Advertisement
ಹಲಸಿನಂತೆ ಬದುಕಿನೊಳಗಿದ್ದು ಮರೆವಿಗೆ ಜಾರಿದ ಉತ್ಪನ್ನ ಬಾಕಾಹು. ಇದೇನು, ಹೊಸದೆಂದು ಆಶ್ಚರ್ಯವಾಯಿತೇ? ಬಾಳೆ ಕಾಯಿಯ ಹುಡಿ ಬಾಕಾಹು. ಕೋವಿಡ್ ಲಾಕ್‌ಡೌನ್ ಅನ್‌ಲಾಕ್ ಆಗುತ್ತಿರುವಾಗ ಮರೆತ ವಿದ್ಯೆಗೆ ಮತ್ತೂಮ್ಮೆ ನೆನಪಿನ ಸ್ಪರ್ಶ. ಒಂದೆರಡು ಮನೆಯಲ್ಲಲ್ಲ, ಇಡೀ ಕನ್ನಾಡು ಹಾಗೂ ಕಾಸರಗೋಡು ಪ್ರದೇಶದ ಜಿಲ್ಲೆಗಳಲ್ಲಿ ತಂಗಾಳಿಯಂತೆ ಪಸರಿಸುತ್ತಿದೆ. ಹಿರಿಯರನ್ನು ಮಾತನಾಡಿಸಿದರೆ ಹಿಂದಿನಿಂದಲೂ ಬಾಳೆ ಕಾಯಿ ಹುಡಿಯು ಶಿಶು ಆಹಾರವಾಗಿ ಬಳಸಲ್ಪಡುತ್ತಿದ್ದುವು. ಇದು ತುಂಬಾ ಪೌಷ್ಟಿಕ ಆಹಾರ ಕೂಡಾ. ಮನೆಮಟ್ಟ ದಲ್ಲಿ ಮಾಡಬಹುದಾದ ಮೌಲ್ಯವರ್ಧಿತ ಉತ್ಪನ್ನ.
Related Articles
Advertisement
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾಕಾಹು ಆಂದೋಲನದ ಕಿಚ್ಚು ಹತ್ತಿಸಿದ್ದು 74 ರ ಹರೆಯದ ಹುಮ್ಮಸ್ಸಿಗ ಊರುತೋಟ ಸುಬ್ರಾಯ ಹೆಗಡೆ. ಇವರು ಬಾಕಾಹು ತಯಾರಿಸಿ ಅದರಿಂದ ತಾಲಿಪ್ಪಿಟ್ಟು, ರೊಟ್ಟಿ, ಶಂಕರ ಪೋಳಿ ಮಾಡಿದ ಸುದ್ದಿ ಜಿಲ್ಲೆಯ ಸಾಮಾಜಿಕ ಮಾಧ್ಯಮಗಳ ಮೂಲಕ ಒಂದೆರಡು ದಿನಗಳಲ್ಲೇ ಮನೆಮಾತಾಗಿಬಿಟ್ಟಿತ್ತು!
