Advertisement

ಶಿಶಿಲ ಸೇತುವೆ ಸಾಹಸ

06:00 AM Oct 16, 2018 | |

ಅದೊಂದು ಪುಟ್ಟ ಕುಗ್ರಾಮ, ಶಿಶಿಲ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಂಚಿನಲ್ಲಿದೆ. ಕೃಷಿಕರೇ ವಾಸಿಸುವಂಥ ಹಳ್ಳಿ. ವರ್ಷಕಾಲದಲ್ಲಿ ಭೋರ್ಗರೆದು ಹರಿಯುವ ಕಪಿಲೆಯ ಉಪನದಿ, ಆ ಹಳ್ಳಿಗರನ್ನು ಸದಾ ಕಾಡುತ್ತದೆ.  ಆ ಪ್ರವಾಹಕ್ಕೆ ಬೆಚ್ಚಿಯೇ ಅನೇಕರು ಶಿಕ್ಷಣ ಕೈಬಿಟ್ಟಿದ್ದೂ ಇದೆ. ಈಗ ಅಲ್ಲಿನ ಮಕ್ಕಳಿಗೆ ನದಿಯ ಭಯವೇ ಇಲ್ಲ. ಬಾಲಕೃಷ್ಣ ಎಂಬ ಯುವಕ ಸರ್ಕಾರದ ನೆರವಿಲ್ಲದೇ, ಮರದ ದಿಮ್ಮಿಗಳಿಂದ ಸೇತುವೆ ಕಟ್ಟಿ, ಆ ಊರಿಗೆ ಹೀರೋ ಆಗಿದ್ದಾನೆ… ಇದರೊಟ್ಟಿಗೆ ನಿತ್ಯವೂ ನದಿಯಲ್ಲಿ ಹುಟ್ಟು ಹಾಕಿ, ಶಾಲೆ ತಲುಪಿ, ಪಾಠ ಮಾಡುವ ಶಿಕ್ಷಕಿ, ಅಲ್ಲೆಲ್ಲೋ ದೂರದ ಅಸ್ಸಾಮ್‌ನಲ್ಲಿ ಈಜಿಕೊಂಡು ವಿದ್ಯಾ ದೇಗುಲ ತಲುಪ ಮಕ್ಕಳ ಮನಮಿಡಿಯುವ ಕತೆಗಳು, ಈ ಬಾರಿಯ “ಜೋಶ್‌’ನ ನವೋತ್ಸಾಹದ ವಿಶೇಷ…

Advertisement

ಶಿಶಿಲ! ಬೆಳ್ತಂಗಡಿ ತಾಲೂಕಿನ ಕೊನೆಯ ಅಂಚು. ಅಭಿವೃದ್ಧಿಯಿಂದ ಹಿಂದುಳಿದ ಕಾರಣ ದೊಡ್ಡ ಹೆಸರು ಮಾಡದಿದ್ದರೂ ಈ ಊರು ಪ್ರಭಾಕರ ಶಿಶಿಲರಂಥ ಖ್ಯಾತ ಸಾಹಿತಿಗಳು, ಶಿವರಾಮ ಶಿಶಿಲರಂಥ ಮಕ್ಕಳ ಸಾಹಿತಿ, “ಯಕ್ಷ ಛಂದಸ್ಸಿನ ಗ್ರಂಥಕರ್ತ’ ದಿ. ಸೀತಾರಾಮ ಕೆದಿಲಾಯರಂಥ ಮಹನೀಯರಿಗೆ ಜನ್ಮ ನೀಡಿದೆ. ಹಾಗೆಯೇ ಇಲ್ಲಿರುವ ಪುರಾಣ ಪ್ರಸಿದ್ಧಿಯ ಶಿಶಿಲೇಶ್ವರ ದೇಗುಲ ಈ ವರ್ಷದ ಮಾರಿ ಮಳೆಗೆ ನೀರಿನೊಳಗೆ ಅಡಗಿತ್ತು ಎಂಬ ಮಾಧ್ಯಮಗಳ ಸುದ್ದಿಯ ಮೂಲಕವೂ ಗಮನ ಸೆಳೆದಿತ್ತು.

