ್ಲಾಬ್‌ಗಳಂತೆ ಈ ಮಾದರಿಯ ಸ್ಲಾಬ್‌ಗಳ ಮೇಲೆ ಹೆಚ್ಚುವರಿ ಭಾರ ಹೊರಿಸುವಾಗ ತುಂಬಾ ಎಚ್ಚರಿಕೆ ಇಂದ ಇರಬೇಕಾಗುತ್ತದೆ.

ಬಾಲ್ಕನಿಯ ಇತರೆ ಮಿತಿಗಳು
ಸಾಮಾನ್ಯ ಸ್ಲಾಬ್‌ನಲ್ಲಿ ದೃಢಗೊಳಿಸುವ ಮುಖ್ಯ ಕಂಬಿಗಳು ಕೆಳ ಪದರದಲ್ಲಿದ್ದರೆ, ಕ್ಯಾಂಟಿಲಿವರ್‌ಗಳಲ್ಲಿ ಅದು ಮೇಲು ಪದರದಲ್ಲಿ ಇರುತ್ತವೆ. ಹಾಗಾಗಿ ಮೇಲಿನಿಂದ ನೀರು, ಇಲ್ಲ ಟಾಯ್ಲೆಟ್‌ ನೀರು ಟೈಲ್ಸ್‌ ಮಧ್ಯೆ ಸೋರಿ, ತೇವಾಂಶ ಹೆಚ್ಚಿಸಿ ಕಬ್ಬಿಣ ತುಕ್ಕು ಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಕಂಬಿಯ ದಪ್ಪ ಕಡಿಮೆ ಆದಷ್ಟೂ ಅದು ಕಿಲುಬು ಹಿಡಿಯುವುದು ಹೆಚ್ಚಾಗಿರುತ್ತದೆ. ಸ್ಲಾಬ್‌ಗಳಿಗೆ ನಾವು ಬಳಸುವ ಸರಳುಗಳ ದಪ್ಪ ಕಡಿಮೆ ಇದ್ದು ಅದು ಮೇಲು ಪದರದಲ್ಲಿ ತೇವಾಂಶ ಹೆಚ್ಚಿರುವ ಸ್ಥಳದಲ್ಲಿ ಇದ್ದರೆ, ಕೆಲವಾರು ವರ್ಷಗಳಲ್ಲಿ ಕಿಲುಬು ಹಿಡಿದು ಹೊರಚಾಚು ಬಾಗುವುದು ಇತ್ಯಾದಿ ತೊಂದರೆ ಆಗಬಹುದು.  ಹಾಗಾಗಿ ನೀರು ನಿರೋಧಕ ಪದರಗಳನ್ನು ಹೊರಚಾಚುಗಳಿಗೆ ಹೆಚ್ಚು ಕಾಳಜಿಯಿಂದ ಕೊಡುವುದರ ಜೊತೆಗೆ ತೇವಾಂಶ ಹೆಚ್ಚಾಗಿ ಕಿಲುಬು ಏನಾದರೂ ಉಂಟಾಗುತ್ತಿದೆಯೇ? ಎಂದು ವರ್ಷಕ್ಕೆ ಒಮ್ಮೆಯಾದರೂ ಪರಿಶೀಲಿಸುವುದು ಉತ್ತಮ.

ಹೆಚ್ಚುವರಿ ಭಾರ ಅನಿವಾರ್ಯ ಆದರೆ..,
ಕೆಲವೊಮ್ಮೆ ಮನೆಯ ಹಿಂಭಾಗವನ್ನು ಹೊರಚಾಚಿದಂತೆ ಮಾಡಿ, ಇಲ್ಲಿ ಸಿಗುವ ಮೂರು ನಾಲ್ಕು ಅಡಿ ಅಗಲದಲ್ಲಿ ಟಾಯ್ಲೆಟ್‌ಗಳನ್ನು ಮಾಡುವುದು ಉಂಟು. ಇಂಥ ಸಂದರ್ಭದಲ್ಲಿ ಸಾಮಾನ್ಯ ಹೊರಚಾಚಿನಂತೆ ಈ ಸ್ಲಾಬ್‌ಗಳನ್ನು ವಿನ್ಯಾಸ ಮಾಡದೆ, ಅವುಗಳ ಕೆಳಗೆ, ಸುಮಾರು ಹತ್ತರಿಂದ ಹದಿನೈದು ಅಡಿ ದೂರದಲ್ಲಿ- ಆಯಾ ಕೋಣೆಯ ಅಗಲ ಆಧರಿಸಿ, ಭೀಮ್‌ಗಳನ್ನು ಕೊಡುವುದು ಉತ್ತಮ. ಒಮ್ಮೆ ಸ್ಲಾಬ್‌, ಬೀಮ್‌ಗಳ ಮೇಲೆ ಕೂತರೆ, ಅದು ಸಾಮಾನ್ಯ ಸ್ಲಾಬ್‌ ನಂತೆಯೇ ವಿನ್ಯಾಸಗೊಂಡು, ಅದರ ಮುಖ್ಯ ಕಂಬಿಗಳು ಕೆಳಪದರದಲ್ಲಿ ಇರುವುದರಿಂದ, ಕಿಲುಬು ಹಿಡಿಯುವ ಸಾಧ್ಯತೆ ಕಡಿಮೆ ಇರುತ್ತದೆ. 

