Advertisement

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

12:31 AM May 21, 2024 | Team Udayavani |

ಕುಂದಾಪುರ: ಒಂದು ಕಾಲದಲ್ಲಿ ವರ್ಷಪೂರ್ತಿ ನೀರಿನಿಂದ ಕಂಗೊಳಿಸುತ್ತಿದ್ದ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಡವು ಗ್ರಾಮದ ಗೋರ್ಕಲ್ಲು ಮನೆ ಕೆರೆಯೀಗ ಹೂಳು ತುಂಬಿದ ಕೊಂಪೆಯಾಗಿದೆ. ಸುತ್ತಲಿನ ಹತ್ತಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿದ್ದ ಈ ಕೆರೆ ಈಗ ನಿಷ್ಪ್ರಯೋಜಕವಾಗಿದೆ.

Advertisement

ಹಡವು ಗ್ರಾಮದ ಗೋರ್ಕಲ್ಲುಮನೆ ಕೆರೆ ಬೈಂದೂರು ತಾಲೂಕಿನ ದೊಡ್ಡ ಕೆರೆಗಳಲ್ಲಿ ಒಂದು. ಅಂದಾಜು 50 ಸೆಂಟ್ಸ್‌ಗೂ ಅಧಿಕ ಪ್ರದೇಶದಲ್ಲಿ ವ್ಯಾಪಿಸಿದ್ದು, ಈಗ ಮಾತ್ರ ಹೂಳು ತುಂಬಿದೆ.

ಹಡವು ಗ್ರಾಮಕ್ಕೆ ಪ್ರಯೋಜನ
ಈ ಗೋರ್ಕಲ್ಲುಮನೆ ಕೆರೆ ಪುನರುಜ್ಜೀವನಗೊಂಡು, ಸಮೃದ್ಧ ನೀರು ಸಂಗ್ರಹಗೊಂಡರೆ ಸುಮಾರು 10-15 ಎಕರೆ ಕೃಷಿ ಭೂಮಿಗೆ ಪ್ರಯೋಜನವಾಗಲಿದೆ. ಈ ಭಾಗದ ಬಹುತೇಕ ರೈತರು ಭತ್ತದ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ತುಂಬಾ ವರ್ಷಗಳ ಹಿಂದೆ ಈ ಕೆರೆಯಲ್ಲಿ ನೀರು ತುಂಬಿರುತ್ತಿದ್ದ ಕಾಲದಲ್ಲಿ ಮುಂಗಾರು ಹಾಗೂ ಹಿಂಗಾರು ಎರಡೂ ಬೆಳೆಗಳನ್ನು ಮಾಡುತ್ತಿದ್ದ ರೈತರು, ಈಗ ಮುಂಗಾರಲ್ಲಿ ಮಾತ್ರ ಭತ್ತದ ಬೆಳೆಯುತ್ತಿದ್ದಾರೆ. ಹಿಂಗಾರಿನಲ್ಲಿ ನೀರಿನ ಕೊರತೆಯಾಗುತ್ತಿದೆ. ಹಡವು ಗ್ರಾಮದ ಜನ ಪ್ರತೀ ಬೇಸಗೆಯಲ್ಲಿ ನೀರಿನ ಅಭಾವ ಎದುರಿಸುತ್ತಿದ್ದಾರೆ.
ಸುತ್ತ ನದಿಯಿದ್ದರೂ ಉಪ್ಪು ನೀರಿನ ಪ್ರಭಾವದಿಂದ ನೀರು ಕುಡಿಯಲು ಯೋಗ್ಯ ವಾಗಿಲ್ಲ. ಈ ಕೆರೆಯನ್ನು ಅಭಿವೃದ್ಧಿಪಡಿಸಿ ವರ್ಷಪೂರ್ತಿ ನೀರು ತುಂಬಿರುವಂತೆ ಮಾಡಿದರೆ ಅದನ್ನು ಶುದ್ಧೀಕರಿಸಿ ಗ್ರಾಮದ ಎಲ್ಲ 270ಕ್ಕೂ ಹೆಚ್ಚಿನ ಮನೆಗಳಿಗೆ ನಳ್ಳಿ ಮೂಲಕ ಪೂರೈಸಬಹುದು. ಈ ಕೆರೆಯಲ್ಲಿ ನೀರು ತುಂಬಿದ್ದರೆ ಆಸುಪಾಸಿನ 30ಕ್ಕೂ ಹೆಚ್ಚಿನ ಮನೆಗಳ ಬಾವಿಗಳ ಅಂತರ್ಜಲ ಮಟ್ಟವೂ ಉತ್ತಮವಾಗಿರಲಿದೆ.

