ಬಜಪೆ: ಕಳೆದ 51ದಿನಗಳಿಂದ ಬಜಪೆ ಪೇಟೆಯಲ್ಲಿ ನಡೆಯುವ ರಸ್ತೆ ಕಾಂಕ್ರೀಟ್ ಕಾಮಗಾರಿಗೆಂದು ಬ್ಯಾರಿಕೇಡ್ ಹಾಕಿ ಬಜಪೆ ಪೇಟೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಇದರಿಂದ ಬಜಪೆ ಪೇಟೆಯಲ್ಲಿ ವ್ಯಾಪಾರ ವಹಿವಾಟುಗಳು ಕೊಂಚ ಸ್ಥಬ್ದವಾಗಿತ್ತು. ಸೋಮವಾರ ಲಘುವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟ ಕಾರಣ ಬಜಪೆ ಪೇಟೆಯ ವ್ಯಾಪಾರಿಗಳಲ್ಲಿ ಕೊಂಚ ಮಂದಹಾಸ ಮೂಡಿದೆ. ಅಷ್ಟಮಿ ಖರೀದಿ, ಸೋಮವಾರ ಸಂತೆಯಲ್ಲಿ ಹೆಚ್ಚಿನ ವಹಿವಾಟುಗಳು ನಡೆದಿವೆ
ಬಜಪೆ ಪೇಟೆಯಲ್ಲಿ ಕಳೆದ 51 ದಿನಗಳಲ್ಲಿ ವ್ಯಾಪಾರಿಗಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ರಸ್ತೆ ಅಭಿವೃದ್ಧಿಯ ಹಿತದೃಷ್ಟಿಯಿಂದ ಬೇಗನೆ ಕಾಮಗಾರಿಗಳು ಮುಗಿಯಲಿ ಎಂದು ಸಮಸ್ಯೆಯನ್ನು ನುಂಗಿಕೊಂಡು ಕಾಮಗಾರಿಯ ಕಾರ್ಯಕ್ಕೆ ಸ್ಪಂದನೆ ನೀಡುತ್ತಿದ್ದರು. ಅಂಗಡಿ, ಹೊಟೇಲ್‌ಗಳು ತೆರೆದಿದ್ದರು ಜನರಿಲ್ಲದೇ, ವಾಹನಗಳ ಸಂಚಾರ ಸಮರ್ಪಕವಾಗಿ ಇಲ್ಲದ ಕಾರಣ ಅಂಗಡಿಗಳಿಗೆ ಬರಲು ಸಾಧ್ಯವಿಲ್ಲದೇ ವ್ಯಾಪಾರಿಗಳು ತೊಂದರೆ ಅನುಭವಿಸಿದ್ದರು. ಹಾಲಿನ ವಾಹನಗಳು ಬಾರದೇ ದೂರದಿಂದ ಹೊತ್ತುಕೊಂಡು ಅಂಗಡಿಗಳಿಗೆ ತರಬೇಕಾಗಿತ್ತು. ಗ್ಯಾಸ್ ಸಿಲಿಂಡರ್‌ಗಳನ್ನು ಕೂಡ ಹೊತ್ತು ತರಬೇಕಾಯಿತು. ಪೇಟೆಯಲ್ಲಿರುವ ಮನೆಗಳಿಗೆ ಅಗತ್ಯ ವಸ್ತುಗಳಿಗೆ ತರಲು ಕೂಡ ತೊಂದರೆಯಾಗಿತ್ತು.
ಒಂದು ಬದಿಯಿಂದ ಮಾತ್ರ ವಾಹನ ಸಂಚಾರಕ್ಕೆ ಸೋಮವಾರ ಅನುವು ಮಾಡಿಕೊಡಲಾಗಿದೆ. ಇನ್ನೂ ಕಾಂಕ್ರೀಟ್ ಕಾಮಗಾರಿಗಳು ಪೂರ್ಣ ಮುಗಿದಿಲ್ಲ ಒಂದೆಡೆಯಾದರೆ, ಇನ್ನೆಷ್ಟು ದಿನ ಕಾಯಬೇಕು ಎಂದು ಸಾರ್ವಜನಿಕರ ಆಳಲು. ಈಗಾಗಲೇ ಸುಮಾರು 51ದಿನಗಳು ಮುಗಿದಿವೆ. ಘನ ವಾಹನಗಳ ಸಂಚಾರಕ್ಕೆ ಇನ್ನು 5 ದಿನ ಕಾಯಬೇಕಾಗಿದೆ. ಬಸ್ ನಿಲ್ದಾಣ ಬಳಿ ಕಾಂಕ್ರೀಟ್ ಕಾಮಗಾರಿ ಮುಗಿಯದ ಕಾರಣ ಪೂರ್ಣ ಪ್ರಮಾಣದ ಸಂಚಾರ ಸಾಧ್ಯವಿಲ್ಲ.
ಬಜಪೆ ಪೇಟೆ ಸೋಮವಾರ ಸಂತೆ, ಅಷ್ಟಮಿಯ ಮೆರಗು ವಾಹನ ಸಂಚಾರ ತೆರವು ಸೋಮವಾರ ಸಂತೆ, ಅಷ್ಟಮಿ ವ್ಯಾಪಾರಕ್ಕೂ ಉತ್ತೇಜನ ನೀಡಿತು.
ಬಜಪೆ ಸಂತೆಯಲ್ಲಿ ಅಷ್ಟಮಿಯ ಸಂದರ್ಭದಲ್ಲಿ ಹರಿವೆ ದಂಟು, ಮೂಡೆ, ಬೆಂಡೆ ಜನರು ಹೆಚ್ಚಾಗಿ ಕೊಂಡು ಹೋಗುವುದು ಮಾಮೂಲು. ಹರಿವೆ ಕಟ್ಟು ಒಂದಕ್ಕೆ 70 ರೂ., ಮೂಡೆ ನಾಲ್ಕಕ್ಕೆ 100 ರೂ., ಬೆಂಡೆ ಕೆ.ಜಿಗೆ 160 ರೂ., ಅಂಬೆಟೆ ಕೆ.ಜಿಗೆ 130 ರೂ., ಸುವರ್ಣ ಗಡ್ಡೆಗೂ 100 ರೂ. ಮಾರಾಟವಾಗಿದೆ.
ಗೆಣಸು 100 ರೂ.ದಾಖಲೆ ದರದೊಂದಿಗೆ ಮಾರಾಟವಾಗಿದೆ. ಬೆಂಡೆಗೆ ರವಿವಾರ ಕೆ.ಜಿಗೆ 250 ರೂ. ಇತ್ತು.ಸೋಮವಾರ ದರ ಕಡಿಮೆಯಾಗಿದೆ. ಹರಿವೆ ಮಳೆ ಜಾಸ್ತಿಯಾದ ಕಾರಣ ಕೀಟಗಳ ಬಾಧೆಯಿಂದ ಕೃಷಿಕರು ನಷ್ಟ ಅನುಭವಿಸಿದ್ದು ಬೇಡಿಕೆಯಷ್ಟು ಹರಿವೆ ಸಿಗದೇ ದರದಲ್ಲಿ ಏರಿಕೆಯಾಗಿದೆ. ನಗರದಲ್ಲಿ ನೂರು ರೂಪಾಯಿವರೆಗೂ ಮುಟ್ಟಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.