ಸೇಡಂ: ತಾಲೂಕಿನ ಮಳಖೇಡ ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆ ಕಂಡ ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಅಧಿಕಾರಿಗಳಿಗೆ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿದರು.
ಆಸ್ಪತ್ರೆಗೆ ಹೋಗುವ ಮುಖ್ಯ ದ್ವಾರದ ಬಳಿ ರಸ್ತೆ ತೀರಾ ಹದಗೆಟ್ಟಿದ್ದು, ರೋಗಿಗಳು ಆಸ್ಪತ್ರೆ ಒಳಗೆ ಹೋಗಲು ಬಾರದಂತಾಗಿದೆ. ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
ಅಲ್ಲೇ ಹರಿ ಯುವ ಚರಂಡಿ ನೀರಿನಿಂದ ರೋಗ ಹರಡುವ ಭೀತಿ ಸೃಷ್ಟಿಯಾಗಿದೆ. ಒಟ್ಟಿನಲ್ಲಿ ಇಲ್ಲಿನ ಆರೋಗ್ಯ ಕೇಂದ್ರವೇ ಅನಾರೋಗ್ಯ ಪೀಡಿತವಾಗಿದೆ. ಇಷ್ಟೊಂದು ಸಮಸ್ಯೆ ಇದ್ದರೂ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿ ಗಳು ಕಣ್ಣು ಮುಚ್ಚಿಕೊಂಡು ಕುಳಿತಿರುವುದು ಸರಿಯಲ್ಲ ಎಂದು ಖಂಡಿಸಿದರು.
ಆಸ್ಪತ್ರೆಗೆ ವೈದ್ಯರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎನ್ನುವ ದೂರು ಇದೆ. ರಾತ್ರಿ ಸಮಯದಲ್ಲಿ ಯಾವೊಬ್ಬ ವೈದ್ಯರು ಇರುವುದಿಲ್ಲ. ಹೀಗಾಗಿ ರೋಗಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟವರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಮುಖಂಡ ಚಂದ್ರಶೇಖರ ಸಂಪಾ, ಮಸ್ತಾನಸಾಬ್, ವಸಂತ ಚವ್ಹಾಣ, ಕಿಶನ್ ಚವ್ಹಾಣ, ನಾಗರಾಜ ಇದ್ದರು.