ವಿಜಯಪುರ: ಕೋವಿಡ್ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಾದ್ಯಂತ ಶನಿವಾರ ನಡೆದ ಬಕ್ರೀದ್ ಹಬ್ಬ ನೀರಸವಾಗಿ ಆಚರಿಸಲಾಯಿತು.
ನಮಾಜ್ ಬಳಿಕ ಮುಸ್ಲಿಮರು ಕೊರೊನಾ ಜಗತ್ತಿನಿಂದ ನಿರ್ನಾಮ ಮಾಡಿ ಜಗತ್ತಿನ ಜೀವಸಂಕುಲ ರಕ್ಷಿಸುವಂತೆ ದುವಾ ಓದಿದರು. ತ್ಯಾಗ ಹಾಗೂ ಬಲಿದಾನದ ಪ್ರತೀಕವಾಗಿರುವ ಈದ್-ಉಲ್-ಅಜಾ (ಬಕ್ರೀದ್) ಹಬ್ಬವನ್ನು ಮುಸ್ಲಿಮರು ನಿರ್ದಿಷ್ಟ ಮಸೀದಿ ಹಾಗೂ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿತ್ತು. ಹೀಗಾಗಿ ಸ್ಥಳೀಯವಾಗಿ ಮಸೀದಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು 50 ಜನರ ತಂಡದಂತೆ ಹಂತ ಹಂತವಾಗಿ ವಿಶೇಷ ವಾಜೀಬ್ ನಮಾಜ್ ಸಲ್ಲಿಸಲಾಯಿತು. ತಂಡ ತಂಡವಾಗಿ ಪ್ರಾರ್ಥನೆ ಸಲ್ಲಿಸಬೇಕಿರುವ ಕಾರಣ ನಸುಕಿನಲ್ಲೇ ಮಸೀದಿಗಳಲ್ಲಿ ವಿಶೇಷ ನಮಾಜ್ ಆರಂಭಗೊಂಡಿತು. ಗುಂಪಿನ ಗದ್ದಲದಲ್ಲಿ ಪಾಲ್ಗೊಳ್ಳಲಾಗದ ಕೆಲವರು ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು.
ನಂತರ ಮನೆಯಲ್ಲಿ ಕುರ್ಬಾನಿ ಮಾಡಿ, ಮೂರು ಭಾಗಗಳಾಗಿ ವಿಂಗಡಿಸಿ ಬಂಧು-ಬಾಂಧವರು, ಆತ್ಮೀಯರು, ಬಡವರಿಗೆ ಹಂಚಿದರು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಬಕ್ರೀದ್ ಹಬ್ಬದ ಆಚರಣೆ ಬಹುತೇಕ ಮನೆಗಷ್ಟೇ ಸೀಮಿತವಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಹಸ್ತಲಾಘವ, ಆಲಿಂಗನ ಮಾಡುವ ಸಂಪ್ರದಾಯ ಕೈ ಬಿಟ್ಟು ಕೇವಲ ದೂರದಿಂದಲೇ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಬಹುತೇಕ ಮನೆಗಳಲ್ಲಿ ಸ್ನೇಹಿತರ ಬಳಗದಲ್ಲಿ ಸಾಮೂಹಿಕ ಔತಣಕೂಟಗಳಿಗೂ ಕಡಿವಾಣ ಬಿದ್ದಿತ್ತು