ಬೀಮ್‌ಗಳೂ ಕೂಡ ಹೊರಚಾಚಿದಂತೆ ವಿನ್ಯಾಸ ಮಾಡಿದಾಗ, ಅದರ ಮುಖ್ಯ ಕಂಬಿಗಳು ಮೇಲು ಪದರದಲ್ಲೇ ಇರುತ್ತವೆ. ಆದರೆ ಬೀಮ್‌ಗಳಿಗೆ ಹಾಕುವ ಕಂಬಿಗಳು ದಪ್ಪಗಿದ್ದು, ಅವು ಸ್ಲಾಬ್‌ಗ ಹಾಕುವ ಕಂಬಿಗಳಷ್ಟು ಶೀಘ್ರವಾಗಿ ತುಕ್ಕು ಹಿಡಿಯುವುದಿಲ್ಲ. ಹಾಗಾಗಿ ನಮ್ಮ ಮನೆ ಹೆಚ್ಚು ವರ್ಷ ಬಾಳಿಕೆ ಬರುತ್ತದೆ. ಜೊತೆಗೆ ಸಾಮಾನ್ಯವಾಗಿ ಮನೆಗೆ ಹಾಕುವ ಬೀಮನ್ನೇ ಹೊರಗೆ ಚಾಚುವಂತೆ ಮಾಡುವುದರಿಂದ, ಈ ಬೀಮುಗಳ ಆಳ ಅಂದರೆ ಡೆಪ್ತ್ ಸುಮಾರು ಒಂದೂವರೆ ಅಡಿಯಷ್ಟಿದ್ದು, ಈ ಗಾತ್ರದ ಬೀಮ್‌ಗೆ ಕಂಬಿ ಬಲಇಲ್ಲದೆಯೇ- ಈ ಹಿಂದೆ ಕಲ್ಲು ತೊಲೆಗಳನ್ನು ಇರಿಸಿ ಮನೆ ಕಟ್ಟುವ ರೀತಿಯಲ್ಲಿ ಭಾರ ಹೊರುವ ಗುಣ ಇರುವುದರಿಂದ, ಕಂಬಿ ತುಕ್ಕು ಹಿಡಿದರೂ ಕೂಡ ಮೂರು – ನಾಲ್ಕು ಅಡಿ ಅಗಲದ ಹೊರಚಾಚಿನ ಭಾರ ಹೊರುವ ಗುಣ ಇದ್ದೇ ಇರುತ್ತದೆ.

Advertisement

ಬಾಲ್ಕನಿ ಪರಿಶೀಲನೆ
ಕಿಲುಬು ಹಿಡಿದುದರ ಮುಖ್ಯ ಲಕ್ಷಣ- ಸ್ಲಾಬ್‌ಗಳಲ್ಲಿ ಬಿರುಕು ಬಿಡುವುದು ಇಲ್ಲವೇ ಮೇಲು ಪದರ ಹಪ್ಪಳದಂತೆ ಮೇಲೆದ್ದು, ಕಳಚಿಕೊಳ್ಳುವುದು ಅಥವಾ ನಡೆದಾಡಿದಾಗ “ಡಬ್‌ ಡಬ್‌’ ಎಂದು ಶಬ್ಧ ಬರುವುದು ಆಗುತ್ತದೆ. ಹೊರಚಾಚುಗಳ ಮೇಲೆ ಭಾರ ಹೆಚ್ಚಾದರೆ, ಅದು ಭಾಗುವುದು ಸಹಜ. ನೀವೂ ಕೂಡ ನೋಡಿರುತ್ತೀರಿ- ಬಾಲ್ಕನಿ ಭಾಗುವುದು- ಅದಕ್ಕೆ ಹೆಚ್ಚುವರಿ ಆಧಾರವನ್ನು ಉಕ್ಕಿನ ಪೈಪ್‌ ಮಾದರಿಯಲ್ಲಿ ಕೊಡುವುದು ಇತ್ಯಾದಿ. ಹೀಗೆಲ್ಲ ಆಗುವುದನ್ನು ತಪ್ಪಿಸಲು ನಾವು ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ. 

