Advertisement

ಬಟ್ಟಲು ಬ್ಯಾಲೆನ್ಸ್‌

12:30 AM Feb 28, 2019 | |

ಜಾದೂ ಜಗತ್ತಿನಲ್ಲಿ ತಂತ್ರಗಳನ್ನು ಪ್ರದರ್ಶಿಸಲು ವಿವಿಧ ಪ್ರಕಾರಗಳಿವೆ. ಕೈ ಚಳಕ, ಮೈಂಡ್‌ ರೀಡಿಂಗ್‌, ಇಲ್ಯೂಶನ್‌, ಇತ್ಯಾದಿ… ನಾನು ನಿಮಗೆ ಇಲ್ಲಿ ಕಲಿಸುತ್ತಿರುವ ಎಲ್ಲಾತಂತ್ರಗಳು ಪ್ರಾರಂಭಿಕ ಹಂತದ್ದು ಮತ್ತು ಯಾವುದೇ ಅಪಾಯವಿಲ್ಲದೆ, ಯಾರ ನೆರವಿಲ್ಲದೆ, ಸರಳವಾಗಿ ನೀವೇ ಮಾಡಬಹುದಾದ ತಂತ್ರಗಳು. ಈ ಬಾರಿ ನಾನು ಒಂದು ಬಟ್ಟಲನ್ನು ಒಂದು ಕಾರ್ಡ್‌ ಮೇಲೆ ಬ್ಯಾಲೆನ್ಸ್ ಮಾಡುವ ಮ್ಯಾಜಿಕ್‌ ಹೇಳಿ ಕೊಡುತ್ತೇನೆ.

Advertisement

ಪ್ರದರ್ಶನ: 
ಯಾವುದೇ ಒಂದು ಕಾರ್ಡನ್ನು ಪ್ರೇಕ್ಷಕರಿಗೆ ತೋರಿಸಿ, ಅದರ ಎಲ್ಲಾ ಭಾಗಗಳನ್ನೂ ಎಲ್ಲಾ ಕೋನದಲ್ಲೂ ತಿರುಗಿಸಿ ತೋರಿಸುತ್ತಾ ಉದ್ದುದ್ದವಾಗಿ ಟೇಬಲ್‌ ಮೇಲೆ ನಿಲ್ಲಿಸುತ್ತಾನೆ. ಕಾರ್ಡ್‌ ಆಶ್ಚರ್ಯಕರ ರೀತಿಯಲ್ಲಿ ನಿಲ್ಲುತ್ತದೆ. ಜಾದೂಗಾರ ಅಷ್ಟಕ್ಕೇ ತನ್ನ ಮ್ಯಾಜಿಕ್‌ ನಿಲ್ಲಿಸದೆ ಆ ಕಾರ್ಡ್‌ ಮೇಲೆ ಅರ್ಧ ನೀರು ತುಂಬಿರುವ ಪ್ಲಾಸ್ಟಿಕ್‌ ಲೋಟವೊಂದನ್ನು ನಿಲ್ಲಿಸಿ, ಛೂ ಮಂತ್ರ ಹಾಕಿ ಕೈ ಬಿಡುತ್ತಾನೆ. ಲೋಟ ಕಾರ್ಡ್‌ ಮೇಲಿಂದ ಬೀಳದೆ ಬ್ಯಾಲೆನ್ಸ್ ಪಡೆದು ನಿಲ್ಲುತ್ತದೆ. ಮಿಲಿಮೀಟರ್‌ನಷ್ಟು ಅಗಲವಿರುವ ಕಾರ್ಡ್‌ ತಾನಾಗಿಯೇ ನಿಲ್ಲುವುದು ಕಷ್ಟ, ಅದರ ಮೇಲೆ ನೀರು ತುಂಬಿರುವ ಕಪ್‌ ನಿಲ್ಲಿಸೋದೆ ಈ ಮ್ಯಾಜಿಕ್‌.

