ಬಜಪೆ: ಮಳೆಗಾಲ ಆರಂಭವಾದಂತೆ ಮಂಗಳೂರು ವಿಮಾನ ನಿಲ್ದಾಣದ ಸುತ್ತ ಗುಡ್ಡಗಳು ಜರಿಯುತ್ತಿವೆ. ಗುಡ್ಡ ಜರಿದು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೂ ತೊಂದರೆ ಯಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಬಿದ್ದ ಮಳೆನೀರನ್ನು ಕೂಡ ಒಂದೆಡೆ ಹರಿಯಬಿಡುವ ಕಾರಣ ಈಗಾಗಲೇ ಕೆಲವೆಡೆ ಅನಾಹುತಗಳಾಗಿವೆ. ವಿಮಾನ ನಿಲ್ದಾಣದ ಸುರಕ್ಷೆ ದೃಷ್ಟಿಯಿಂದ ಪ್ರಾಧಿಕಾರ ಹೆಚ್ಚೆತ್ತುಕೊಳ್ಳುವ ಅಗತ್ಯವಿದೆ. ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಶೀಘ್ರ ಹೆಜ್ಜೆ ಇಡಬೇಕಾಗಿದೆ.
ಅದ್ಯಪಾಡಿ, ಕೊಳಂಬೆಯಲ್ಲಿ ಗುಡ್ಡ ಜರಿತ
ಈ ವರ್ಷದ ಮಳೆಗೂ ಕೊಳಂಬೆ ವಿಟ್ಲಬೆಟ್ಟು ಪ್ರದೇಶದಲ್ಲಿ, ಅದ್ಯಪಾಡಿ ಸಂಕೇಶ ಪ್ರದೇಶ ಹಾಗೂ ಇತರೆಡೆ ಗುಡ್ಡ ಜರಿತವಾಗಿದೆ. ತಡೆಗೋಡೆಗಳು ನಿರ್ಮಾಣ ಕಾರ್ಯವೂ ಎರಡು ಕಡೆ ನಡೆದಿದೆ.
ಕೊಳಂಬೆ, ಅದ್ಯಪಾಡಿ ಗುಡ್ಡಗಳ ಭೂಸ್ವಾಧೀನ ಅಗತ್ಯ
ಕೊಳಂಬೆ, ಅದ್ಯಪಾಡಿಯಲ್ಲಿ ರನ್ ವೇಗೆ ತಾಗಿಕೊಂಡು ಗುಡ್ಡಗಳಿವೆ. ಇದು ಖಾಸಗಿ ಜಾಗವಾಗಿದ್ದು, ಇಲ್ಲಿ ಯಾವುದೇ ಅಭಿವೃದ್ಧಿಗೆ ಅನುಮತಿ ಇಲ್ಲ. ಖಾಸಗಿ ಜಾಗದವರಿಗೆ ಏನೂ ಮಾಡದ ಪರಿಸ್ಥಿತಿ. ಅದ್ಯಪಾಡಿ ಪದವು ಪ್ರದೇಶವನ್ನು ಬಿಟ್ಟು ಇತರೆಡೆ ಮನೆ ಇಲ್ಲದ ಪ್ರದೇಶಗಳನ್ನು ಭೂಸ್ವಾಧೀನ ಮಾಡಿದಲ್ಲಿ. ವಿಮಾನ ನಿಲ್ದಾಣ, ರನ್‌ವೇಯ ಸುತ್ತ ಗುಡ್ಡಗಳಿಗೆ ಸುರಕ್ಷೆ ದೃಷ್ಟಿಯಿಂದ ತಡೆಗೋಡೆಗಳನ್ನು ನಿರ್ಮಿಸಬಹುದಾಗಿದೆ.
ಪ್ರತೀ ವರ್ಷ ಮಳೆಗಾಲದಲ್ಲಿ ಕೊಳಂಬೆ, ಅದ್ಯಪಾಡಿ ಗುಡ್ಡ ಪ್ರದೇಶ ತಪ್ಪಲಲ್ಲಿರುವ ಮನೆಯವರು ಯಾ ವಾಗ ಗುಡ್ಡ ಕುಸಿತವಾಗುತ್ತದೋ, ಮಳೆ ನೀರು ನಮ್ಮ ಕಡೆಗೆ ಬರುತ್ತದೋ ಎಂಬ ಭಯದಲ್ಲಿರುತ್ತಾರೆ.
