Advertisement

ಪುಣೆ ರೋಯಲ್‌ ಕಾನೊಟ್‌ ಬೋಟ್‌ಕ್ಲಬ್‌ ಅಧ್ಯಕ್ಷರಾಗಿ ಬಾಲಕೃಷ್ಣ ಹೆಗ್ಡೆ

05:10 PM Apr 03, 2017 | |

ಪುಣೆ: ಪುಣೆಯ ಪ್ರತಿಷ್ಠಿತ ರೋಯಲ್‌ ಕಾನೊಟ್‌ ಬೋಟ್‌  ಕ್ಲಬ್‌ನ ನೂತನ ಅಧ್ಯಕ್ಷರಾಗಿ ಪ್ರಸಿದ್ಧ ಉದ್ಯಮಿ, ಸಮಾಜ ಸೇವಕ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ಆಯ್ಕೆಯಾಗಿದ್ದಾರೆ.

Advertisement

ಹತ್ತು  ಸಾವಿರಕ್ಕೂ ಹೆಚ್ಚು  ಸದಸ್ಯರನ್ನು ಹೊಂದಿರುವ ಸುಮಾರು 150 ವರ್ಷಗಳಷ್ಟು ಇತಿಹಾಸ  ಹೊಂದಿದ ಅತ್ಯಾಧುನಿಕ ಸಕಲ ಸೌಕರ್ಯಗಳನ್ನೊಳಗೊಂಡ ಪುಣೆಯ ಐಷಾರಾಮಿ ಕ್ಲಬ್‌ನ  ಕಾರ್ಯಕಾರಿ ಸಮಿತಿ ಸದಸ್ಯರು ಬಾಲಕೃಷ್ಣ ಹೆಗ್ಡೆ ಅವರನ್ನು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಗೊಳಿಸಿದ್ದು ಪ್ರಪ್ರಥಮ ಬಂಟ ಸಮಾಜದ ಅಧ್ಯಕ್ಷರೆಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

ಬಾಲಕೃಷ್ಣ ಹೆಗ್ಡೆಯವರ ಬದುಕಿನ ನೋಟ ಮೂಲತಃ ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ದೊಡ್ಡಬೀಡು ಗಣಪಯ್ಯ ಹೆಗ್ಡೆ ಹಾಗೂ ಮೊಳಹಳ್ಳಿ ಮುತ್ತಕ್ಕ ಹೆಗ್ಡೆ ದಂಪತಿಯ ಪುತ್ರನಾಗಿ ಜನಿಸಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದು ಅನಂತರ ಮಹಾರಾಷ್ಟ್ರದ ಪುಣೆಗೆ ಆಗಮಿಸಿ ಪುಣೆಯ ಐಎಲ್‌ಎಸ್‌ ಲಾ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಜೀವನದಲ್ಲಿ ಮಹತ್ವಾಕಾಂಕ್ಷೆ ಹೊಂದಿದ ಇವರ ದೂರದರ್ಶಿತ್ವದ ಗುಣದಿಂದ ಕೆಮಿಕಲ… ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಕಾರ್ಯಪ್ರವೃತ್ತರಾಗಿ ಸತತ ಪರಿಶ್ರಮ ಹಾಗೂ ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆದು ಬಿಕೆ ಬೆಂಝಿಲ… ಪ್ರೈವೇಟ್‌ ಲಿಮಿಟೆಡ್‌ ಹಾಗೂ ಅಕ್ಷಯ್‌ ಆರ್ಗಾನಿಕ್‌ ಪ್ರೈವೇಟ್‌ ಲಿಮಿಟೆಡ್‌ ಎನ್ನುವ ಕಂಪೆನಿಗಳ ಮೂಲಕ ಉದ್ಯಮ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆದುಕೊಂಡು ಪ್ರಸಿದ್ಧಿಯನ್ನು ಗಳಿಸಿದ್ದಾರೆ.

ಉದ್ಯಮದ ಪ್ರಗತಿಯೊಂ ದಿಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಆಸಕ್ತಿ ಬೆಳೆಸಿಕೊಂಡು ಯಾವುದೇಪ್ರಸಿದ್ಧಿಯನ್ನು ಬಯಸದೆ ನಿಸ್ವಾರ್ಥ ಸಮಾಜ ಸೇವೆಯನ್ನು ಮಾಡುತ್ತಾ 2001ರಿಂದ 2003ರವರೆಗೆ ಪುಣೆಯ ಬಂಟ ಸಮಾಜದ ಪ್ರತಿಷ್ಠಿತ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡು, ಸಮಾಜ ಬಾಂಧವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಉತ್ತಮ ನಾಯಕರೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಸಂಘದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಸಮಾಜದಲ್ಲಿನ ಬಡವ ಬಲ್ಲಿದನೆಂಬ ಭೇದವನ್ನು ತೊಡೆದುಹಾಕಿ ಎಲ್ಲರನ್ನೂ ಸಂಘದಲ್ಲಿ ತೊಡಗಿಕೊಳ್ಳುವಂತೆ ಮಾಡುವಲ್ಲಿ ಸತತವಾಗಿ ಶ್ರಮಿಸಿದ್ದರು.

