Advertisement

Bajpe: ಪಂಚ ಭಾಷೆಗಳಲ್ಲಿ ಎಕ್ಕಾರು ಶಾಲಾ ವಾರ್ತೆಗಳು

02:07 PM Jan 01, 2025 | Team Udayavani |

ಬಜಪೆ: ಈ ಶಾಲೆಯ ಮಕ್ಕಳು ನುರಿತ ನಿರೂಪಕರಂತೆ ವರದಿಯನ್ನು ಪ್ರಸ್ತುತಪಡಿಸುತ್ತಾರೆ. ವರದಿಗೆ ಪೂರಕವಾಗಿ ದೃಶ್ಯಗಳು ಪರದೆಯಲ್ಲಿ ಮೂಡಿ ಬರುತ್ತವೆ. ವರದಿಗೆ ಸಂಬಂಧಿಸಿದ ಶೀರ್ಷಿಕೆಗಳು, ಉಪಶೀರ್ಷಿಕೆಗಳು, ಹಿನ್ನೆಲೆ ಸಂಗೀತಗಳೆಲ್ಲವೂ ಮಿಳಿತವಾಗಿ ಅದೊಂದು ವೃತ್ತಿತರ ಟಿವಿ ಚಾನೆಲ್‌ನ ನ್ಯೂಸ್‌ ಬುಲೆಟಿನ್‌ಗೆ ಹತ್ತಿರವಾಗಿ ಗಮನ ಸೆಳೆಯುತ್ತದೆ.

Advertisement

ಇದು ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣ ಗೊಂಡು, ಮೂಡಿಬರುತ್ತಿರುವ ‘ಶಾಲಾ ವಾರ್ತೆಗಳು’ ಎಂಬ ನ್ಯೂಸ್‌ ಬುಲೆಟಿನ್‌ನ ಸ್ಟೋರಿ. ಅಚ್ಚರಿ ಎಂದರೆ, ಈ ಶಾಲೆಯಲ್ಲಿ ಒಂದಲ್ಲ, ಎರಡಲ್ಲ, ಮೂರಲ್ಲ.. ಐದು ಭಾಷೆಗಳಲ್ಲಿ ನ್ಯೂಸ್‌ ಬುಲೆಟಿನ್‌ಗಳು ಸಿದ್ಧವಾಗುತ್ತಿವೆ. ಶಾಲೆಯಲ್ಲಿ ನಡೆಯುವ ಕಾರ್ಯಕ್ರಮ, ಶಾಲೆಯ ವಿದ್ಯಾರ್ಥಿಗಳ ಸಾಧನೆಗಳನ್ನು ಅತ್ಯಂತ ಸುಂದರವಾಗಿ ಬುಲೆಟಿನ್‌ ಆಗಿ ಪ್ರಸ್ತುತಪಡಿಸಲಾಗುತ್ತಿದೆ.

ಜೂನ್‌ ಮತ್ತು ಜುಲಾಯಿ ತಿಂಗಳಿನಲ್ಲಿ ಕನ್ನಡ ಭಾಷೆ, ಆಗಸ್ಟ್‌ ನಲ್ಲಿ ಇಂಗ್ಲಿಷ್‌ ಭಾಷೆ, ಸೆಪ್ಟೆಂಬರ್‌ ನಲ್ಲಿ ಹಿಂದಿ ಭಾಷೆ, ಅಕ್ಟೋಬರ್‌ನಲ್ಲಿ ಕೊಂಕಣಿ, ನವೆಂಬರ್‌ ನಲ್ಲಿ ತುಳು ಭಾಷೆ ಹೀಗೆ ಸ್ಥಳೀಯ ಭಾಷೆಗಳಿಗೂ ಆದ್ಯತೆ ನೀಡಿ ಪಂಚ ಭಾಷೆಗಳಲ್ಲಿ ಶಾಲಾ ವಾರ್ತೆಗಳು ಈಗಾಗಲೇ ಪ್ರಸಾರವಾಗಿದೆ.