  ಇಲ್ಲಿ ಇನ್ನಷ್ಟು ಪ್ರಸಿದ್ಧರು ಬೆಳಕಿಗೆ ಬರಬಹುದಿತ್ತೋ ಏನೊ! ಆದರೆ, ಎಲ್ಲರ ವಿದ್ಯಾಭ್ಯಾಸಕ್ಕೆ ಕಂಟಕವಾಗಿದ್ದುದು ವರ್ಷಕಾಲದಲ್ಲಿ ತುಂಬಿ ಭೋರ್ಗರೆದು ಹರಿಯುವ ಕಪಿಲೆಯ ಉಪನದಿ. ಅದನ್ನು ದಾಟಿ ಬರಲು ಒಂದು ಸೇತುವೆ ಮಾಡಿಸಿ ಕೊಡುವುದಾಗಿ ಸ್ವಾತಂತ್ರ್ಯ ಬಂದ ಲಾಗಾಯಿತಿನಿಂದಲೂ ಆಶ್ವಾಸನೆ ನೀಡುತ್ತಲೇ ಬಂದ ಒಬ್ಬ ರಾಜಕಾರಣಿಯೂ ನುಡಿದಂತೆ ನಡೆಯಲಿಲ್ಲ. ಹೀಗಾಗಿ ಮಳೆಗಾಲದಲ್ಲಿ ನದಿಯಾಚೆಯ ಹಳ್ಳಿಗಳ ಮಕ್ಕಳು ನದಿಯನ್ನು ದಾಟಿ ಇನ್ನೊಂದು ದಡದಲ್ಲಿರುವ ಶಿಶಿಲದ ಶಾಲೆಗೆ ಕಲಿಯಲು ಬರುವುದು ಗಗನ ಕುಸುಮವೇ ಆಗಿತ್ತು. ಒಂದು ತೆಪ್ಪವಾದರೂ ಇದ್ದರೆ ಅನುಕೂಲವಾಗುತ್ತಿತ್ತು. ಆದರೆ, ಅದಕ್ಕೂ ಮನಸ್ಸು ಮಾಡುವವರಿರಲಿಲ್ಲ.

  ಇಂತಹ ಊರಲ್ಲಿ ಈಗ ಹೀರೋ ಆದವರು, ಬಾಲಕೃಷ್ಣ ಶಿಶಿಲ ಎಂಬ 32ರ ಹರಯದ ಯುವಕ. ಅದಕ್ಕೆ ಕಾರಣ ಇದೇ ನದಿ, ಅದರ ಪ್ರವಾಹ!

  ಕನಸುಗಳ ಮೂಟೆ ಹೊತ್ತು ಬದುಕಿಗೆ ಅಡಿಯಿಟ್ಟ ಬಾಲಕೃಷ್ಣ, ದೊಡ್ಡ ಅಧಿಕಾರಿ ಆಗಬೇಕೆಂದು ಬಯಸಿದವರಲ್ಲ. ಹಿಂದುಳಿದ ವರ್ಗಕ್ಕೆ ಸೇರಿದ ಗಿರಿಜನರಲ್ಲಿ ಪ್ರಮುಖವಾಗಿರುವ ಮಲೆಕುಡಿಯ ಜಾತಿ ಅವರದು. ಇವರ ಜಾತಿಯವರ ವಿದ್ಯಾಭ್ಯಾಸಕ್ಕೆ ಹಲವು ಸೌಲಭ್ಯಗಳನ್ನು ಸರಕಾರಗಳು ಕೊಡುತ್ತಾ ಬಂದಿವೆ. ಆದರೆ, ನದಿ ದಾಟಿ ಶಾಲೆಗೆ ಬಂದು ಕಲಿಯಲಾಗದ ಅವರ ಮಕ್ಕಳ ಅಸಹಾಯಕ ಸ್ಥಿತಿಗೆ ಮರುಕಪಟ್ಟು ನದಿ ದಾಟಲು ಅನುಕೂಲ ಒದಗಿಸಲು ಮುಂದಾದವರು ಯಾರೂ ಇರಲಿಲ್ಲ.