ಏನೆಲ್ಲ ಆಗಬೇಕು?
ಈ ಕೆರೆಯ ಹೂಳೆತ್ತದೇ 40 ವರ್ಷಗಳಿಗೂ ಹೆಚ್ಚು ಕಾಲ ಆಗಿರಬಹುದು. ಕೆರೆ ಅಭಿವೃದ್ಧಿ ಯೋಜನೆಯಡಿ ಹೂಳೆತ್ತಿದರೆ ಸಮೃದ್ಧ ನೀರು ಸಂಗ್ರಹಗೊಳ್ಳಬಹುದು. ಸುತ್ತಲೂ ಸುಂದರ ದಂಡೆ ನಿರ್ಮಿಸಿದರೆ ಉತ್ತಮ.

ಹತ್ತಕ್ಕೂ ಹೆಚ್ಚು ಕೆರೆಗಳು
ನಾಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಹತ್ತಕ್ಕೂ ಮಿಕ್ಕಿ ಸರಕಾರಿ ಕೆರೆಗಳಿವೆ. ಅವುಗಳನ್ನು ಗುರುತಿಸಿ, ಹೂಳೆತ್ತಿ, ಅಭಿವೃದ್ಧಿಪಡಿಸಿದ್ದರೆ ಈಗ ನೀರಿನ ಸಮಸ್ಯೆಯೆ ಉದ್ಭವವೇ ಆಗುತ್ತಿರಲಿಲ್ಲ. ಈ ಗೋರ್ಕಲ್ಲುಮನೆ ಕೆರೆ ಇರುವ 1 ಕಿ.ಮೀ. ವ್ಯಾಪ್ತಿಯಲ್ಲಿಯೇ ಕೆಂಪು ಹೊಳೆ ಕೆರೆ, ಬಂಡಾÕಲೆ ಕೆರೆ, ಗುಂಡಿಕೆರೆ ಸೇರಿದಂತೆ 4 ಕೆರೆಗಳಿವೆ. ಇನ್ನು ನಾಡ ಪಂಚಾಯತ್‌ ವ್ಯಾಪ್ತಿಯಲ್ಲಿ ಅಂಗಡಿಹಿತ್ಲು ಕೆರೆ, ಹೆಮ್ಮುಂಜೆ ಮದಗ, ಹೆಬ್ಟಾರ್‌ಕೆರೆ, ಚುಂಗಿಗುಡ್ಡೆ ಕೆರೆ, ಬಡಿನಮಕ್ಕಿ ಮದಗ, ಅಂಗಡಿಬೆಟ್ಟು ಕೆರೆ, ಶೇಡಿಗುಂಡಿ ಮದಗ, ಜೋಯಿಸರಬೆಟ್ಟು ಮದಗ, ಶೇಡುRಳಿ ಮದಗ, ಪಾತನಮಕ್ಕಿ ಮದಗಗಳ ಪುನಶ್ಚೇತನ ಆಗಬೇಕಿದೆ.

Advertisement

ನೀರಿನ ಸಮಸ್ಯೆಗೆ ಮುಕ್ತಿ
ಗೋರ್ಕಲ್ಲುಮನೆ ಕೆರೆ ಅಭಿವೃದ್ಧಿಯಾದರೆ ಈ ಭಾಗದ ನೀರಿನ ಸಮಸ್ಯೆ ಬಹುತೇಕ ನೀಗಲಿದೆ. ಅನೇಕ ಬಾರಿ ಈ ಕೆರೆಯ ಅಭಿವೃದ್ಧಿಗಾಗಿ ಸಂಬಂಧಪಟ್ಟ ಎಲ್ಲರನ್ನೂ ಆಗ್ರಹಿಸಿದ್ದೇವೆ. ಆದರೆ ಅಭಿವೃದ್ಧಿಗೆ ಯಾವುದೇ ಯೋಜನೆ ರೂಪಿಸಿಲ್ಲ. ಈಗಲಾದರೂ ಪುನಶ್ಚೇತನಗೊಳಿಸಿದರೆ ಕೃಷಿಗೆ, ಕುಡಿಯುವ ನೀರಿಗೂ ಪ್ರಯೋಜನವಾಗಲಿದೆ.
– ಶೀಲಾವತಿ ಪಡುಕೋಣೆ,
ಸ್ಥಳೀಯರು

ಅಭಿವೃದ್ಧಿಗೆ ಪ್ರಯತ್ನ
ಗೋರ್ಕಲ್ಲುಮನೆ ಕೆರೆ ನಮ್ಮ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸ್ಥಳೀಯ ಪಂಚಾಯತ್‌ನಿಂದ ಪ್ರಸ್ತಾವನೆ ಸಲ್ಲಿಸಿದರೆ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು.
– ಅರುಣ್‌ ಭಂಡಾರಿ,
ಎಇಇ,ಸಣ್ಣ ನೀರಾವರಿ ಇಲಾಖೆ ಉಡುಪಿ

- ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next