ಹುಬ್ಬಳ್ಳಿ: ಕಂದಾಯ ಭೂಮಿ ಕಬಳಿಕೆ ಮೂಲಕ ಬಡವರಿಗೆ ದೊರೆಯುವ ವಿನಾಯ್ತಿಯ ದುರ್ಲಾಭ ಪಡೆಯಲು ಬಲಾಡ್ಯರು ಮುಂದಾಗಿದ್ದಾರೆ. ಅರ್ಹ ಬಡವರಿಗೆ ತೊಂದರೆ ಆಗದಂತೆ ಬಲಾಡ್ಯರ ವಿರುದ್ಧ ಭೂ ಕಬಳಿಕೆಯ ಸಮಗ್ರ ತನಿಖೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಚ್ಛಾಶಕ್ತಿ ತೋರಬೇಕೆಂದು ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆಯ ಎಸ್.ಆರ್.ಹಿರೇಮಠ ಒತ್ತಾಯಿಸಿದ್ದಾರೆ.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ಫಿಲೋಮಿನಾರಂತಹ ಬಲಾಡ್ಯರೂ ಕಂದಾಯ ಹಾಗೂ ಅರಣ್ಯ ಭೂಮಿ ಕಬಳಿಕೆ ಮಾಡಿ ಬಡವರಿಗೆ ನೀಡುವ 10 ಎಕರೆವರೆಗಿನ ವಿನಾಯ್ತಿಯನ್ನು ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ತಾವು ಯಾವುದೇ ಸರಕಾರಿ ಭೂಮಿ ಕಬಳಿಕೆ ಮಾಡಿಲ್ಲ ಎಂದು ಹೇಳಿದ್ದಾರೆ. ಮೂಡಿಗೆರೆ ತಾಲೂಕಿನ ಕುಂದೂರು ವ್ಯಾಪ್ತಿಯಲ್ಲಿ 15ಎಕರೆ ಭೂಮಿ ಕಬಳಿಕೆ ಕುರಿತು 2014ರಲ್ಲೇ ಅವರಿಗೆ ನೋಟಿಸ್ ನೀಡಲಾಗಿದೆ. ಮೋಟಮ್ಮ ಪುತ್ರರಾದ ಗೌತಮ್ ಹಾಗೂ ಪ್ರೀತಮ್ ಅವರ ಹೆಸರಲ್ಲೂ 5 ಎಕರೆ ಜಮೀನು ಕಬಳಿಕೆ ಆಗಿದೆ ಎಂದರು.
ಮೂಡಿಗೆರೆ ತಹಶೀಲ್ದಾರರ ವರ್ಗಾವಣೆಗೆಮೋಟಮ್ಮ ಇನ್ನಿತರರ ಒತ್ತಡ ಬಂದರೂ ವಾಸ್ತವ ಸಂಗತಿ ಅರಿತ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಹಶೀಲ್ದಾರರನ್ನು ಮರು ನೇಮಕ ಮಾಡಿದ್ದನ್ನು ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಸ್ವಾಗತಿಸಲಿದೆ ಎಂದರು.
ಫಿಲೋಮಿನಾ ಅವರು ತಮ್ಮ ಪುತ್ರರು, ಕುಟುಂಬದವರ ಹೆಸರಲ್ಲಿ 100 ಎಕರೆಯಷ್ಟು ಭೂಮಿ ಕಬಳಿಕೆ ಮಾಡಿದ್ದರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್, ಸಚಿವ ಆರ್.ವಿ. ದೇಶಪಾಂಡೆ ಮುಂತಾದ ಅನೇಕ ಪ್ರಭಾವಿಗಳೂ ಭೂಮಿ ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ಕಂದಾಯ ಸಚಿವರು ಸಮಗ್ರ ತನಿಖೆಯ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ ಎಂದರು.
ಗೃಹ ಕಾರ್ಯದರ್ಶಿ ಭೇಟಿ: ನಿವೃತ್ತ ಲೋಕಾಯುಕ್ತ ನ್ಯಾ| ವೈ. ಭಾಸ್ಕರ ರಾವ್ ತಮ್ಮ ವಿರುದ್ಧದ ವಿಚಾರಣೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ನ್ಯಾ| ರಾವ್ ಅವರ ಪುತ್ರ ಅಶ್ವಿನ್ ವಿರುದ್ಧದ ನಾಲ್ಕು ಪ್ರಕರಣಗಳ ಪೈಕಿ ಒಂದರಲ್ಲಿ ನ್ಯಾ| ಭಾಸ್ಕರ ರಾವ್ ಹೆಸರಿದ್ದು, ಇನ್ನುಳಿದ ಮೂರು ಪ್ರಕರಣಗಳಲ್ಲೂ ಅವರ ಹೆಸರು ಸೇರಿಸಿ ವಿಚಾರಣೆ ನಡೆಸುವ ಬಗ್ಗೆ ಎಸ್‌ಐಟಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಶೀಘ್ರವೇ ರಾಜ್ಯದ ಗೃಹ ಕಾರ್ಯದರ್ಶಿ ಹಾಗೂ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಮನವಿ ಹಾಗೂ ದಾಖಲೆ ಸಲ್ಲಿಸಲಾಗುವುದು ಎಂದರು.