Advertisement

   ಬಾಲಕೃಷ್ಣ ಕಲಿತದ್ದು ಕೇವಲ ಏಳನೇ ತರಗತಿ. ಶಿಶಿಲದಲ್ಲಿ ಸ್ವಂತವಾದ ಚಿಕ್ಕ ಅಂಗಡಿಯ ಗಳಿಕೆ ಅವರ ಬದುಕಿನ ಬಂಡಿ ಎಳೆಯಲು ನೆರವಾಗುತ್ತದೆ. ಆದರೆ, ಕಲಿಯಲಾಗದ ಕೊರತೆಯಿಂದ ಭಗ್ನಗೊಂಡ ಹಲವು ಮಕ್ಕಳ ಬದುಕಿನ ಬಗೆಗೆ ನೆನೆಸಿಕೊಂಡಾಗ ಅವರ ಮನಸ್ಸು ಬೇಗುದಿಯ ಕಡಲಾಗುತ್ತಿತ್ತು. ಯಾರಾದರೂ ನದಿಗೊಂದು ಸೇತುವೆ ಮಾಡಿಕೊಡಲಿ ಎಂಬ ಭಾವದಲ್ಲಿ ಹಲವಾರು ಗಣ್ಯರಲ್ಲಿ ಮನವಿ ಮಾಡಿಕೊಂಡರು. ಸರಕಾರದ ಇಲಾಖೆಗಳಿಗೆ ಅರ್ಜಿ ಸಲ್ಲಿಸುತ್ತಲೇ ಬಂದರು. ಆದರೆ, ಎಲ್ಲರೂ ಕಿವುಡರಾಗಿಯೇ ಉಳಿದುಕೊಂಡರು. ಊರಿನ ಜನಾರ್ದನ ಗೌಡರ ಬಳಿ ಐವತ್ತು ವರ್ಷಗಳಿಂದ ಸೇತುವೆಗಾಗಿ ಸಲ್ಲಿಸಿದ ಅರ್ಜಿಗಳ ಬಹು ದೊಡ್ಡ ಕಡತವೇ ಇದೆ.

  ಇದನ್ನೆಲ್ಲ ಕಂಡ ಬಳಿಕ ಮನಸ್ಸಿನಲ್ಲಿ ಮೂಡಿದ ಛಲದ ಫ‌ಲವಾಗಿ ಇಂದು ಬಾಲಕೃಷ್ಣ ತನ್ನದೇ ಪ್ರಯತ್ನದ ಮೂಲಕ ನದಿಗೊಂದು ತೂಗು ಸೇತುವೆ ನಿರ್ಮಿಸಿ ನದಿ ದಾಟಲಾಗದೆ ಕನಸುಗಳನ್ನು ಸುಡುತ್ತಿರುವ ಎಳೆಯ ಮನಸ್ಸುಗಳಿಗೆ ಸಂತಸ ತುಂಬಿದ್ದಾರೆ. ಕಡೆಗೂ ಅವರ ಮನಗೆ ಓಗೊಡದವರಿಗೆ ಹೀಗೊಂದು ಸವಾಲು ಎಸೆಯುವ ಮೂಲಕ ಹಳ್ಳಿಯ ಹೈದನೊಬ್ಬನ ಸಾಧನೆಗೆ ಜೀವಂತ ಸಾಕ್ಷ್ಯವಾಗಿದ್ದಾರೆ.