ಆಧುನಿಕ ತಂತ್ರಜ್ಞಾನ ಗಳನ್ನು ಬಳಸಿಕೊಂಡು ನ್ಯೂಸ್‌ ರೂಮ್‌ ತೆರೆದು ನ್ಯೂಸ್‌ ಚಾನೆಲ್‌ ರೀತಿಯಲ್ಲೇ ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ. ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಎರಡೂ ಇರುವ ಶಾಲೆ ಇದಾಗಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ, ವರದಿ ತಯಾರಿ, ಎಡಿಟಿಂಗ್‌, ಪ್ರಸ್ತುತಿಯನ್ನು ಅದ್ಭುತವಾಗಿ ಕಲಿಸಿಕೊಟ್ಟಿದ್ದರ ಫ‌ಲ ಇದಾಗಿದೆ. ಶಾಲೆಯ ಶಿಕ್ಷಕ ಡಾ. ಅನಿತ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಈ ನ್ಯೂಸ್‌ ಬುಲೆಟಿನ್‌ಗಳು ಸಿದ್ಧವಾಗಿವೆ. ಶಾಲಾ ಮುಖ್ಯ ಶಿಕ್ಷಕರು ಮತ್ತು ಇತರ ಸಹ ಶಿಕ್ಷಕರ ಬೆಂಬಲದೊಂದಿಗೆ ಇದು ಮೂಡಿಬಂದಿದೆ.

Advertisement

ವಿದ್ಯಾರ್ಥಿಗಳ ಸಂಖ್ಯೆ
ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಹೊಂದಿರುವ ಹೈಸ್ಕೂಲಿನಲ್ಲಿ ಈಗ 132 ವಿದ್ಯಾರ್ಥಿಗಳಿದ್ದಾರೆ. 8ನೇ ತರಗತಿ-49, 9ನೇ-36 ಮತ್ತು 10ರಲ್ಲಿ 47 ಮಂದಿ ಇದ್ದಾರೆ.

ಕಾರ್ಯಕ್ರಮದ ಧನಾತ್ಮಕ ಅಂಶಗಳು
- ಆತ್ಮವಿಶ್ವಾಸ, ಮಾತನಾಡುವಿಕೆ, ಬರವಣಿಗೆಯಲ್ಲಿ ಈ ಮಕ್ಕಳು ತುಂಬ ಪಳಗಿದ್ದಾರೆ. ಸಭಾಕಂಪನ ಕಡಿಮೆಯಾಗಿದೆ.
- ಹಲವು ಮಕ್ಕಳು ಈ ಕ್ಷೇತ್ರವನ್ನೇ ಔದ್ಯೋಗಿಕ ಕ್ಷೇತ್ರವಾಗಿಯೂ ಗುರುತಿಸಿಕೊಳ್ಳುವ ಇರಾದೆಯನ್ನು ಹೊಂದಿದ್ದಾರೆ.
-  ಸದಾ ಹೊಸತನದ ತುಡಿತದಲ್ಲಿರುವ ಈ ಶಿಕ್ಷಕ ವೃಂದದ ನಿರಂತರ ಪ್ರಯತ್ನಗಳಿಗೆ ಮುಖ್ಯ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಬೆಂಬಲ ದೊರೆಯುತ್ತಿದೆ.
- ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಚಿಂತನೆಯ ನಿಟ್ಟಿನಲ್ಲಿ ಇದೊಂದು ಉತ್ತಮ ಕಾರ್ಯಕ್ರಮವಾಗಿ ಮೂಡಿದೆ.

ತಿಂಗಳ ಚಟುವಟಿಕೆಗಳ ವರದಿ
ಬೋಧನೆ ಮತ್ತು ಕಲಿಕೆಗೆ ಅಡ್ಡಿಯಾಗದಂತೆ ಈ ಚಟುವಟಿಕೆ ನಡೆದಿದೆ. ದೃಶ್ಯಗಳ ವಿಡಿಯೊಗ್ರಫಿ, ವಿಷಯಗಳ ಕ್ರೋಢೀಕರಣ, ಸ್ಕ್ರಿಪ್ಟ್, ವಾಯ್ಸ ಓವರ್‌ ಮತ್ತು ಸಂಕಲನ ಗಮನ ಸೆಳೆಯುತ್ತದೆ. ಪ್ರತೀ ತಿಂಗಳಿನಲ್ಲಿಯೂ ಶಾಲೆ ಮತ್ತು ವಿದ್ಯಾರ್ಥಿಗಳ ಸಾಧನೆಗಳು, ಶಿಕ್ಷಕರ ವಿಷಯ, ಸಂಭಾಷಣೆ, ಸಂದರ್ಶನಗಳನ್ನೊಳಗೊಂಡ ವಾರ್ತಾ ಸಂಚಯ ಇದು.