ವಿಮಾನ ನಿಲ್ದಾಣದ ಗುಡ್ಡ ನೀರನ್ನು ಕಾಂಕ್ರೀಟ್ ಅಳವಡಿಸಿದ ಕೊಳವೆ ಅಥವಾ ಕಾಲುವೆಗಳ ಮೂಲಕ ವಿಂಗಡಿಸಿ ವಿವಿಧೆಡೆ ಹರಿಯ ಬಿಡುವುದರಿಂದ ಗುಡ್ಡ ಜರಿಯುವುದನ್ನು ತಡೆಯಬಹುದು. ಇದೀಗ ವಿಮಾನ ನಿಲ್ದಾಣದ ಗುಡ್ಡದ ನೀರನ್ನು ಒಂದೇ ಬದಿಯಲ್ಲಿ ಹರಿಯಬಿಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ತಡೆಗೋಡೆ ನಿರ್ಮಿಸಿದರೆ ವಿಮಾನ ನಿಲ್ದಾಣಕ್ಕೆ ಚಿರತೆ, ಹುಲಿ, ಕಾಡು ಕೋಣ ಕಾಟ ಕಡಿಮೆಯಾಗಲಿದೆ. ವಿಮಾನ ನಿಲ್ದಾಣದ ಸುರಕ್ಷಾ ದೃಷ್ಟಿಯಿಂದ ತುರ್ತು ಕಾರ್ಯ ಮಾಡಬೇಕಾಗಿದೆ. ಇದರ ಜತೆಗೆ ಕೊಳಂಬೆ, ಅದ್ಯಪಾಡಿ ಅಲ್ಲಿನ ಮನೆಗಳ ಹಿತವನ್ನು ಕಾಪಾಡಬೇಕಾಗಿದೆ.
2 ವರ್ಷಗಳ ಹಿಂದೆ ಹಾನಿ
ಕರಂಬಾರು, ಕೊಳಂಬೆ ವಿಟ್ಲಬೆಟ್ಟು ಪ್ರದೇಶದಲ್ಲಿ ವಿಮಾನ ನಿಲ್ದಾಣದ ರನ್ ವೇ ನೀರು ಬಂದು ಎರಡು ವರ್ಷಗಳ ಹಿಂದೆ ಮನೆಗಳಿಗೆ ಹಾನಿಯಾಗುತ್ತು. ಅದ್ಯಪಾಡಿ ಪದವಿನಲ್ಲಿ ಈ ಬಾರಿ ರಸ್ತೆಗೆ ಹಾನಿಯಾಗಿ ವಾಹನ ಸಂಚಾರ ಕಡಿತಕ್ಕೆ ಕಾರಣವಾಗಿತ್ತು. ಇದಕ್ಕೆ ಕಾರಣ ರನ್ ವೇ ನೀರು ಒಂದೆಡೆ ಬಿಟ್ಟಿರುವುದು.
ರಸ್ತೆ ವಿಸ್ತರಣೆ ಅಗತ್ಯ
ವಿಮಾನ ನಿಲ್ದಾಣದ ಗುಡ್ಡಗಳನ್ನು ಭೂಸ್ವಾಧೀನ ಮಾಡಿದ್ದಲ್ಲಿ ಕೆಳಗಡೆ ಇರುವ ಪ್ರದೇಶಗಳ ರಸ್ತೆ ವಿಸ್ತರಿಸಲು ಅನುಕೂಲವಾಗುತ್ತದೆ. ಕರಂಬಾರು ಪ್ರದೇಶದಲ್ಲಿ ಈಗಾಗಲೇ ರಾಜಕಾಲುವೆ ನಿರ್ಮಿಸಿದಂತೆ, ಕೊಳಂಬೆ, ಅದ್ಯಪಾಡಿ ಪ್ರದೇಶದಲ್ಲಿ ವಿಮಾನ ನಿಲ್ದಾಣದ ಗುಡ್ಡದಿಂದ ಬರುವ ಮಳೆ ನೀರು ಹರಿಯಲು ಕಾಂಕ್ರೀಟ್ ಅಳವಡಿಸಿದ ರಾಜ ಕಾಲುವೆಗಳ ನಿರ್ಮಾಣ ಮಾಡಬೇಕು. ಇದರಿಂದ ಗುಡ್ಡ ಕುಸಿತವೂ ತಡೆಯಬಹುದು. ಮಳೆ ನೀರು ಹರಿದು ಗುಡ್ಡದ ಕೆಳಗಿನ ಪ್ರದೇಶಗಳಿಗೆ ಹಾನಿಯಾಗುವುದನ್ನು ನಿಯಂತ್ರಿಸಬಹುದು. ರಾಜ ಕಾಲುವೆ ನೀರನ್ನು ನೇರವಾಗಿ ಗುರುಪುರ ನದಿ ಸೇರುವಂತೆ ಮಾಡಬೇಕಾಗಿದೆ.
-ಸುಬ್ರಾಯ್ ನಾಯಕ್ ಎಕ್ಕಾರು