  ಇಲ್ಲಿ ಬಾಲಕೃಷ್ಣ ಅವರ ಸಾಹಸ ಹತ್ತಾರು. ಶಿಶಿಲ ಪೇಟೆಯಿಂದ ನಾಲ್ಕೈದು ಕಿ.ಮೀ. ದೂರದ ಶಿಶಿಲ- ಪೊಲಿಪು ರಸ್ತೆಯ ಅವ್ಯವಸ್ಥೆಯಿಂದಾಗಿ ಆ ಕಡೆಯ ಹತ್ತಿಪ್ಪತ್ತು ಮನೆಗಳ ರೈತರಿಗೆ ಪೇಟೆಗೆ ಬರಲು ಸಾಧ್ಯವೇ ಇರಲಿಲ್ಲ. ಬಾಲಕೃಷ್ಣ ಕೆಲವು ಮಂದಿ ಗೆಳೆಯರ ಜತೆಗೂಡಿ ಆ ರಸ್ತೆಗೆ ಹೊಳೆಯ ಕಲ್ಲಿನ ಹರಳು ಹಾಸಿ ಹೊಂಡಗುಂಡಿಗಳನ್ನು ಮುಚ್ಚಿ ವಾಹನ ಓಡಾಡುವ ಹಾಗೆ ಮಾಡಿದರು. ಈ ಗೆಳೆಯರ ಬಳಗಕ್ಕೆ ಖರ್ಚಾದ ಹಣ ಐವತ್ತು ಸಾವಿರ ರೂ.! ಶಿಶಿಲದ ಗ್ರಾಮ ಪಂಚಾಯತ್‌ ಅದರಲ್ಲಿ ಐದು ಸಾವಿರ ರೂ. ದೇಣಿಗೆ ಕೊಡುವ ಆಶ್ವಾಸನೆ ನೀಡಿ ಕಡೆಗೂ ಕೊಡಲೇ ಇಲ್ಲ ಎಂದು ವಿಷಾದದಿಂದ ಹೇಳುತ್ತಾರೆ ಬಾಲಕೃಷ್ಣ.

  ಇದೇ ರಸ್ತೆಯನ್ನು ಸುತ್ತುವರಿದ ನದಿಯಿಂದಾಚೆಗೆ ಮನೆಗಳಿವೆ. ಆ ಮನೆಗಳ ಮಕ್ಕಳು ಅಂಗನವಾಡಿ, ಯೂಕೆಜಿ, ಎಲ್‌ಕೆಜಿ ತರಗತಿಗಳಿಗೆ ಹೋಗುತ್ತಾರೆ. ಮಳೆಗಾಲದಲ್ಲಿ ಪ್ರವಾಹ ಭೋರ್ಗರೆಯುವಾಗ ಹೆತ್ತವರು ನದಿಯ ದಡದಲ್ಲಿ ಕೂಡುತ್ತಿದ್ದರು. ನೆರೆ ಇಳಿದ ಮೇಲೆ ಮಕ್ಕಳನ್ನು ಹೆಗಲಲ್ಲಿ ಹೊತ್ತುಕೊಂಡು ಸೊಂಟದ ವರೆಗಿನ ನೀರಿನಲ್ಲಿ ದಾಟುತ್ತಿದ್ದರು. ಸಂಜೆಯೂ ಇದೇ ಕತೆ. ನೆರೆ ಇಳಿಯದೆ ಹೋದರೆ ಶಾಲೆಗೆ ದೂರವಾಣಿ ಕರೆ ಮಾಡಿ ಮಕ್ಕಳು ಬರಲಾಗುವುದಿಲ್ಲ ಎನ್ನುತ್ತಿದ್ದರು. ಮಳೆಗಾಲದಲ್ಲಿ ರೈತರು ಬೆಳೆಯುವ ಬಸಳೆ, ಬಾಳೆಕಾಯಿ, ವೀಳ್ಯದೆಲೆ ಇನ್ನಿತರ ತರಕಾರಿಗಳನ್ನು ನದಿ ದಾಟದೆ ಪೇಟೆಗೆ ಒಯ್ಯಲು ಸಾಧ್ಯವಿರಲಿಲ್ಲ. ಶ್ರಮದ ದುಡಿಮೆ ಪೇಟೆಗೆ ಒಯ್ಯಲಾಗದೆ ನಿರರ್ಥಕವಾದ ದಿನಗಳೂ ಇದ್ದವು.

