ಒಬ್ಬ ಸ್ಟಿಲ್ ಫೋಟೋಗ್ರಾಫರ್ ತನಗಿಂತ ಹೆಚ್ಚಾಗಿ, ಬೇರೆಯವರ ಜೀವನದ ಖುಷಿಯ ಕ್ಷಣಗಳಿಗೆ ಸದಾ ಕಾಲ ಕಣ್ಣಾಗಿರುತ್ತಾನೆ. ತನ್ನ ಕ್ಯಾಮರಾದಲ್ಲಿ ಇನ್ನೊಬ್ಬರ ಖುಷಿಯನ್ನು ಸೆರೆಹಿಡಿಯುವ ಆತ, ಅದನ್ನು ಆಲ್ಬಂನೊಳಗೊ ಅಥವಾ ಫ್ರೇಮ್ ನೊಳಗೊ ಸದಾ ಕಾಲ ಜೀವಂತವಾಗಿರಿಸುತ್ತಾನೆ. ಬೇರೆಯವರ ಖುಷಿಯನ್ನೇ ತನ್ನ ಖುಷಿಯೆಂದು ಸಂಭ್ರಮಿಸುವ, ಬೇರೆಯವರ ಖುಷಿಯ ಕ್ಷಣಗಳಿಗೆ ಕಣ್ಣಾಗುವ ಫೋಟೋಗ್ರಾಫರ್‌ನ ಕ್ಯಾಮರಾ ಹಿಂದಿನ ಬದುಕು ಹೇಗಿರುತ್ತದೆ ಎಂಬುದು ಬಹುತೇಕರಿಗೆ ಗೊತ್ತೇ ಇರುವುದಿಲ್ಲ. ಇಂಥ ಫೋಟೋಗ್ರಾಫರ್ ಒಬ್ಬನ ಕ್ಯಾಮರಾ ಹಿಂದಿನ ಬದುಕು-ಬವಣೆಯನ್ನು ತೆರೆಮೇಲೆ ಸೆರೆಹಿಡಿದಿರುವ ಚಿತ್ರ “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಸಣ್ಣ ಊರೊಂದರಲ್ಲಿ ತನ್ನದೇ ಆದ “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಇಟ್ಟುಕೊಂಡಿರುವ ಪುಟ್ಟು ಊರಿನವರ ಆಗು-ಹೋಗು ಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುವ ಫೋಟೋಗ್ರಾಫರ್. ತನ್ನ ಕ್ಯಾಮರಾ ಮತ್ತು ಸ್ಟುಡಿಯೋ ಎರಡೇ ಪ್ರಪಂಚವೆಂದು ಅಂದುಕೊಂಡಿದ್ದ ಪುಟ್ಟು ಬದುಕಿನಲ್ಲಿ ನಡೆಯುವ ಘಟನೆಯೊಂದು ಆತನ ಕ್ಯಾಮರಾ ಮತ್ತು ಸ್ಟುಡಿಯೋ ಎರಡನ್ನೂ ಆತನಿಂದ ದೂರಾಗುವಂತೆ ಮಾಡುತ್ತದೆ. ತನ್ನದಲ್ಲದ ತಪ್ಪಿಗಾಗಿ ಪರಿತಪಿಸುವ ಪುಟ್ಟು ಮತ್ತೆ ತನ್ನ ಹಿಂದಿನ ಪ್ರಪಂಚಕ್ಕೆ ಮರಳುತ್ತಾನಾ? ಇಲ್ಲವಾ? ಎಂಬುದೇ “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರದ ಕಥಾಹಂದರ. ಅದು ಹೇಗಿರುತ್ತದೆ ಎಂಬ ಅನುಭವ ನಿಮ್ಮದಾಗಿಸಿಕೊಳ್ಳುವ ಕಾತುರವಿದ್ದರೆ, ನೀವೊಮ್ಮೆ “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ಗೆ ಭೇಟಿ ನೀಡಿ ಬರಬಹುದು.
“ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ದಲ್ಲಿ ಯುವನಟ ರಾಜೇಶ್ ಧ್ರುವ ಅವರದ್ದು “ಡಬಲ್ ರೋಲ್’. ಚಿತ್ರದಲ್ಲಿ ತೆರೆಮೇಲೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜೇಶ್, ತೆರೆಹಿಂದೆ ಚಿತ್ರಕ್ಕೆ ನಿರ್ದೇಶನವನ್ನೂ ಮಾಡಿದ್ದಾರೆ. ನಟನಾಗಿ ಮತ್ತು ನಿರ್ದೇಶನಲ್ಲಿ ರಾಜೇಶ್ ಸೈ ಎನಿಸಿಕೊಂಡಿದ್ದಾರೆ.
ಇನ್ನು ಮನಮುಟ್ಟುವಂಥ ಕಥೆ ಸಿನಿಮಾದಲ್ಲಿದ್ದರೂ, ಅದನ್ನೂ ಇನ್ನಷ್ಟು ಪರಿಣಾಮಕಾರಿಯಾಗಿ ತೆರೆಮೇಲೆ ತರುವ ಅವಕಾಶವಿತ್ತು.ಚಿತ್ರಕಥೆ, ಸಂಭಾಷಣೆ ಮತ್ತು ನಿರೂಪಣೆ ಕಡೆಗೆ ಇನ್ನಷ್ಟು ಗಮನ ನೀಡಿದ್ದರೆ, ಸ್ಟುಡಿಯೋ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುವ ಸಾಧ್ಯತೆಯಿತ್ತು.
ಉಳಿದಂತೆ ಚಿತ್ರದ ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಸುಂದರ ಲೋಕೇಶನ್ಸ್ ಸಿನಿಮಾದ ಹೈಲೈಟ್ಸ್ ಎನ್ನಬಹುದು. ಒಂದಷ್ಟು ಸಂಗತಿಗಳನ್ನು ಬದಿಗಿಟ್ಟು ನೋಡಿದರೆ “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಒಂದೊಳ್ಳೆಯ ಪ್ರಯತ್ನ ಎನ್ನಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್