Advertisement

ದ.ಕ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬಾಲಭವನ: ಚಿಕ್ಕಮ್ಮ ಬಸವರಾಜ್‌

11:36 PM Feb 17, 2021 | Team Udayavani |

ಕದ್ರಿ: ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುವ ಎಲ್ಲ ತಾಲೂಕುಗಳಲ್ಲಿ ಬಾಲಭವನ ನಿರ್ಮಿಸುವ ಪ್ರಸ್ತಾವವಿದೆ ಎಂದು ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್‌ ತಿಳಿಸಿದ್ದಾರೆ.

Advertisement

ಮಂಗಳೂರಿನ ಕದ್ರಿ ಬಳಿಯ ಬಾಲಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲಭವನ ನಿರ್ಮಾಣಕ್ಕೆ ಜಮೀನಿನ ಆವಶ್ಯಕತೆ ಇದ್ದು, ಜಿಲ್ಲಾಡಳಿತ ಜಮೀನು ಮಂಜೂರು ಮಾಡಿದರೆ ತಾಲೂಕು ಮಟ್ಟದಲ್ಲಿ ಬಾಲಭವನದ ಚಟುವಟಿಕೆ ವಿಸ್ತರಣೆ ಮಾಡಲಾಗುವುದು. ಸದ್ಯ ರಾಜ್ಯದಲ್ಲಿ 11 ತಾಲೂಕುಗಳಲ್ಲಿ ಬಾಲಭವನ ಇದ್ದು, ಬೆಂಗಳೂರಿನಲ್ಲಿ 4 ಮಿನಿ ಬಾಲಭವನಗಳಿ ವೆ. ರಾಜ್ಯದ 18 ತಾಲೂಕುಗಳಲ್ಲಿ ಸ್ವಂತ ಕಟ್ಟಡವಿದೆ ಎಂದರು.

ಮಕ್ಕಳ ಸುಪ್ತ ಪ್ರತಿಭೆ ಅನಾವರಣಕ್ಕೆ ಬಾಲಭವನ ವೇದಿಕೆಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಗ್ರಾಮೀಣ ಭಾಗದ ಮಕ್ಕಳನ್ನು ಮತ್ತು ಹಿಂದುಳಿದ ವರ್ಗದ ಮಕ್ಕಳ ಪ್ರತಿಭೆಗೆ ಬಾಲಭವನದಲ್ಲಿ ಆದ್ಯತೆ ನೀಡಬೇಕು. ಆಟ, ನೃತ್ಯ, ಗಾಯನ ಸಹಿತ ಕರಕುಶಲ ಕಲೆಗಳಿಗೂ ಮಹತ್ವ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆಯಿತ್ತರು.

ತೋಟಗಾರಿಕ ಇಲಾಖೆ ವ್ಯಾಪ್ತಿಗೆ ಒಳಪಡುವ ಕದ್ರಿ ಉದ್ಯಾನವನದಲ್ಲಿ ಪುಟಾಣಿ ರೈಲು ಕಾರ್ಯಾಚರಿಸುತ್ತಿದ್ದು, ಪ್ರತ್ಯೇಕ ಜಾಗ ಮೀಸಲಿಡಲು ಸಾಧ್ಯವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಾಪ ಬೋವಿ, ಕದ್ರಿ ನಗರ ಪ್ರದೇಶಕ್ಕೆ ಹತ್ತಿರ ಇದ್ದು, ಇದು ಕೇಂದ್ರ ಸ್ಥಾನವಾಗಿದೆ. ಪ್ರತ್ಯೇಕ ಜಾಗ ನಿಗದಿಗೆ ಸುಮಾರು 6 ಎಕರೆ ಪ್ರದೇಶ ಬೇಕು. ಅದು ಕಷ್ಟ ಸಾಧ್ಯ ಎಂದರು.

ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಬಾಲಭವನ ಕಟ್ಟಡ, ಆವರಣಗೋಡೆ, ಆಟಿಕೆ ಸಾಮಗ್ರಿಗಳ ದುರಸ್ತಿಗಾಗಿ 25 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಅಧ್ಯಕ್ಷರಿಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಸ್ಮಾರ್ಟ್‌ಸಿಟಿ ಯೋಜನೆಯ ಅನುದಾನ ಕೇಳಿದ್ದು ಕಡಿಮೆಯಾಯಿತು. ಮುಂದಿನ ದಿನಗಳಲ್ಲಿ ಬಾಲಭವನ ಅಭಿವೃದ್ಧಿಗೆ ಏನೆಲ್ಲ ಹೊಸ ಯೋಜನೆ ಹಮ್ಮಿಕೊಳ್ಳಬೇಕು ಎಂಬ ಪಟ್ಟಿ ತಯಾರಿಸಿ ಇಲಾಖೆಗೆ ನೀಡಿ ಎಂದರು.

Advertisement

ಕಳೆದ ವರ್ಷದ ರಾಜ್ಯ ಸರಕಾರದ ಬಜೆಟ್‌ನಲ್ಲಿ ಬಾಲಭವನ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈ ಬಾರಿ 17 ಕೋಟಿ ರೂ. ಪ್ರಸ್ತಾವ ಸಲ್ಲಿಸಿದ್ದೇವೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲಭವನದ ಮುಖೇನ ವಿದ್ಯಾರ್ಥಿಗಳಿಗೆಂದು 42 ಆನ್‌ಲೈನ್‌ ತರಗತಿಗಳು ನಡೆದಿವೆ. ಇದರಲ್ಲಿ ಮಾಸ್ಕ್, ಸ್ಯಾನಿಟೈಸರ್‌ ತಯಾರಿ, ಕರಕುಶಲ ವಸ್ತು ತಯಾರಿ ಬಗ್ಗೆ ಮಾಹಿತಿ ನೀಡಲಾಗಿದೆ. ಆನ್‌ಲೈನ್‌ ತರಗತಿ ವೀಕ್ಷಣೆಗೆ ಲ್ಯಾಪ್‌ಟಾಪ್‌, ಮೊಬೈಲ್‌ ಇಲ್ಲದವರಿಗೆ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದ.ಕ. ಬಾಲಭವನದ ಅಧಿಕಾರಿಗಳು ಮಾಹಿತಿ ನೀಡಿದರು.

ರೈಲಿನಲ್ಲಿ ಸಂಚರಿಸಿ ವೀಕ್ಷಣೆ
ಬಾಲಭವನದ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್‌ ಅವರು ಕದ್ರಿ ಪಾರ್ಕ್‌ನಲ್ಲಿರುವ ಪುಟಾಣಿ ರೈಲಿನಲ್ಲಿ ಸಂಚರಿಸಿ ರೈಲಿನ ಕಾರ್ಯದಕ್ಷತೆ ಪರಿಶೀಲಿಸಿದರು.

ಹುದ್ದೆ ಖಾಯಂಗೆ ಸರಕಾರಕ್ಕೆ ಪ್ರಸ್ತಾವ
ರಾಜ್ಯದ ಎಲ್ಲ ಬಾಲಭವನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕ್ರಮ ಸಂಯೋಜಕರು, ಸಹಾಯಕರ ಹುದ್ದೆಯನ್ನು ಖಾಯಂಗೊಳಿಸುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತೀ ಬಾಲ ಭವನದಲ್ಲಿ ಇಬ್ಬರು ಸಹಿತ ಒಟ್ಟು 60 ಮಂದಿ, 10 ಬಾಲಭವನಗಳಿಗೆ ಓರ್ವರು ಸಂಯೋಜಕರಂತೆ ಮೂರು ಮಂದಿ ಒಟ್ಟಾರೆ 63 ಹುದ್ದೆಗಳನ್ನು ಖಾಯಂಗೊಳಿಸಬೇಕು ಎಂದು ಮೂರು ತಿಂಗಳುಗಳ ಹಿಂದೆ ರಾಜ್ಯ ಸರಕಾರಕ್ಕೆ ಪತ್ರಬರೆಯಲಾಗಿದೆ. ಹುದ್ದೆ ಖಾಯಂಗೊಳಿಸಿದರೆ ಸರಕಾರಕ್ಕೆ 2.68 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದು ಚಿಕ್ಕಮ್ಮ ಬಸವರಾಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next