  “ನಮ್ಮ ನದಿಗೊಂದು ಸೇತುವೆ ಮಾಡಿಕೊಡಿ’ ಎಂದು ಜಿ.ಪಂ. ಸದಸ್ಯರು, ಸಂಸದರು, ಹಿಂದಿನ ಶಾಸಕರು ಎಲ್ಲರಿಗೂ ಕೊಟ್ಟ ಅರ್ಜಿಗಳಿಗೆ ಲೆಕ್ಕವೇ ಇಲ್ಲ. ಆದರೆ, ಪರಿಣಾಮ ಮಾತ್ರ ಶೂನ್ಯವೇ.

  ಆಗ ಬಾಲಕೃಷ್ಣ ರೈತರ ಈ ಪರಿಸ್ಥಿತಿಯನ್ನು ನೋಡಿದರು. ಚಿಕ್ಕಂದಿನಲ್ಲಿ ಆಡುತಿದ್ದ ಜೋಕಾಲಿಯಾಟ ಅವರಿಗೆ ನೆನಪಾಯಿತು. ಹಲವು ತೂಗು ಸೇತುವೆಗಳ ವಿನ್ಯಾಸಗಳನ್ನು ನೋಡಿಬಂದರು. ಹೀಗೊಂದು ಸೇತುವೆ ಮಾಡುವ ಐಡಿಯಾ ಕೊಟ್ಟಾಗ ಊರಿನ ಕೆಲವು ಮಿತ್ರರು ಜತೆಗೂಡಿದವರು. ಸೇತುವೆ ರಚನೆಗೆ ಬೇಕಾದ ಮೊಳೆಗಳು, ಗಟ್ಟಿಯಾದ ಹಗ್ಗವನ್ನು ತನ್ನ ಅಂಗಡಿಯಿಂದಲೇ ಬಾಲಕೃಷ್ಣ ಪೂರೈಸಿದರು. ಅದರ ಮೊತ್ತ ಮೂವತ್ತು ಸಾವಿರ ರೂ.ಗಳು ಅವರ ಮಟ್ಟಿಗೆ ಸಣ್ಣದಲ್ಲವಾದರೂ ಜನೋಪಕಾರದ ಬೆಲೆಯ ಮುಂದೆ ಅದೇನು ಮಹಾ ಅನಿಸಿತಂತೆ. ಹದಿನೈದು ಮಂದಿ ಸೇರಿ ಅಡಕೆ ಮರಗಳನ್ನು ಸೀಳಿ, ದಬ್ಬೆ ತಯಾರಿಸಿದರು. ಮರಗಳ ಕೊಂಬೆಗಳಿಗೆ ಹಗ್ಗ ಬಿಗಿದರು. ನದಿಯಲ್ಲಿರುವ ಮರಗಳ ಭದ್ರವಾದ ಬೇರುಗಳಿಗೆ ಹಗ್ಗದ ಇನ್ನೊಂದು ತುದಿಯನ್ನು ಬಿಗಿದು ಮಿಸುಕಾಡದಂತೆ ಮಾಡಿದರು. ಹಗ್ಗದ ಮೇಲೆ ಅಡ್ಡವಾಗಿ ಅಡಿಗೋಲುಗಳನ್ನು ಕಟ್ಟಿ, ಅದರ ಮೇಲಿಂದ ದಬ್ಬೆಗಳನ್ನು ಹಾಸಿದರು.