65 ವಿದ್ಯಾರ್ಥಿಗಳು ಭಾಗಿ
ಉತ್ಸಾಹಿ ಮೂರ್ನಾಲ್ಕು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ವಾರ್ತಾ ವಾಚಕರಾಗಿ ಪರದೆಯ ಮುಂಭಾಗದಲ್ಲಿ ಕಾಣಸಿಕೊಂಡರೆ, 10 ವಿದ್ಯಾರ್ಥಿಗಳು ಹಿನ್ನೆಲೆ ಧ್ವನಿ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ಆರು ಸಂಚಿಕೆಗಳಲ್ಲಿ 65 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶಾಲಾ ವಾರ್ತೆಗಳಿಗೆ ವಿಷಯ ಸಂಗ್ರಹ ಮಾಡುವ ಕೆಲಸವನ್ನು ಪಠ್ಯ ಚಟುವಟಿಕೆಯ ಒಂದು ಭಾಗವಾಗಿ ನೀಡಲಾಗುತ್ತಿದೆ.

ನಮ್ಮ ಶಾಲಾ ವಾರ್ತೆಗಳು ಪರಿಕಲ್ಪನೆಯಿಂದ ಶಾಲೆಗೆ ಉತ್ತಮ ಹೆಸರು ಬಂದಿರುವುದು ಖುಷಿ ತಂದಿದೆ. ಊರಿನಲ್ಲಿ, ಅಧಿಕಾರಿಗಳ ವಲಯದಲ್ಲಿ ಇರುವ ಉತ್ತಮ ಅಭಿಪ್ರಾಯದಿಂದ ಮುಂದಿನ ವರ್ಷ ಮಕ್ಕಳ ಸಂಖ್ಯೆ ಹೆಚ್ಚಬಹುದು ಎಂಬ ಆಶಯ ನಮ್ಮದು. ಡಾ. ಅನಿತ್‌ ಕುಮಾರ್‌ ಅವರು ಇದನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ.
-ಇಂದಿರಾ ಎನ್‌. ರಾವ್‌, ಮುಖ್ಯ ಶಿಕ್ಷಕರು

ಸರಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ಹೊಸ ದಾರಿಯಲ್ಲಿ ಯೋಚನೆ ಮಾಡುತ್ತಿರುವುದು ತುಂಬ ಚೇತೋಹಾರಿ ಸಂಗತಿ. ವಿದ್ಯಾರ್ಥಿಗಳ ಆತ್ಮವಿಶ್ವಾಸ ಹಾಗೂ ಶಿಕ್ಷಕರ ಪರಿಶ್ರಮ ಅಭಿನಂದನಾರ್ಹ.
-ಮೊಹಮ್ಮದ್‌ ರಿಯಾಜ್‌, ಅಧ್ಯಕ್ಷರು, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಬೆಂಗಳೂರು, ದ.ಕ. ಜಿಲ್ಲಾ ಘಟಕ

ಇತರ ಶಾಲೆಗಳು ಇಂತಹ ಮಾದರಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಎಲ್ಲ ಮಕ್ಕಳಲ್ಲಿ ಭಾಷಾ ಕೌಶಲ ಬೆಳೆಸಲು ಮುಂದಾಗಬಹುದು.
-ವೆಂಕಟೇಶ ಸುಬ್ರಾಯ ಪಟಗಾರ, ಉಪನಿರ್ದೇಶಕರು, ( ಆಡಳಿತ),ಶಾಲಾ ಶಿಕ್ಷಣ ಇಲಾಖೆ, ದ.ಕ.

ಬಡಗ ಎಕ್ಕಾರು ಹೈಸ್ಕೂಲ್‌ ವಿದ್ಯಾರ್ಥಿಗಳ. ವಾರ್ತಾ ವಾಚನ ನೋಡಿ ಸಂತಸವಾಗಿದೆ. ಅವರ ಸ್ಪಷ್ಟ ಅಭಿವ್ಯಕ್ತಿ ಹಾಗೂ ನುರಿತ ವಾರ್ತಾ ವಾಚಕರಂತೆ ಪ್ರಸ್ತುತ ಪಡಿಸುವ ಸಾಮರ್ಥ್ಯ ಅಭಿನಂದನೀಯ.
-ವಿದ್ಯಾ ಶೆಟ್ಟಿ, ಸಹಾಯಕ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಶಿಕ್ಷಣ ಕರ್ನಾಟಕ, ದ.ಕ.

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next