ಗೊಂಡಾ (ಯುಪಿ): ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯೂಎಫ್ಐ) ಶುಕ್ರವಾರ ಕೇಂದ್ರೀಯ ವೇತನ ಒಪ್ಪಂದವನ್ನು ಪ್ರಕಟಿಸಿದೆ.
ಪರಿಷ್ಕೃತ ಪಟ್ಟಿಯ ಪ್ರಕಾರ ತಾರಾ ಕುಸ್ತಿ ಪಟುಗಳಾದ ಭಜರಂಗ್ ಪೂನಿಯಾ, ವಿನೇಶ್ ಪೋಗಾಟ್ “ಎ’ ಗ್ರೇಡ್ ನಲ್ಲಿ ಸ್ಥಾನ ಪಡೆದಿದ್ದಾರೆ. 1 ವರ್ಷಕ್ಕೆ ಇವರಿಬ್ಬರು ಕ್ರಮವಾಗಿ 30 ಲಕ್ಷ ರೂ. ಪಡೆಯಲಿದ್ದಾರೆ. ಭಜರಂಗ್ ಹಾಗೂ ವಿನೇಶ್ ಇತ್ತೀಚೆಗೆ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಪ್ರದರ್ಶನದ ಹಿನ್ನೆಲೆಯಲ್ಲಿ ಇವರಿಗೆ “ಎ’ ಗ್ರೇಡ್ ದೊರೆತಿದೆ. ಇತ್ತೀಚೆಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಿದ್ದ ಪೂಜಾ ಧಾಂಡ ಕೂಡ “ಎ’ ಗ್ರೇಡ್ ಪಡೆದಿದ್ದಾರೆ ಎಂದು ಡಬ್ಲ್ಯೂಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ತಿಳಿಸಿದ್ದಾರೆ. ನ.15ರಿಂದ ಪರಿಷ್ಕೃತ ಕೇಂದ್ರೀಯ ವೇತನ ಅನ್ವಯವಾಗಲಿದೆ ಎಂದು ಸಿಂಗ್ ಪ್ರಕಟಿಸಿದ್ದಾರೆ.
ಸುಶೀಲ್, ಸಾಕ್ಷಿಗೆ “ಬಿ’ ಗ್ರೇಡ್: ವರ್ಷಕ್ಕೆ ಒಂದು ಸಲ ಪರಿಷ್ಕೃತ ವೇತನ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಬಿಸಿಸಿಐ ಹೊರತು ಪಡಿಸಿದಂತೆ ಆಟಗಾರರಿಗೆ ವೇತನ ಗ್ರೇಡ್ ನೀಡುವ ಮತ್ತೂಂದು ಸಂಸ್ಥೆ ಇದ್ದರೆ ಅದು ಭಾರತೀಯ ಕುಸ್ತಿ ಒಕ್ಕೂಟ ಮಾತ್ರ. ವರ್ಷದ ಸಾಧನೆ ಆಧಾರದಲ್ಲಿ ಕುಸ್ತಿ ಪಟುಗಳಿಗೆ ಡಬ್ಲ್ಯೂಎಫ್ಐ ಗ್ರೇಡ್ ಪ್ರಕಟಿಸುತ್ತದೆ. ಎರಡು ಒಲಿಂಪಿಕ್ಸ್ ಪದಕ ವಿಜೇತ, ಅನುಭವಿ ಕುಸ್ತಿ ತಾರೆ ಸುಶೀಲ್ ಕುಮಾರ್ ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್ “ಎ’ ಗ್ರೇಡ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಪ್ರಸ್ತುತ “ಬಿ’ ಗ್ರೇಡ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಾಗಿ ಅವರಿಬ್ಬರು ಕ್ರಮವಾಗಿ 2019ರಲ್ಲಿ 20 ಲಕ್ಷ ರೂ. ಪಡೆಯಲಿದ್ದಾರೆ. ಸುಶೀಲ್, ಸಾಕ್ಷಿ ಕ್ರಮವಾಗಿ ಫಾರ್ಮ್ ಕಳೆದುಕೊಂಡಿದ್ದಾರೆ. ಡಬ್ಲ್ಯೂಎಫ್ಐ ಗೆ ವಿನೇಶ್ ಪೋಗಾಟ್ ಧನ್ಯವಾದ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಾಧಿಸಲು ಪ್ರೇರಣೆ ನೀಡಿದಂತಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ಮತ್ತೋರ್ವ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್, ಅಗ್ರ ಗ್ರೇಡ್‌ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇತ್ತು. ತಪ್ಪಿದ್ದಕ್ಕೆ ಬೇಸರವಾಗಿದೆ ಎಂದಿದ್ದಾರೆ.
“ಸಿ’ ಗ್ರೇಡ್‌ನಲ್ಲಿ ಸ್ಥಾನ ಪಡೆದವರು 10 ಲಕ್ಷ ರೂ., “ಡಿ’ ಗ್ರೇಡ್‌ನಲ್ಲಿ ಸ್ಥಾನ ಪಡೆದುಕೊಂಡವರು 5 ಲಕ್ಷ ರೂ., “ಇ’ ಗ್ರೇಡ್‌ನಲ್ಲಿ ಸ್ಥಾನ ಪಡೆದ ಕುಸ್ತಿ ಪಟುಗಳು 3 ಲಕ್ಷ ರೂ., “ಎಫ್” ಗುಂಪಿನಲ್ಲಿ ಸ್ಥಾನ ಪಡೆದವರು 1.20 ಲಕ್ಷ ರೂ., ಹಾಗೂ “ಎಚ್’ ಗ್ರೇಡ್ ನಲ್ಲಿ ಸ್ಥಾನ ಪಡೆವರು 60 ಸಾವಿರ ರೂ. ಅನ್ನು ಕ್ರಮವಾಗಿ ಪಡೆಯಲಿದ್ದಾರೆ ಎಂದು ಡಬ್ಲ್ಯೂಎಫ್ಐ ತಿಳಿಸಿದೆ.