ಬಜಪೆ : ಬಜಪೆ ಪೇಟೆಯ ರಾಜ್ಯ ಹೆದ್ದಾರಿ 67ರ ಬಜಪೆ ಚರ್ಚ್ ಕಟ್ಟಡದ ಎದುರಲ್ಲಿ ನೀರು ನಿಂತು ಹಳ್ಳವೊಂದು ನಿರ್ಮಾಣವಾಗಿದೆ. ರಸ್ತೆಯ ಬದಿ ತಗ್ಗು ಪ್ರದೇಶವಾದ ಕಾರಣ ಮಳೆ ನೀರು ಸದಾ ನಿಲ್ಲುವುದು. ಇದು ಮಳೆಯ ನೀರೇ ಎಂದು ಪಾದಚಾರಿಗಳು ನಡೆ ದಾಡುತ್ತಿದ್ದಾರೆ.ಅದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅದು ಮಳೆಯ ಜತೆಗೆ ಬಂದ ಚರಂಡಿ ನೀರು ಎಂದು ತಿಳಿಯುತ್ತದೆ.
ಚರಂಡಿ ಬ್ಲಾಕ್
ಕಟೀಲು-ಬಜಪೆ ರಾಜ್ಯ ಹೆದ್ದಾರಿಯ ಹಾಗೂ ಬಜಪೆ -ಕೈಕಂಬ ರಾಜ್ಯ ಹೆದ್ದಾರಿ ಚರ್ಚ್ ಸರ್ಕಲ್‌ನಲ್ಲಿ ಸಂಪರ್ಕಿಸುತ್ತದೆ. ಬಜಪೆ ಪೇಟೆಯ ಚರಂಡಿಯಲ್ಲಿ ಮಳೆಯ ನೀರು ಜತೆ ಹೊಟೇಲ್ ಹಾಗೂ ಇತರ ಅಂಗಡಿಗಳ ನೀರು ಹರಿಯುತ್ತಿದ್ದು, ಚರಂಡಿ ಬ್ಲಾಕ್ ಆಗಿದೆ. ಇದರಿಂದ ಚರಂಡಿಯಲ್ಲಿ ನೀರು ತುಂಬಿ ಹೊರ ಚಿಮ್ಮಿತ್ತದೆ. ಇದು ನೇರವಾಗಿ ಪೇಟೆಯಲ್ಲಿರುವ ತಗ್ಗು ಪ್ರದೇಶಗಳಿಗೆ ಹೋಗುತ್ತಿದೆ. ಇದರಿಂದ ಚರ್ಚ್ ಕಟ್ಟಡದ ಸಮೀಪದ ಬಜಪೆ ಪೇಟೆಯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ನೀರು ನಿಂತು ಹಳ್ಳದಂತಾಗಿದೆ. ಸ್ಥಳೀಯಾಡಳಿತ ಶೀಘ್ರ ಇತ್ತ ಗಮನ ಹರಿಸಿ ಚರಂಡಿಯಲ್ಲಿರುವ ಹೂಳು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಬೇಕಾಗಿದೆ. ಪಾದಚಾರಿಗಳಿಗೆ, ಶಾಲಾ ಮಕ್ಕಳಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕು.
ಒರತೆಯಂತೆ ಚರಂಡಿಯಿಂದ ಚಿಮ್ಮುವ ಮಲಿನ ನೀರು
ಮಳೆಯ ನೀರಿನ ಜತೆಗೆ ಚರಂಡಿಯ ಕೊಳಚೆ ನೀರು ಚರಂಡಿಯ ರಂಧ್ರಗಳಿಂದ ಹೊರಚಿಮ್ಮುವಾಗ ನೀರಿನ ಒರತೆಯಂತೆ ಮೇಲೋಟಕ್ಕೆ ಸ್ವತ್ಛವಾಗಿ ಕಾಣುತ್ತದೆ.ಆದರೆ ಸ್ವಲ್ಪ ಮುಂದೆ ಹೋದರೆ ಕೊಳಚೆ ನೀರು ಶೇಖರಣೆಯಾಗುವುದನ್ನು ಗಮನಿಸಬಹುದು.