ಹೊರಚಾಚಿನ ನೀರು ನಿರ್ವಹಣೆ
ಉಕ್ಕು ಕಂಬಿಗಳು ಪದೇ ಪದೇ ಮಳೆ ಇಲ್ಲ ಇತರೆ ತೇವಾಂಶ ಉಂಟು ಮಾಡುವ ಸಂಗತಿಗಳಿಗೆ ತುತ್ತಾಗುತ್ತಿದ್ದರೆ, ಕಿಲುಬು ಹಿಡಿಯುವುದು ತಪ್ಪಿದ್ದಲ್ಲ. ಹಾಗಾಗಿ, ಇಡೀ ಮನೆಗಲ್ಲದಿದ್ದರೂ ಹೊರಚಾಚಿನ ಪ್ರದೇಶಕ್ಕೆ ವಿಶೇಷವಾಗಿ, ಜೇಡಿಮಣ್ಣಿನ ಸುಟ್ಟ ಬಿಲ್ಲೆಗಳನ್ನು ಹಾಕಿ, ಮಾಮೂಲಿ ನೀರು ನಿರೋಧಕ ಕಾಂಕ್ರಿಟ್‌ ಪದರದ ದಕ್ಷತೆಯನ್ನು ಹೆಚ್ಚಿಸುವುದು ಉತ್ತಮ. ಯಾವುದೇ ಆರ್‌ಸಿಸಿ ಸೂರು ಹಾಳಾಗಲು ಅದರ ಸೋರುವಿಕೆಯೇ ಮುಖ್ಯ ಕಾರಣವಾಗಿರುತ್ತದೆ.

ಆದುದರಿಂದ ಸೂರಿನ ಮೇಲೆ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಒಂದಕ್ಕೆ ಅರವತ್ತರಂತೆ ಇಳಿಜಾರು ನೀಡಿ ರಕ್ಷಣೆ ಮಾಡಬೇಕು. ಕೆಲವೊಮ್ಮೆ ಸಣ್ಣ ದೋಣಿ ಕೊಳವೆಗಳನ್ನು ಅಳವಡಿಸಿದರೆ, ಮಳೆ ಜೋರಾಗಿ ಬಂದಾಗ ತಾರಸಿಯ ಮೇಲೆ ನೀರು ಕೆಲಕಾಲ ನಿಲ್ಲಬಹುದು. ಕಡೇ ಪಕ್ಷ ನೂರು ಅಡಿಗೆ ಎರಡು ಚದರು ಇಂಚಿನ ಲೆಕ್ಕದಲ್ಲಿ, ಅಂದರೆ ಸುಮಾರು ಇನ್ನೂರು ಮುನ್ನೂರು ಅಡಿ ಅಗಲದ ಸೂರಿಗೆ ಒಂದು ನಾಲ್ಕು ಇಂಚಿನ ಕೊಳವೆಯನ್ನು ಅಳವಡಿಸಿದರೆ, ಮಳೆ ಧಾರಾಕಾರವಾಗಿ, ಗಂಟೆಗಟ್ಟಲೆ  ಸುರಿಯುತ್ತಿದ್ದರೂ, ಮನೆಯೊಳಗೆ ತೇವಾಂಶ ಬರುವ ಸಾಧ್ಯತೆ ಕಡಿಮೆ ಇರುತ್ತದೆ.  

ಸ್ಲಾಬ್‌ ಗಳಲ್ಲಿ ಹಾಕುವ ಮೇಲು ಪದರದ ಕಂಬಿಗಳು ಸಾಮಾನ್ಯವಾಗೇ ಕಾಂಕ್ರಿಟ್‌ ಹಾಕುವಾಗ ಕಾಲ್‌ ತುಳಿತಕ್ಕೆ ತುತ್ತಾಗಿ, ಕೆಳಕ್ಕೆ ತಳ್ಳಲ್‌ ಪಟ್ಟು, ಅವು ನಿರುಪಯುಕ್ತವಾಗುವ ಸಾಧ್ಯತೆಯೂ ಇರುತ್ತದೆ. ಆದುದರಿಂದ, ಸೂಕ್ತ “ಚೇರ್‌’ -ಕುರ್ಚಿ ಗಳನ್ನು  ಅಂದರೆ ಕಂಬಿಯಲ್ಲಿ ಮಾಡಿದ ಸುಮಾರು ನಾಲ್ಕು ಇಂಚು ಎತ್ತರದ ಆಧಾರಗಳನ್ನು, ಬಾಲ್ಕನಿ ಸ್ಲಾಬ್‌ ನಂತೆ ವಿನ್ಯಾಸ ಮಾಡಿದ ಕಡೆಯಲ್ಲಿ ನೀಡುವುದು ಉತ್ತಮ! ವಿವರಗಳು ಸಣ್ಣ ಪುಟ್ಟದಿರಬಹುದು, ಆದರೆ ಅನೇಕಬಾರಿ ಇಂಥಹರಿಂದಲೇ ದೊಡ್ಡ ಮಟ್ಟದ ತೊಂದರೆಗಳೂ ಆಗಬಹುದು ಎಚ್ಚರ. 

ಹೆಚ್ಚಿನ ಮಾತಿಗೆ 98441 32826

– ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next