ಲುಧಿಯಾನ: ಆತನೇನೂ ಗುರುತರ ಅಪರಾಧಿ ಖಂಡಿತ ಅಲ್ಲ. ಆದರೆ ಮಾಡಿದಂಥ ಕೃತ್ಯ ಮಾತ್ರ ಸಾಮಾನ್ಯರ ಎದೆಯನ್ನು ಝಲ್ಲೆನಿಸದೆ ಬಿಡದು. ಪಂಜಾಬ್‌ನ ಲುಧಿಯಾನದಲ್ಲಿ 16 ವರ್ಷದ ಬಾಲಕ ಒಂಬತ್ತು ವರ್ಷದ ಬಾಲಕನನ್ನು ಕೊಂದು, ಆತನ ದೇಹವನ್ನು ಆರು ತುಂಡು ಮಾಡಿದ್ದಾನೆ. ಜತೆಗೆ ಮಾಂಸ ತಿಂದು, ರಕ್ತ ಕುಡಿದಿದ್ದಾನೆ. ಆತ ಎಷ್ಟು ಕ್ರೂರತೆ ಮೆರೆದಿದ್ದಾನೆ ಎಂಬುದಕ್ಕೆ ಸಾಕ್ಷಿ ಯೆಂದರೆ ಹೃದಯವನ್ನು ಬಗೆದು ಅದನ್ನು ಶಾಲೆಯ ಆವರಣದಲ್ಲಿ ಎಸೆದು ಬಂದಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಲುಧಿಯಾನದ ದುಗ್ರಿ ಎಂಬ ಪ್ರದೇಶದಲ್ಲಿ ಕೂಲಿ ಕಾರ್ಮಿಕರ ಕುಟುಂಬಕ್ಕೆ ಸೇರಿದವರು ಈ ಮಕ್ಕಳು. ಸೋಮವಾರದಿಂದ 9 ವರ್ಷದ ಬಾಲಕ ನಾಪತ್ತೆಯಾಗಿದ್ದ. ಈ ಪೊಲೀಸ ರಿಗೂ ದೂರು ದಾಖಲಾಗಿತ್ತು. ಕುಕೃತ್ಯಕ್ಕೆ ಬಲಿಯಾದ ದೀಪು ಕುಮಾರ್ ಗಾಳಿ ಪಟ
ಹಾರಿಸುವ ದಾರ ಪಡೆದುಕೊಳ್ಳಲೆಂದು ಬಾಲಕನ ಮನೆಗೆ ತೆರಳಿದ್ದ. ಮನೆಗೆ ಬಂದವನ ಕೊರಳನ್ನು ತಿರುಚಿ ಮುರಿದು ಹಾಕಿದ. ಅನಂತರ ಆತನನ್ನು ಮನೆಯ ಸ್ನಾನಗೃಹಕ್ಕೆ ಎಳೆದುಕೊಂಡು ಹೋಗಿ ಬಟ್ಟೆಯನ್ನೆಲ್ಲ ಕಳಚಿದ. ಬಳಿಕ ತೋಟದಲ್ಲಿ ಗಿಡಗಳನ್ನು ಕತ್ತರಿಸುವ ಹರಿತವಾದ ಆಯುಧದಿಂದ ದೀಪುವಿನ ದೇಹವನ್ನು ಆರು ಭಾಗಗಳನ್ನಾಗಿ ತುಂಡರಿಸಿದ. ಜತೆಗೆ ಮಾಂಸ ತಿಂದು, ರಕ್ತವನ್ನೂ ಕುಡಿದ. ಆತನ ಕ್ರೂರತೆ ಎಷ್ಟು ಇತ್ತು ಎಂದರೆ ಮಾಂಸವನ್ನು ಬಗೆದು ಹೃದಯವನ್ನು ಸುಲಿದ. ಇಷ್ಟೆಲ್ಲ ಮಾಡಿದ ಬಳಿಕ ಪ್ಲಾಸ್ಟಿಕ್ ಚೀಲದಲ್ಲಿ ದೇಹದ ತುಂಡುಗಳನ್ನೆಲ್ಲ ಸಂಗ್ರಹಿಸಿ, ಸೈಕಲ್ ಮೂಲಕ ಸಮೀಪದ ಖಾಲಿ ಸ್ಥಳದಲ್ಲಿ ಚೆಲ್ಲಿ ಮನೆಗೆ ವಾಪಸಾಗಿದ್ದ. ಶಾಲೆಯ ನೀರಿನ ಟ್ಯಾಂಕ್ ಬಳಿ ಬಿದ್ದಿದ್ದ ಹೃದಯವನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ಎದೆ ನಡುಗಿಸುವಂಥ ಕುಕೃತ್ಯ ನಡೆಸಿ ದರೂ ವರ್ತನೆಯಲ್ಲಿ ಯಾವುದೇ ಸಂಶಯ ಬಾರದಂತೆ ಆತ ವರ್ತಿಸಿದ. ತಂದೆ ಮತ್ತು ತಾಯಿಗೆ ಅಡುಗೆ ಮಾಡಿ ಊಟವನ್ನು ಕೂಡ ಬಡಿಸಿದ್ದ. ದೀಪು ಕುಮಾರ್ ನಾಪತ್ತೆಯಾದ ಬಗ್ಗೆ ಆತನ ಹೆತ್ತವರು ಪೊಲೀಸರಿಗೆ ದೂರಿದ್ದರು. ದುಗ್ರಿ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಅವಲೋಕಿಸಿದರು. ಈ ವೇಳೆ ಅಸುನೀಗಿದ ದೀಪುಕುಮಾರ್ ನೆರೆಯ ಮನೆಯ ಬಾಲಕನ ಜತೆ ಇದ್ದುದನ್ನು ಖಚಿತ ಪಡಿಸಿಕೊಂಡರು. ಆತನನ್ನು ಕರೆದು ವಿಚಾರಿ ಸಿದ ಬಳಿಕ ಘಾತಕ ಕೃತ್ಯದ ಸಂಪೂರ್ಣ ವಿವರಣೆಯನ್ನು ಪಡೆದುಕೊಂಡರು.
ಕಾರಣ ಏನು?: ಹಂತಕ ಬಾಲಕ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಆತನಿಗೆ ಶಾಲೆಯಲ್ಲಿನ ಅಧ್ಯಾಪಕರ ಮೇಲೆ ಯಾವುದೋ ಕಾರಣಕ್ಕೆ ಸಿಟ್ಟು ಇತ್ತು. ಬಾಲಕನನ್ನು ಕೊಂದು ಶಾಲೆಗೆ ಕೆಟ್ಟ ಹೆಸರು ತರಬೇಕೆಂದು ಆತ ಉದ್ದೇಶಿಸಿದ್ದ.