Advertisement

ಖ್ಯಾತ ವರ್ಣ ಚಿತ್ರ ಕಲಾವಿದ ಚಂದ್ರನಾಥ ಆಚಾರ್ಯಗೆ ಬಾಲವನ ಪ್ರಶಸ್ತಿ

10:44 AM Sep 29, 2023 | Team Udayavani |

ಪುತ್ತೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ| ಕೋಟ ಶಿವರಾಮ ಕಾರಂತರ ಬಾಲವನ ಸಮಿತಿ ಮತ್ತು ಪುತ್ತೂರು ಸಹಾಯಕ ಆಯುಕ್ತರ ಕಾರ್ಯಾಲಯ ನೇತೃತ್ವದಲ್ಲಿ ದಿ. ಕುರುಂಜಿ ವೆಂಕಟರಮಣ ಗೌಡ ಇವರ ಶಾಶ್ವತ ಕೊಡುಗೆಯಲ್ಲಿ ಕೊಡ ಮಾಡುವ “ಕೋಟ ಶಿವರಾಮ ಕಾರಂತರ ಬಾಲವನ ಪ್ರಶಸ್ತಿ 2023′ ಕ್ಕೆ ಬೆಂಗಳೂರಿನ ಖ್ಯಾತ ವರ್ಣ ಚಿತ್ರ ಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ಪುತ್ತೂರು ಶಾಸಕ ಆಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಅಧ್ಯಕ್ಷತೆಯಲ್ಲಿ ಐದು ಜನರ ಸಮಿತಿ ಆಯ್ಕೆ ಮಾಡಿದೆ. ಅ.10 ರಂದು
ಬಾಲವನದಲ್ಲಿ ನಡೆಯುವ ಕಾರಂತ ಜನ್ಮದಿನೋತ್ಸವದೆಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಪುರಸ್ಕಾರ, ಕಾರಂತರ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ.

ಮೂಲತ ಪುತ್ತೂರಿನವರಾದ ಕೆ. ಚಂದ್ರನಾಥ ಆಚಾರ್ಯ ಇವರು ಬಾಲ್ಯದಲ್ಲಿಯೇ ಕಲಾಸಕ್ತಿಯನ್ನು ಮೂಡಿಸಿಕೊಂಡವರು. ಕಾಲೇಜು ಜೀವನದಲ್ಲಿಯೇ ಆಗಿನ ಪ್ರಸಿದ್ಧ ಪತ್ರಿಕೆ ಮಲ್ಲಿಗೆಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಪುಸ್ತಕಗಳ ಮುಖಚಿತ್ರ ಕಲಾವಿದನಾಗಿಯೂ ಕೆಲಸ ಮಾಡಿದ್ದಾರೆ. ಕಲಾವಿದ ಆರ್‌. ಎಂ. ಹಡಪದರ ಕೆನ್‌ ಸ್ಕೂಲ್‌ ಆಫ್‌ ಆರ್ಟ್‌ ಸೇರಿ ತಮ್ಮ ಬದುಕಿನ ಬಹಳ ಮುಖ್ಯ ಅಧ್ಯಾಯ ಆರಂಭಿಸಿದರು.

ವಿವಿಧ ಪತ್ರಿಕೆಗಳಲ್ಲಿನ ಜನಪ್ರಿಯ ಕಥೆ ಕಾದಂಬರಿಗಳಿಗೆ ಚಿತ್ರ ರಚಿಸಿದ್ದಾರೆ. ಶಾಂತಿನಿಕೇತನದಲ್ಲಿ ಗ್ರಾಫಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಮತ್ತೆ ಪತ್ರಿಕಾ ಕೆಲಸಕ್ಕೆ ಸೇರಿದರು. ಚಿತ್ರರಂಗದಲ್ಲಿ ಕೆಲಸ ಮಾಡಿರುವ ಇವರು ಲಂಕೇಶರ ಪಲ್ಲವಿ, ಎಲ್ಲಿಂದಲೋ ಬಂದವರು, ಅನುರೂಪ ಮತ್ತು ಗಿರೀಶ್‌ ಕಾರ್ನಾಡರ, ಘಟಶ್ರಾದ್ಧ ಚಲನಚಿತ್ರಗಳಿಗೆ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಖ್ಯಾತ ಚಿತ್ರ ಕಲಾವಿದ ಕೆಕೆ ಹೆಬ್ಬಾರರ ಗರಡಿಯಲ್ಲಿ ಪಳಗಿದ ಇವರು ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ವಿದ್ವಾಂಸ ದೇಶನ ಪಡೆದು ಎರಡು ವರ್ಷ ಗ್ರಾಫಿಕ್ಸ್‌ನಲ್ಲಿ ಉನ್ನತ ಅಧ್ಯಯನವನ್ನು ಮಾಡಿದ್ದಾರೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಹೆಸರು ತಂದು ಕೊಟ್ಟಿರುವ ಇವರು ಇದುವರೆಗೂ ಏಳು ಬಾರಿ
ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ನಡೆಸಿ ಕೊಟ್ಟಿದ್ದಾರೆ. ಕರ್ನಾಟಕ, ಲಲಿತಕಾಲ
ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರವು ಕೊಡ ಮಾಡುವ ವರ್ಣಶಿಲ್ಪಿ
ವೆಂಕಟಪ್ಪ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ಬೆಂಗಳೂರಿನ ಕೆಂಪೇಗೌಡ ಪ್ರತಿಮೆ ರಚನೆಯ ಸಂದರ್ಭದಲ್ಲಿ ಪ್ರತಿಮೆಯ
ಕೆಳಭಾಗದಲ್ಲಿ ಕೆಂಪೇಗೌಡ ಅವರ ಜೇವನ ವೃತ್ತಾಂತ ಸಂಬಂಧವಾದ ಉಬ್ಬು ಶಿಲ್ಪ ರಚನೆಗಾಗಿ ಪ್ರಧಾನಮಂತ್ರಿ ಗಳಿಂದಲೂ
ಪುರಸ್ಕೃತರಾಗಿದ್ದಾರೆ. ಕಾರಂತರ ಒಡನಾಡಿಯಾಗಿದ್ದ ಇವರ ಪರಿಸರ ಸಂಬಂಧಿ ಚಿತ್ರಗಳಿಗೆ ಕಾರಂತರೇ ಪ್ರೇರಣೆಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next