Advertisement
ಸಾಮಾನ್ಯವಾಗಿ ಡಿಸೆಂಬರ್ ಆರಂಭದಿಂದಲೇ ತರಕಾರಿ ಬೀಜ ಬಿತ್ತನೆ ಆರಂಭವಾಗುತ್ತದೆ. ಈ ಬಾರಿ ಮಳೆ ಬಂದು ಕೊಚ್ಚಿ ಹೋಗಿದೆ. ಜತೆಗೆ ಇನ್ನೊಮ್ಮೆ ಬಿತ್ತನೆ ಮಾಡಲು ಮಣ್ಣಿನ ತೇವಾಂಶ ಕಡಿಮೆಯಾಗಲೇಬೇಕು. ಹೀಗಾಗಿ ಸರಿಯಾದ ಸಮಯಕ್ಕೆ ಕೃಷಿಕರು ಕಾಯುತ್ತಿದ್ದರು. ಮುಖ್ಯವಾಗಿ ಸೌತೆ ಕಾಯಿಗೆ ಗದ್ದೆಗಳಲ್ಲಿ ಸಾಲು ತೆಗೆದು ಬಿತ್ತನೆ ಮಾಡಲು ಈಗ ಸೂಕ್ತ ಸಮಯ. ಶಿವರಾತ್ರಿ ಹೊತ್ತಿಗೆ ಸೌತೆ ಬೆಳೆದು ನಿಲ್ಲಬೇಕು. ಆದರೆ, ಈ ಬಾರಿ ಬಿತ್ತನೆ ಪ್ರಕ್ರಿಯೆ ಜೋರಾಗಿ ನಡೆದಿಲ್ಲ.
ಸೌತೆ ಕಾಯಿ ಬೇಗನೆ ಬೆಳೆದರೆ ಅದಕ್ಕೆ ಹೆಚ್ಚು ಧಾರಣೆ ದೊರೆಯುತ್ತದೆ. ಮಾರ್ಚ್ ಬಂದರೆ ಎಲ್ಲ ಕಡೆಗಳಲ್ಲಿ ಸೌತೆ ಕಾಯಿ ಬೆಳೆದು ನಿಲ್ಲುತ್ತದೆ. ಆಗ ಧಾರಣೆ ತುಂಬ ಕಡಿಮೆ. ಕಳೆದ ಬಾರಿ ಮಾರ್ಚ್ನಲ್ಲಿ ಮಾರಾಟ ಮಾಡಿದವರಿಗೆ ಕೆಜಿಗೆ ಕೇವಲ 20 ರೂ. ಸಿಕ್ಕಿತ್ತು. ಬಳಿಕ ಧಾರಣೆ ಏರಿಕೆ ಕಂಡಿದ್ದರಿಂದ ಕೃಷಿಕರು ಬೇಸರಗೊಂಡಿದ್ದರು. ಬೆಳೆಗಾರರ ಸಂಖ್ಯೆ ಕುಸಿತ
ಈ ನಡುವೆ, ತಾಲೂಕಿನಲ್ಲಿ ಸೌತೆಕಾಯಿ ಬೆಳೆಯುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹಿಂದೆ ಗದ್ದೆಗಳ ಬಹುಭಾಗ ಸೌತೆ ಬಳ್ಳಿಗಳಿರುತ್ತಿದ್ದವು. ಈಗ ಕೆಲವೇ ಸಾಲುಗಳಿಗೆ ಸೀಮಿತವಾಗಿದೆ. ಕೃಷಿಕರಲ್ಲದವರೂ ಮನೆಗಾಗಿ ಒಂದೆರಡು ಸಾಲು ಸೌತೆ ಕಾಯಿ ಬೆಳೆಸುತ್ತಿದ್ದರು. ಈಗ ಅದೂ ಕಡಿಮೆಯಾಗಿದೆ.
Related Articles
ಕಳೆದ ಕೆಲವು ವರ್ಷಗಳಿಂದ ಬಿತ್ತಿದ ಬೀಜಗಳಿಗೆ ಇರುವೆ ಮತ್ತು ಪಕ್ಷಿಗಳ ಕಾಟ ಹೆಚ್ಚಾಗಿದೆ. ಅದರಲ್ಲೂ ಈ ಬಾರಿ ಇರುವೆ ಕಾಟವಂತೂ ವಿಪರೀತವಾಗಿರುವುದರಿಂದ ಕೃಷಿಕರು ನೇರವಾಗಿ ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸೌತೆ ಕಾಯಿ ಮತ್ತು ಈ ಸಂದರ್ಭದಲ್ಲಿ ಬಿತ್ತನೆ ಮಾಡುವ ತರಕಾರಿ ಬೀಜಗಳನ್ನು ಟ್ರೇನಲ್ಲಿ ಬಿತ್ತಿ, ಅಲ್ಲೇ ಜತನದಿಂದ ಬೆಳೆಸಿ, ಚೆನ್ನಾಗಿ ಬೆಳೆದ ಬಳಿಕವೇ ನಾಟಿ ಮಾಡಲಾಗುತ್ತದೆ. ತರಕಾರಿ ಬೀಜಗಳನ್ನು ನವಿಲು ಹುಡುಕಿ ಹುಡುಕಿ ತಿನ್ನುತ್ತದೆ. ಇನ್ನು ಕೆಲವು ಸಂದರ್ಭದಲ್ಲಿ ಬಿತ್ತಿದ ಬೀಜ ಮೊಳಕೆ ಒಡೆಯುವುದಿಲ್ಲ. ಹೀಗಾಗಿ ಸಾಲುಗಳಲ್ಲಿ ಜಾಗ ವ್ಯರ್ಥವಾಗುತ್ತದೆ. ಹೀಗಾಗಿ ಸ್ವಲ್ಪ ಬೆಳೆದ ಸಸಿಗಳನ್ನೇ ನಾಟಿ ಮಾಡಲಾಗುತ್ತದೆ.
Advertisement
ಸೌತೆ ಖರೀದಿ ದರ: ಯಾವಾಗ ಎಷ್ಟು?(ಕಳೆದ ವರ್ಷದ ಅಂದಾಜಿನಂತೆ)
ಫೆಬವರಿ: ಕೆ.ಜಿ.ಗೆ 30 ರೂ.
ಮಾರ್ಚ್: 20ರಿಂದ 25 ರೂ.
ಏಪ್ರಿಲ್ ಅಂತ್ಯ: 40 ರೂ.
ಮೇ: 45ರಿಂದ 60 ರೂ.
ಜೂನ್ ಆರಂಭ: 70 ರೂ.
ಜೂನ್ ಅಂತ್ಯ: 75 ರೂ.
ಜುಲೈ : 35ರಿಂದ 40 ರೂ.
ಆಗಸ್ಟ್: 30ರಿಂದ 35ರೂ.
ಸೆಪ್ಟಂಬರ್: 30ರಿಂದ 40 ರೂ.
ಅಕ್ಟೋಬರ್, ನವಂಬರ್: 30 ರೂ.
ಡಿಸೆಂಬರ್: 20ರಿಂದ ಈಗ 40 ರೂ. -ಸುಬ್ರಾಯ ನಾಯಕ್ ಎಕ್ಕಾರು