ಬಜಪೆ: ವಿವಿಧ ದೇಗುಲಗಳಿಗೆ ಗುಂಪಾಗಿ ಭೇಟಿ ನೀಡಿ ಭಕ್ತರ ಮೊಬೈಲ್, ಪರ್ಸ್‌ಗಳನ್ನು ಎಗರಿಸುತ್ತಿದ್ದ 6 ಮಂದಿಯನ್ನು ಬಂಧಿಸಿರುವ ಪೊಲೀಸರು, ಅವರಿಂದ 7 ಮೊಬೈಲ್, ನಗದು ಮತ್ತು ಅವರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಜ. 12ರಂದು ಕಟೀಲು ದೇಗುಲಕ್ಕೆ ಬಂದಿದ್ದ ತಂಡ ಯಶೋದಾ ಗೌಡ ಅವರ ಹ್ಯಾಂಡ್ ಬ್ಯಾಗ್ ಎಳೆದು ಪರಾರಿಯಾಗಿದ್ದರು. ಈ ಕುರಿತು ಅವರು ಬಜಪೆ ಠಾಣೆಗೆ ದೂರು ನೀಡಿದ್ದರು. ಆರೋಪಿಗಳು ತೂಫಾನ್ ವಾಹನದಲ್ಲಿ ಸಂಚರಿಸಿದ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲೆಡೆಗೆ ವಾಹನದ ಸಂಖ್ಯೆ ರವಾನಿಸಿ ನಿಗಾ ಇರಿಸಲು ಸೂಚಿಸಿದ್ದರು.
ಜ. 13ರಂದು ಅಪರಾಹ್ನ 3 ಗಂಟೆಯ ವೇಳೆಗೆ ಆರೋಪಿಗಳು ಪೊಳಲಿ ದೇವಸ್ಥಾನದ ಕಡೆ ಹೋಗುತ್ತಿರುವ ಖಚಿತ ಮಾಹಿತಿ ಲಭಿಸಿದ್ದು, ಅಡೂxರು ಚೆಕ್ ಪೋಸ್ಟ್ ಬಳಿ ಬ್ಯಾರಿಕೇಡ್ ಹಾಕಿ ವಾಹನವನ್ನು ತಡೆಯಲಾಯಿತು. ಆರಂಭದಲ್ಲಿ ಸಮರ್ಪಕ ಉತ್ತರ ನೀಡದ ಅವರನ್ನು ಕೂಲಂಕಷ ತನಿಖೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಅನಂತರ ಆರೋಪಿಗಳಾದ ಗದಗ ಕಾಮರ್ಸ್ ಕಾಲೇಜು ಬಳಿಯ ಯಮನವ್ವ ಮುತ್ತಪ್ಪ ಛಲವಾದಿ (55), ಗದಗ ಗಂಗರಪುರ ಪೇಟೆಯ ಪ್ರಕಾಶ್‌ಚೆನ್ನಪ್ಪ ಹೊಳೆಯ ಮೆಣಸಿಗೆ (26), ಗದಗ ಕೃಷ್ಣಗುಡ್ಡಿ ಬಳಿಯ ಶೋಭಾ ಮುಟ್ಟಗಾರ (40), ಕುಮಾರಮ್ಮ ಮಾರುತಿ ಮುಟ್ಟಗಾರ (45), ಗದಗ ಸೆಟ್ಲಮೆಂಟ್ ಏರಿಯಾದ ಶಾಂತಮ್ಮ ಮೆಟಗಾರ್ (55), ಹುಬ್ಬಳಿ ಹಲ್ಯಾಳದ ಚಂದ್ರಶೇಖರ್ ಶಿವರೆಡ್ಡೆಪ್ಪ ಕರಮುಡಿ (49) ಅವರನ್ನು ಬಂಧಿಸಲಾಯಿತು.
ಆರೋಪಿಗಳಿಂದ 75 ಸಾವಿರ ರೂ. ಮೌಲ್ಯದ 7 ಮೊಬೈಲ್, 21,540 ರೂಪಾಯಿ ಮತ್ತು ಕೃತ್ಯಕ್ಕೆ ಬಳಸಿದ 6 ಲಕ್ಷ ರೂ. ಮೌಲ್ಯದ ವಾಹನ ಸಹಿತ ಒಟ್ಟು 7 ಲಕ್ಷ ರೂ. ಸೊತ್ತು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಇಡಗುಂಜಿ, ಮುಡೇìಶ್ವರ, ಗೋಕರ್ಣ, ಶೃಂಗೇರಿ, ಕೊಲ್ಲೂರು ಸಹಿತ ವಿವಿಧ ದೇಗುಲಗಳ ಪರಿಸರದಲ್ಲಿ ಪಿಕ್‌ಪಾಕೆಟ್ ನಡೆಸಿರುವುದು ಗೊತ್ತಾಗಿದೆ.