ಬೇಕಾಗುವ ಸಾಮಾನುಗಳು:
ಸ್ವಲ್ಪ ಗಟ್ಟಿಯಿರುವ (ವಿಸಿಟಿಂಗ್‌ ಕಾರ್ಡ್‌, ಇಸ್ಪೀಟ್‌ ಕಾರ್ಡ್‌ ಯಾವುದಾದರೂ ಸರಿ)ಒಂದೇ ತರಹದ ಎರಡು ಕಾರ್ಡ್‌ಗಳು, ಅಂಟು, ಪ್ಲಾಸ್ಟಿಕ್‌ ಲೋಟ, ಬಣ್ಣದ ನೀರು

ತಂತ್ರ:
ಒಂದು ಕಾರ್ಡನ್ನು ಉದ್ದುದ್ದಕ್ಕೆ  ಸರಿಯಾಗಿ ಅರ್ಧ ಭಾಗವನ್ನು ಮಡಚಿ ಗೆರೆ ಬೀಳುವಂತೆ ಕೈಯಿಂದ ತಿಕ್ಕಿ. ಈಗ ಅದರ ಮುಂದಿನ ಒಂದು ಭಾಗಕ್ಕೆ ಮಾತ್ರ ಅಂಟನ್ನು ಹಚ್ಚಿ ಅದನ್ನು ಇನ್ನೊಂದು ಕಾರ್ಡಿನ ಹಿಂಬದಿಗೆ ಹಚ್ಚಿ ಒತ್ತಿ ಹಿಡಿಯಿರಿ.(1ನೇ ಚಿತ್ರ ಗಮನಿಸಿ) ಅರ್ಧಕ್ಕೆ ಅಂಟಿಸಿರುವುದರಿಂದ ಇನ್ನರ್ಧ ಹಾಗೇ ಇರುತ್ತದೆ. ಕಾರ್ಡ್‌ ತೋರಿಸುವಾಗ ನಿಮ್ಮ ಕೈ ಆಂಟಿಸದೆ ಇರುವ ಭಾಗದ ತುದಿಯನ್ನು ಹಿಡಿದು ಪ್ರದರ್ಶಿಸಿ (2ನೇ ಚಿತ್ರ ಗಮನಿಸಿ). ಆಗ ನಿಮ್ಮ ಕೈಯಲ್ಲಿರುವುದು ಎರಡು ಕಾರ್ಡ್‌ಗಳು ಎಂದು ಯಾರಿಗೂ ಗೊತ್ತಾಗುವುದಿಲ್ಲ. ಟೇಬಲ್‌ ಮೇಲೆ ಇಡುವಾಗ ಯಾರಿಗೂ ಗೊತ್ತಾಗದಂತೆ, ಅಂಟಿಸದೆ ಇರುವ ಭಾಗವನ್ನು ತೆರೆದು ಇಡಿ. ಈಗ ನಿಮಗೆ “ಖ’ ಆಕಾರದ ಪುಟಾಣಿ ಟೇಬಲ್‌ ಒಂದು ರೆಡಿಯಾಗುತ್ತದೆ (3ನೇ ಚಿತ್ರ ಗಮನಿಸಿ). ಅದರ ಮೇಲೀಗ ಪ್ಲಾಸ್ಟಿಕ್‌ ಕಪ್‌ ಮಾತ್ರವಲ್ಲ ನಿಮ್ಮ ಮೊಬೈಲ್‌ಅನ್ನು ಕೂಡ ಇಟ್ಟು ಅಚ್ಚರಿ ಪಡಿಸಬಹುದು. ನೆನಪಿರಲಿ ಪ್ರದರ್ಶನದ ವೇಳೆ ಪ್ರೇಕ್ಷಕರು ವೇದಿಕೆಯ ಮುಂದೆ ಮಾತ್ರ ಇರುವಂತೆ ನೋಡಿಕೊಳ್ಳಿ.
ಈ ಮ್ಯಾಜಿಕ್‌ ಕುರಿತು ಇನ್ನೂ ನಿಖರವಾಗಿ ತಿಳಿಯಲು ಈ ವಿಡಿಯೊ ನೋಡಿ- bit.ly/2Nrl0y6

-ಗಾಯತ್ರಿ ಯತಿರಾಜ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next