ಈ ಆಂದೋಲನ ಹಬ್ಬುತ್ತಿದ್ದಂತೆ ಆಗಲೇ ವಾಣಿಜ್ಯ ದೃಷ್ಟಿಯಿಂದ ಬಾಕಾಹು ಮಾಡುತ್ತಿರುವ ಕೃಷಿಕರ ಮಾಹಿತಿಗಳು ಗೋಚರವಾದುವು. ಶಿರಸಿ ಬಳಿಯ ಕಾನಳ್ಳಿಯ ಪ್ರಭಾಕರ ಹೆಗಡೆ-ವಸುಂಧರಾ ಹೆಗಡೆ ದಂಪತಿ ಬಾಕಾಹುವಿಗೆ ಉದ್ಯಮ ಸ್ವರೂಪ ನೀಡಿದ್ದಾರೆ. ಒಂದು ಕಿಲೋಗೆ ಇನ್ನೂರು ರೂಪಾಯಿ ಯಂತೆ ಮಾರಾಟ. ಆರು ತಿಂಗಳ ತಾಳಿಕೆ. ಬೆಳಗಾವಿ ಜಿಲ್ಲೆಯ ಕೃಷಿಕ ಅಜ್ಜಪ್ಪ ಕುಲಗೋಡು ಇವರದು ಇನ್ನೂ ಒಂದು ಹೆಜ್ಜೆ ಮುಂದೆ. ಅವರು ಮನೆಯಲ್ಲಿ ಉತ್ಪನ್ನವನ್ನು ತಯಾರಿಸಿದರೆ, ಅವರ ಅಮ್ಮ ಪಾರ್ವತವ್ವರಿಗೆ ಮಾರುಕಟ್ಟೆಯ ಹೊಣೆ. ತಾವು ಬೆಳೆದ ತರಕಾರಿಗಳ ಮಾರಾಟದ ಜತೆ ಬಾಕಾಹು ಹುಡಿಯನ್ನು ಜನರಿಗೆ ಪರಿಚಯಿಸುತ್ತಿದ್ದಾರೆ.
“ಒಂದು ಕೃಷಿ ವಿಶ್ವವಿದ್ಯಾನಿಲಯ ಈ ಕೆಲಸವನ್ನು ಮಾಡಬೇಕಾದರೆ ಅದೆಷ್ಟೋ ಕಾಲ ಬೇಕಾಗುತ್ತದೆ. ಲಾಕ್‌ಡೌನ್ ಕಾಲಘಟ್ಟದಲ್ಲಿ ಕೃಷಿಕರಿಗೆ ಒದಗಿದ ಈ ಬಾಳೆಕಾಯಿ ಹುಡಿ ತಯಾರಿಯ ತಿಳಿವಳಿಕೆಯು ಸಂಕಟ ಕಾಲದ ಸಹಾಯಿ’ ಎಂದು ಮೆಚ್ಚುಗೆ ಸೂಚಿಸಿದವರು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಪೊ›ಫೆೆಸರ್ ಡಾ| ಶ್ಯಾಮಲಮ್ಮ.
ಈ ಆಂದೋಲನದ ಸುದ್ದಿಯು ತಿರುಚಿರಾ ಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನ ಕೇಂದ್ರವನ್ನು ತಲಪಿತು. ಕೇಂದ್ರದ ನಿರ್ದೇಶಕಿ ಡಾ| ಉಮಾ ಸುಬ್ಬರಾಯ ಕರ್ನಾಟಕದ ಕೃಷಿ ಗೃಹಿಣಿಯರನ್ನು ಅಭಿನಂದಿಸಿ, “ಬಾಳೆಯ ಮೌಲ್ಯವರ್ಧಿತ ಉತ್ಪನ್ನದ ನಿಮ್ಮ ಆಂದೋಲನವು ರಾಜ್ಯ ಅಲ್ಲ, ದೇಶ ಮಟ್ಟವನ್ನು ತಲುಪಲಿ. ನಮ್ಮ ಸಂಸ್ಥೆಯಿಂದ ಸಹಕಾರ ನೀಡಲು ಸಿದ್ಧ’ ಎಂದು ಬೆನ್ನು ತಟ್ಟಿದರು.