  ಯಾವ ಗಾಳಿಗೂ ಅಲುಗಾಡದ ಸೇತುವೆ. ನದಿಯ ಪ್ರವಾಹ ನಾಲಿಗೆ ಚಾಚದಂತೆ ಇಪ್ಪತ್ತು ಅಡಿ ಎತ್ತರದಲ್ಲಿದೆ. ಮೂವತ್ತು ಮೀಟರ್‌ ಉದ್ದವಾಗಿದೆ. ಮಕ್ಕಳು ಸಲೀಸಾಗಿ ದಾಟುವಾಗಲೂ ಅಪಾಯಲ್ಲ. ಎರಡೂ ಬದಿಗಳಲ್ಲಿ ತಡೆಗಳಿವೆ. ಊರವರು 45 ಆಳಿನ ಕೆಲಸ ಮಾಡಿದ್ದಾರೆ. ಅವರ ಮನೆಯವರು ಮುತುವರ್ಜಿಯಿಂದ ಊಟ, ತಿಂಡಿ ತಯಾರಿಸಿ ಕೊಟ್ಟು, ಹಲವು ದಶಕಗಳ ನಮ್ಮ ಬೇಡಿಕೆಯ ಸೇತುವೆ ಮಾಡಿಕೊಟ್ಟವರ ಹೊಟ್ಟೆ ತಣ್ಣಗಿರಲಿ ಎಂದು ಹರಸಿದ್ದಾರೆ. ಮಕ್ಕಳಿಗಂತೂ ಸೇತುವೆಯಲ್ಲಿ ಮೊದಲ ಸಲ ದಾಟಿದಾಗ ಆದ ಖುಷಿ ಅಷ್ಟಿಷ್ಟಲ್ಲ. ಎಂಟು ಮಂದಿ ಒಮ್ಮೆಲೇ ದಾಟಿದರೂ ಸೇತುವೆ ಜಗ್ಗುವುದಿಲ್ಲ.

  ಬಾಲಕೃಷ್ಣ ಅವರೀಗ ಈ ಊರಿನಲ್ಲಿ ಹೀರೋ. ಈ ಊರನ್ನು ಹುಡುಕಿಕೊಂಡು ದೂರದರ್ಶನದವರು ಬಂದಿದ್ದಾರೆ. ಆಕಾಶವಾಣಿಯಲ್ಲಿ ಬಾಲಕೃಷ್ಣನ (ಮೊ. 9481024427) ಸಂದರ್ಶನ ಮೂಡಿಬಂದಿದೆ.

ಸೇತುವೆ ಕಟ್ಟಿದ ಟೀಮ್‌
ಸೇತುವೆ ಕಟ್ಟುವ ಕಾರ್ಯದಲ್ಲಿ ಲಿಂಗಪ್ಪ ಗೌಡ, ಯೋಗೀಶ ನಾಯ್ಕ, ಜನಾರ್ದನ ಗೌಡ, ವೀರಪ್ಪ ನಾಯ್ಕ, ಶ್ರೀಧರ ಗೌಡ, ದೀಪನ್‌, ಕಮಲಾಕ್ಷ, ಬಾಲಕೃಷ್ಣ ಗೌಡ, ಪೂವಪ್ಪ ನಾಯ್ಕ ನಾರಾಯಣ ನಾಯ್ಕ ಮತ್ತು ಹಲವರು ಬಾಲಕೃಷ್ಣ ಅವರಿಗೆ ಹೆಗಲು ಕೊಟ್ಟರು. ತಮ್ಮದೇ ಮನೆಯ ಕೆಲಸವೆಂಬಂತೆ ಕಸುವು ಧಾರೆಯೆರೆದರು.

ಈ ನದಿಯ ಪ್ರವಾಹದ ಕಾರಣಕ್ಕೆ ಅನೇಕರು ವಿದ್ಯಾಭ್ಯಾಸ ತೊರೆದು, ಇಲ್ಲಿ ಕೃಷಿ ಅಪ್ಪಿಕೊಂಡಿದ್ದರು. ಅವರ ಮುಂದಿನ ಪೀಳಿಗಿಗೆ ಈ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ನಾವು ಸೇತುವೆ ಕಟ್ಟಿದೆವು.
– ಬಾಲಕೃಷ್ಣ ಶಿಶಿಲ, ಸೇತುವೆ ರೂವಾರಿ

– ಚಿತ್ರ, ಲೇಖನ: ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next