ಅಲ್ಲದೆ ಸಂಘದಲ್ಲಿ ಯುವ ಪೀಳಿಗೆಯನ್ನು ಸದಾ ಪ್ರೋತ್ಸಾಹಿಸುತ್ತ ಸಮಾಜದ ಮುಖ್ಯವಾಹಿನಿಗೆ ಬರುವಂತೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದುದರಿಂದಲೇ ಇವರು ಬಂಟ ಸಮಾಜದ ಉತ್ಸಾಹಿ ದೂರದೃಷ್ಟಿಯ ಪರೋಪಕಾರಿ ನಾಯಕರಾಗಿ ಗುರುತಿಸಿಕೊಂಡು ಕಿರಿಯ ರಿಂದ ಹಿಡಿದು ಹಿರಿಯರವರೆಗೆ ಪ್ರೀತಿ ಪಾತ್ರರಾಗಿ ಗುರುತಿಸಿ ಕೊಂಡಿದ್ದಾರೆ. ಪುಣೆ ಬಂಟರ ಸಂಘದ ನಿರ್ಮಾಣ ಹಂತದ ಸಾಂಸ್ಕೃತಿಕ ಭವನಕ್ಕೂ ತನ್ನ ಕೊಡುಗೆಯನ್ನು ನೀಡಿದ್ದು ಸಂಘದ ಸಲಹಾ ಸಮಿತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಊರಿನ ಬಗ್ಗೆ ಅಪಾರ ಅಭಿಮಾನ ಹೊಂದಿದ ಇವರು ತುಳು ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ಬಗೆಗೂ ಪ್ರೀತಿಯುಳ್ಳವರಾಗಿ ಪುಣೆಯ ತುಳು-ಕನ್ನಡಿಗರ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹ  ನೀಡುತ್ತಾ ಬಂದಿದ್ದಾರೆ. ಅಲ್ಲದೆ ಇಲ್ಲಿನ ಅನ್ಯಭಾಷಿಕರೊಂದಿಗೂ ಅನ್ಯೋನ್ಯ ನಂಟನ್ನು ಹೊಂದಿದ್ದು  ಪುಣೆಯ ಪ್ರತಿಷ್ಠಿತ  ರೋಯಲ್‌ ಕಾನೊಟ್‌ ಬೋಟ್‌ ಕ್ಲಬ್‌ನಲ್ಲಿ  ಹಲವಾರು ವರ್ಷಗಳಿಂದ ಸದಸ್ಯರಾಗಿ ಅನಂತರ ಕಳೆದ ಆರು ವರ್ಷಗಳಿಂದ ಸಕ್ರಿಯರಾಗಿದ್ದಲ್ಲದೆ, ಕ್ಲಬ್‌ನ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿ ಸದಸ್ಯರೆಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಇದೀಗ ಅಧ್ಯಕ್ಷರಾಗಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಗೊಂಡಿರುವುದು ಇವರ ಪ್ರಾಮಾಣಿಕ ಸೇವೆಗೆ ಸಂದ ಗೌರವವಾಗಿದೆ. ಭವಿಷ್ಯದಲ್ಲಿ  ಕ್ಲಬ್‌ನ್ನು ಹಲವಾರು ಕ್ರಿಯಾಯೋಜನೆಗಳ ಮೂಲಕ ಆದರ್ಶಪಥದತ್ತ ಕೊಂಡೊಯ್ಯುವ ಆಶಯವನ್ನು ಅವರು ಹೊಂದಿದ್ದಾರೆ.

ಇವರ ಉದ್ಯಮ ಕ್ಷೇತ್ರದ ಯಶಸ್ಸನ್ನು ಪರಿಗಣಿಸಿ ಮಹಾರಾಷ್ಟ್ರ ಸರಕಾರದಿಂದ ಬೆಸ್ಟ್‌  ಎಕ್ಸ್‌ಪೊರ್ಟರ್ಸ್‌ ಅವಾರ್ಡ್‌, ಪುಣೆ ಮರಾಠ ಛೇಂಬರ್‌ ಆಫ್‌ ಕಾಮರ್ಸ್‌ ವತಿಯಿಂದ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಲ್ಲದೆ ಬೋಸ್ರಿ ಮೆನುಪಾಕ್ಚರರ್ಸ್‌ ಅಸೋಸಿಯೇಶನ್‌   ಇವರನ್ನು ಪ್ರಶಸ್ತಿ ನೀಡಿ ಗೌರವಿಸಿದೆ.  ಸರಳ, ಸನ್ನಡತೆಯೊಂದಿಗೆ ಎಲ್ಲರಲ್ಲೂ ಆತ್ಮೀಯವಾಗಿ ಗುರುತಿಸಿಕೊಳ್ಳುವ ಇವರು ಪತ್ನಿ ಅಲ್ಲಾವರ ಬೀಡು ಶಶಿ ಹೆಗ್ಡೆ, ಪುತ್ರರಾದ ದುಬೈ ಉದ್ಯಮಿ ಅಕ್ಷಯ್‌ ಹೆಗ್ಡೆ ಮತ್ತು ಆದರ್ಶ್‌ ಹೆಗ್ಡೆ ಅವರೊಂದಿಗೆ ಪುಣೆಯಲ್ಲಿ ನೆಲೆಸಿದ್ದಾರೆ. ಯಶಸ್ವಿ ಉದ್ಯಮಿಯಾಗಿ, ಸಮಾಜ ಸೇವಕನಾಗಿ ಪರೋಪಕಾರ ಧರ್ಮದಲ್ಲಿ ತನ್ನ ಹಿತವನ್ನು ಕಾಣುವ ನೇರ ನಡೆ ನುಡಿಗಳಿಂದ ಸರ್ವರಿಗೂ ಆದರ್ಶರಾಗಿ ಗುರುತಿಸಿಕೊಳ್ಳುವ ಬಾಲಕೃಷ್ಣ ಹೆಗ್ಡೆಯವರ ಭವಿಷ್ಯದ ಕಾರ್ಯ ಯೋಜನೆಗಳು ಯಶಸ್ವಿಯಾಗಿ ನೆರವೇರಲಿ ಹಾಗೂ ಇನ್ನಷ್ಟು ಪ್ರತಿಷ್ಠೆ ಗೌರವಗಳು ಅರಸಿ ಬರಲೆಂದು ಆಶಿಸೋಣ. 

ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next