“ಕೃಷಿಕರು ಮನೆಯಲ್ಲೇ ಸುಲಭದಲ್ಲಿ ಮಾಡಿ ಕೊಳ್ಳಬಹುದಾದ ತುಂಬ ಪೌಷ್ಟಿಕ ಉತ್ಪನ್ನ ಬಾಳೆ ಕಾಯಿ ಹುಡಿ. ವರ್ಷವಿಡೀ ಇದರ ಉತ್ಪಾದನೆ ಸಾಧ್ಯ. ಅದೊಂದು ಬಹೂಪಯೋಗಿ ಹಿಟ್ಟು. ಅದರಿಂದ ಡಜನ್‌ಗಟ್ಟಲೆ ವೈವಿಧ್ಯಮಯ ದಿನಬಳಕೆಯ ಆಹಾರ ತಯಾರಿಸಲು ಸಾಧ್ಯ. ಈ ಕಾರಣದಿಂದ ಈ ವಿದ್ಯೆ ತುಂಬಾ ರೈತಸ್ನೇಹಿ. ಮನೆಗಳಲ್ಲಿ, ಸಮಾರಂಭಗಳಲ್ಲಿ, ಹೊಟೇಲ್, ಟಿವಿ ಶೋಗಳಲ್ಲಿ ಬಾಕಾಹು ಬಳಕೆಯಾಗಬೇಕು. ಮನೆಮಟ್ಟದ ಬಾಕಾಹು ತಯಾರಿಯ ತರಬೇತಿ, ಉತ್ಪನ್ನಗಳ ಪ್ರದರ್ಶನದ ಮೇಳಗಳು, ಬಳಕೆಯ ರೀತಿಗಳು ಮತ್ತು ಇದರ ಪೌಷ್ಟಿಕಾಂಶಗಳ ಬಗ್ಗೆ ಅರಿವು ಮೂಡಿಸಬೇಕು. ಈಗ ಬಾಕಾಹು ಕನ್ನಾಡಿನ ಕೃಷಿ ಕೃಷಿ ವಿಜ್ಞಾನ ಕೇಂದ್ರಗಳ ಕದ ತಟ್ಟಿದೆ. ಸರಿಯಾಗಿ ಮುನ್ನಡೆಸಿದರೆ ಇದೊಂದು ದೇಶವ್ಯಾಪಿ ಆಂದೋಲನವಾಗುವ ಸಾಧ್ಯತೆ ಇದೆ; ಆಗುತ್ತದೆ. ಗೋಧಿ, ಮೈದಾಗಳಿಗೆ ಗಣನೀಯ ಪ್ರಮಾಣದಲ್ಲಿ ಬದಲಿ ಆಗುವ ಎಲ್ಲ ಲಕ್ಷಣಗಳು ಬಾಕಾಹುವಿಗಿದೆ. ಆಂದೋಲನವನ್ನು ಸರಿಯಾಗಿ ಮುನ್ನಡೆಸಿದರೆ ಇನ್ನು ಮುಂದೆ ಬಾಳೆಕಾಯಿಯ ಬೆಲೆ ಕುಸಿತ ಖಂಡಿತ ರೈತರನ್ನು ಹಿಂದಿನಷ್ಟು ಹತಾಶೆಗೆ ತಳ್ಳದು’ ಎನ್ನುವ ದೂರದೃಷ್ಟಿ ಶ್ರೀ ಪಡ್ರೆಯವರದು.
ಮೂರೇ ವಾರಗಳಲ್ಲಿ ಈ ಆಂದೋಲನದ ಸಾತ್ವಿಕ ಕಿಡಿಯು ಅಡುಗೆ ಮನೆಯೊಳಗೆ ಹಣತೆಯನ್ನು ಹಚ್ಚಿದೆ. ಮಳೆ ಕಡಿಮೆಯಾಗಿ ಬಿಸಿಲಿನ ದಿನಗಳಿಗಾಗಿ ಅಮ್ಮಂದಿರು ಕಾಯುತ್ತಿ ದ್ದಾರೆ! ನವಮಾಧ್ಯಮಗಳನ್ನು ಹೇಗೆ ಸಶಕ್ತವಾಗಿ ಮತ್ತು ಸುದೃಢವಾಗಿ ಬಳಸಬಹುದೆಂಬುದಕ್ಕೆ ಸಾಕ್ಷಿಯಾಗಿ ನಮ್ಮ ಮುಂದಿದೆ.
– ನಾ. ಕಾರಂತ ಪೆರಾಜೆ